ಜಾತಿ ವ್ಯವಸ್ಥೆ, ಆದರ್ಶವಾದ, ವರ್ಗ, ಅಂತಸ್ತು, ಸಂಪ್ರದಾಯದ ಚೌಕಟ್ಟಿನೊಳಗೆ ನಡೆಯುವ ನೈತಿಕ, ಅನೈತಿಕ ಜಟಾಪಟಿಯ ನಡುವೆ ನಡೆಯುವ ಕಥೆ ಅಂಕುರ್ ಸಿನಿಮಾದ್ದು. ಜಾತಿ ವ್ಯವಸ್ಥೆಯಲ್ಲಿನ ಶೋಷಣೆ, ಆಧುನಿಕ ಶಿಕ್ಷಣ ಪಡೆದ ನಾಯಕ,
ದಲಿತ ಯುವತಿ ಜೊತೆಗಿನ ಅನೈತಿಕ ಸಂಬಂಧದ ಸುತ್ತ ಸಾಗುವ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿದ್ದು ನಟ ಅನಂತ್ ನಾಗ್ ಮತ್ತು ಶಬಾನಾ ಅಜ್ಮೀ. ಹೌದು ಇಬ್ಬರನ್ನೂ ಸಿನಿ ಪ್ರಪಂಚಕ್ಕೆ ಪರಿಚಯಿಸಿದ ಸಿನಿಮಾ ಕೂಡಾ ಇದಾಗಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದವರು ಉಡುಪಿ ಮೂಲದ ಶ್ಯಾಮ್ ಬೆನಗಲ್!
ಅನಂತ್ ನಾಗ್ ಕೂಡಾ ಉತ್ತರ ಕನ್ನಡದ ಭಟ್ಕಳದ ನಾಗರಕಟ್ಟೆಯಲ್ಲಿ ಜನಿಸಿದವರು. ತಮ್ಮ 7ನೇ ತರಗತಿ ವಿದ್ಯಾಭ್ಯಾಸದ ನಂತರ ಮುಂಬೈಗೆ ಪ್ರಯಾಣ. ಅಲ್ಲಿ 11ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ಆ ಸಂದರ್ಭದಲ್ಲಿಯೇ ಕೊಂಕಣಿ, ಕನ್ನಡ, ಮರಾಠಿ ಭಾಷೆಯ ನಾಟಕಗಳಲ್ಲಿ ಅಭಿನಯಿಸಲು ನಾಗ್ ಅವರನ್ನು ಆಯ್ಕೆ ಮಾಡುತ್ತಿದ್ದರು. ಹೀಗೆ ಮೊತ್ತ ಮೊದಲ ಬಾರಿಗೆ ರಂಗಕರ್ಮಿ ಪ್ರಭಾಕರ್ ಮುದುರ್ ಹಾಗೂ ವೆಂಕಟರಾವ್ ಅವರು ಚೈತನ್ಯ ಮಹಾಪ್ರಭು ನಾಟಕದಲ್ಲಿ ಅನಂತ್ ನಾಗ್ ಗೆ ಪುರೋಹಿತನ ಪಾತ್ರ ಮಾಡುವ ಅವಕಾಶ ಕೊಟ್ಟಿದ್ದರು. ಅಲ್ಲಿ ಪ್ರೇಕ್ಷಕರ ಮನಗೆಲ್ಲುವ ಮೂಲಕ ಅನಂತ್ ನಾಗ್ ಗಿರೀಶ್ ಕಾರ್ನಾಡ್ ಅವರ ನಾಟಕದಲ್ಲಿಯೂ ಪಾತ್ರ ನಿರ್ವಹಿಸಿದ್ದರು.
ಸಿನಿ ಪ್ರಪಂಚಕ್ಕೆ ಕಾಲಿಟ್ಟ ನಾಗ್…ಶ್ಯಾಮ್ ಬೆನಗಲ್ ಮೋಡಿ!
1973ರಲ್ಲಿ ಕನ್ನಡದ ಸಂಕಲ್ಪ ಚಿತ್ರದಲ್ಲಿ ನಟನೆ ಪ್ರಾರಂಭ. ಖ್ಯಾತ ರಂಗಕರ್ಮಿ ಸತ್ಯದೇವ್ ದುಬೆ ಅವರು ಅನಂತ್ ನಾಗ್ ಅವರನ್ನು ಶ್ಯಾಮ್ ಬೆನಗಲ್ ಗೆ ಪರಿಚಯಿಸಿಕೊಟ್ಟಿದ್ದರು. 1974ರಲ್ಲಿ ಶ್ಯಾಮ್ ಬೆನಗಲ್ ತಮ್ಮ ಅಂಕುರ್ ಸಿನಿಮಾದಲ್ಲಿ ಅನಂತ್ ನಾಗ್ ಅವರನ್ನು ನಾಯಕ ನಟನನ್ನಾಗಿ ಪರಿಚಯಿಸಿದ್ದರು.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ಯಾಮ್ ಬೆನಗಲ್ ಅವರು ಮೂಲತಃ ಉಡುಪಿ ಜಿಲ್ಲೆಯ ಬೆನಗಲ್ ನವರು. ಇವರ ಕುಟುಂಬ ಸಿಕಂದರಾಬಾದ್ ಗೆ ವಲಸೆ ಹೋಗಿತ್ತು. 1934ರ ಡಿಸೆಂಬರ್ 14ರಂದು ಶ್ಯಾಮ್ ಸುಂದರ್ ಬೆನಗಲ್ ಜನನ. ತಮ್ಮ 12ನೇ ವಯಸ್ಸಿನಲ್ಲಿಯೇ ಫೋಟೋಗ್ರಾಫರ್ ತಂದೆ ಶ್ರೀಧರ್ ಬಿ ಬೆನಗಲ್ ಅವರ ಕ್ಯಾಮೆರಾ ಹಿಡಿದು ಮೊದಲ ಸಿನಿಮಾ ಮಾಡಿದ್ದರು! ಉಸ್ಮಾನಿಯಾ ವಿವಿಯಿಂದ ಎಂಎ ಪದವಿ ಪಡೆದಿದ್ದರು.
1959ರಲ್ಲಿ ಮುಂಬೈ ಮೂಲದ ಜಾಹೀರಾತು ಏಜೆನ್ಸಿಯಲ್ಲಿ ಕಾಪಿ ರೈಟರ್ ಆಗಿ ವೃತ್ತಿ ಆರಂಭಿಸಿದ್ದರು. ತದನಂತರ ಜಾಹೀರಾತು ಏಜೆನ್ಸಿಯ ಕ್ರಿಯೇಟಿವ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಗುಜರಾತಿ ಭಾಷೆಯಲ್ಲಿ 1962ರಲ್ಲಿ ಮೊದಲ ಡಾಕ್ಯುಮೆಂಟರಿ ತಯಾರಿಸಿದ್ದರು. ಸುಮಾರು 70 ಡಾಕ್ಯುಮೆಂಟರಿ ಹಾಗೂ ಕಿರುಚಿತ್ರಗಳನ್ನು ಶ್ಯಾಮ್ ಬೆನಗಲ್ ನಿರ್ಮಿಸಿದ್ದರು.
ಹಿಂದಿ ಸಿನಿಮಾದಲ್ಲಿ ಅನಂತ್ ನಾಗ್ ಅವರನ್ನು ಪರಿಚಯಿಸಿದ್ದು ಶ್ಯಾಮ್ ಬೆನಗಲ್. ಅಂಕುರ್ ಸಿನಿಮಾ ಮೂಲಕ ಅನಂತ್ ನಾಗ್ ಮತ್ತು ಶಬಾನಾ ಅಜ್ಮಿಯ ಪ್ರತಿಭೆ ಜಗಜ್ಜಾಹೀರಾಗಿತ್ತು. ಇದು ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತ್ತು. ಶ್ಯಾಮ್ ಬೆನಗಲ್ ಗೆ ಆಗ 37 ವರ್ಷ.
ಶ್ಯಾಮ್ ಬೆನಗಲ್ ಗರಡಿಯಲ್ಲಿ ಅನಂತ್ ನಾಗ್ ಅವರು ನಿಶಾಂತ್, ಭೂಮಿಕಾ, ಕೊಂಡುರಾ, ಕಲಿಯುಗ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ ಚಿತ್ರರಂಗದಲ್ಲಿ ಈ ದಿಗ್ದರ್ಶಕ ನಿರ್ದೇಶಕ ಆರಿಸಿಕೊಂಡ ಕೆಲವು ಕಲಾವಿದರು ಮುಂದೆ ಖ್ಯಾತ ನಟರಾಗಿ ಹೆಸರು ಮಾಡಿದರು. ಅವರಲ್ಲಿ ಅನಂತ್ ನಾಗ್, ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ, ಓಂಪುರಿ, ಕುಲ್ ಭೂಷಣ್ ಖರಬಂದಾ ಪ್ರಮುಖರು.
ಚರಣದಾಸ್ ಚೋರ್ ಎಂಬ ಮಕ್ಕಳ ಚಿತ್ರ ನಿರ್ಮಿಸಿದ್ದರು. ನಿಶಾಂತ್, ಭೂಮಿಕಾ, ಮಂಥನ್, ಜುನೂನ್, ಕಲಿಯುಗ್, ಆರೋಹಣ್, ಮಂಡಿ, ತ್ರಿಕಾಲ್, ಮಮ್ಮೊ, ಜುಬೈದಾ, ಸರ್ದಾರಿ ಬೇಗಂ ನಂತಹ ಅದ್ಭುತ ಸಿನಿಮಾಗಳು ಬೆನಗಲ್ ನಿರ್ದೇಶನದಲ್ಲಿ ಮೂಡಿಬಂದಿದ್ದವು. ಮೆಗಾ ಧಾರವಾಹಿ ಯಾತ್ರಾ ಮರೆಯಲಾರದ ಚಿತ್ರ. ಆ ನೆಲೆಯಲ್ಲಿಯೇ ಶ್ಯಾಮ್ ಬೆನಗಲ್ ಚಿತ್ರಗಳನ್ನು ದೃಶ್ಯ ಕಾವ್ಯ ಎಂದು ಬಣ್ಣಿಸುತ್ತಾರೆ.
1988ರಲ್ಲಿ ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕವನ್ನು ಆಧರಿಸಿ ಭಾರತ್ ಏಕ್ ಖೋಜ್ ಎಂಬ ಧಾರವಾಹಿ ನಿರ್ದೇಶಿಸಿದ್ದರು. 2009ರಲ್ಲಿ 31ನೇ ಮಾಸ್ಕೋ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನ ಜ್ಯೂರಿ ಸದಸ್ಯರಾಗಿದ್ದರು. ಈಗ ಫೆಡರೇಶನ್ ಆಫ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಶ್ಯಾಮ್ ಬೆನಗಲ್ ಕಾರ್ಯನಿರ್ವಹಿಸುತ್ತಿದ್ದಾರೆ.