Advertisement

ಪೊಲೀಸರ ಬಲೆಗೆ ಬಿದ್ದ ನಕಲಿ ಬಾಬಾ

01:00 AM May 14, 2019 | Team Udayavani |

ಬೆಂಗಳೂರು: ಯುವತಿಯೊಬ್ಬರಿಗೆ ಮಂತ್ರಿಸಿದ ಮಣಿ ನೀಡುವ ನೆಪದಲ್ಲಿ ಮರುಳು ಮಾಡಿ ಆಕೆಯನ್ನು ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ಕರೆದೊಯ್ದು ಹಣ ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದ ನಕಲಿ ಬಾಬಾ ಎಚ್‌ಎಎಲ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ದೆಹಲಿ ಮೂಲದ ರಾಜವಂತ್‌ ಸಿಂಗ್‌ (39)ಬಂಧಿತ ಆರೋಪಿ. ಆರೋಪಿ ಬಂಧನದಿಂದ ಕಳೆದ ವರ್ಷ ಮೇ ತಿಂಗಳಿನಲ್ಲಿ ಯುವತಿಯೊಬ್ಬರ ಬಳಿ 34 ಸಾವಿರ ರೂ. ಪಡೆದು ವಂಚಿಸಿದ್ದ ಆರೋಪ ಪ್ರಕರಣ ಪತ್ತೆಯಾಗಿದ್ದು. ಆರೋಪಿ ರಾಜವಂತ್‌, ನಗರದ ಹಲವು ಕಡೆ ವಂಚನೆ ಎಸಗಿರುವ ಸಾಧ್ಯತೆಯಿದೆ. ಈ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಇಸಿಎಸ್‌ ಲೇಔಟ್‌ ನಿವಾಸಿಯಾಗಿರುವ ಸುಕನ್ಯಾ ಅವರ ನಿವಾಸದ ಬಳಿ 2018ರ ಮೇ 10ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಆಗಮಿಸಿದ್ದ ರಾಜವಂತ್‌ ಸಿಂಗ್‌ ಹಾಗೂ ಮತ್ತೂಬ್ಬ ಆರೋಪಿ, ತಾವು ಗುರುದ್ವಾರದಿಂದ ಬಂದಿರುವ ಬಾಬಾಗಳು ಎಂದು ಪರಿಚಯಿಸಿಕೊಂಡಿದ್ದರು.

ನಿಮಗೆ ಸದ್ಯದಲ್ಲೇ ಭಾರಿ ತೊಂದರೆಯಾಗಲಿದ್ದು, ಗುರುದ್ವಾರಕ್ಕೆ ಕಾಣಿಕೆ ನೀಡಿ ವಿಶೇಷ ಮಣಿಜಪ ನಡೆಸುತ್ತೇವೆ ಎಂದು ನಂಬಿಸಿದ್ದಾರೆ. ಆರೋಪಿಗಳ ಮಾತನ್ನು ಸುಕನ್ಯ ಅವರು ನಂಬಿದ್ದಾರೆ. ಈ ವೇಳೆ ಮಣಿಯೊಂದನ್ನು ಅವರ ಕೈಗೆ ನೀಡಿದ್ದಾರೆ.

ಇದಾದ ಬಳಿಕ ಆರೋಪಿಗಳು ಸುಕನ್ಯಾರನ್ನು ಹತ್ತಿರದ ಎಟಿಎಂಗೆ ಕರೆದೊಯ್ದು, ಆಕೆಯಿಂದಲೇ 34 ಸಾವಿರ ರೂ. ಹಣ ಡ್ರಾ ಮಾಡಿಸಿಕೊಂಡು ಅಲ್ಲಿಂದ ತೆರಳಿದ್ದಾರೆ. ಇದಾದ ಬಳಿಕ ಸುಕನ್ಯ ಕೂಡ ಮನೆಗೆ ವಾಪಸ್‌ ಬಂದಿದ್ದರು. ಕೆಲ ಸಮಯದ ಬಳಿಕ ಸುಕನ್ಯ ಅವರಿಗೆ ತಮ್ಮ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಗಿರುವುದು ಗೊತ್ತಾಗಿದ್ದು, ನಕಲಿ ಬಾಬಾಗಳು ವಂಚಿಸಿರುವುದು ಅರಿವಿಗೆ ಬಂದಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಮನೆಗೆ ಬಂದಿದ್ದ ಆರೋಪಿಗಳು ಮಣಿಗಳನ್ನು ನೀಡುವ ನೆಪದಲ್ಲಿ ತಲೆಯ ಮೇಲೆ ಕೈಯಿಟ್ಟಿದ್ದರು. ನಂತರ ಏನು ನಡೆಯಿತು ಎಂಬುದು ಗೊತ್ತಾಗಲಿಲ್ಲ. ಸುಮಾರು ಒಂದು ಗಂಟೆ ಬಳಿಕ, ಮೊಬೈಲ್‌ಗೆ, ಎಟಿಎಂನಿಂದ ಹಣ ಬಿಡಿಸಿಕೊಂಡ ಬಗ್ಗೆ ಬಂದಿದ್ದ ಸಂದೇಶ ನೋಡಿಕೊಂಡಿದ್ದರಿಂದ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ದೂರುದಾರೆ ಹೇಳಿದ್ದರು.

ಆರೋಪಿ ಪ್ರಜ್ಞೆ ತಪ್ಪಿಸಲು ವಶೀಕರಣ ವಿದ್ಯೆ ಅಥವಾ ಬೇರೆ ಯಾವ ತಂಥ ವಿದ್ಯೆ ಪ್ರಯೋಗ ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಅಧಿಕಾರಿ ಹೇಳಿದರು.

ಒಂಟಿ ಮನೆಗಳೇ ಟಾರ್ಗೆಟ್‌: ದೆಹಲಿಯ ವಿಷ್ಣುಗಾರ್ಡನ್‌ನಲ್ಲಿ ಕುಟುಂಬದ ಜತೆ ವಾಸವಾಗಿರುವ ರಾಜವಂತ್‌ ಸಿಂಗ್‌, ಐದನೇ ತರಗತಿ ಓದಿದ್ದು, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ.

“ನಗರದ ಹಲವು ಕಡೆ ಸುತ್ತಾಡಿ, ಒಂಟಿ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದೆ. ಬಳಿಕ, ಯಾರೂ ಇರದ ಸಮಯವನ್ನು ನೋಡಿಕೊಂಡು ಅವರ ಮನೆಗೆ ತೆರಳಿ ಕಾಣಿಕೆ ನೀಡುವಂತೆ ಕೋರಿ ಮಣಿ ಮಂತ್ರಿಸಿ ಕೊಡುತ್ತಿದ್ದೆ. ಬಳಿಕ ಅವರಿಂದ ಹಣ ಇಲ್ಲವೇ ಆಭರಣ ಪಡೆಯುತ್ತಿದ್ದೆ’  ಎಂದು ವಿಚಾರಣೆ ವೇಳೆ ಆರೋಪಿ ಸಿಂಗ್‌ ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಸಿಸಿ ಕ್ಯಾಮೆರಾ ನೀಡಿತು ಸುಳಿವು: ಆರೋಪಿ ರಾಜವಂತ್‌ ಸಿಂಗ್‌ ಬಂಧನಕ್ಕೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿತ್ತು. ಆದರೆ, ಆತನ ಸುಳಿವು ಸಿಕ್ಕಿರಲಿಲ್ಲ. ಇತ್ತೀಚೆಗೆ ಎಚ್‌ಎಎಲ್‌ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯು ಅನುಮಾನಸ್ಪದವಾಗಿ ಸುತ್ತಾಡುತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು.

ಕೂಡಲೇ ಸಿಸಿ ಕ್ಯಾಮೆರಾ ಫೋಟೇಜ್‌ ಮೂಲಕ ಆತನ ಮುಖಚಹರೆ ಪರಿಶೀಲಿಸಿದಾಗ ಆತನೇ ವಂಚಕ ಎಂಬುದು ಖಚಿತವಾಗಿತ್ತು. ಇನ್ಸ್‌ಪೆಕ್ಟರ್‌ ನರಸಿಂಹಮೂರ್ತಿ, ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳಾದ ಮಂಜೇಶ್‌, ರವಿ ಅವರಿದ್ದ ತಂಡ ಆರೋಪಿ ರಾಜವಂತ್‌ ಸಿಂಗ್‌ನನ್ನು ಬಂಧಿಸಿದೆ ಎಂದು ಆಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next