Advertisement

ದಾಸ-ಶರಣ ಸಾಹಿತ್ಯ ಸಮಾಜದ ಕಣ್ಣು

09:53 AM Jan 16, 2019 | |

ರಾಯಚೂರು: ದಾಸ ಮತ್ತು ಶರಣ ಸಾಹಿತ್ಯ ಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಮೂಡಿಸಿವೆ. ದಾಸರು ಭಕ್ತಿ ಸಾಹಿತ್ಯ ನೀಡಿದರೆ, ವಚನಕಾರರು ಅನುಭಾವಿ ಸಾಹಿತ್ಯ ನೀಡಿದ್ದಾರೆ. ದಾಸ ಸಾಹಿತ್ಯ ಹಾಗೂ ಶರಣ ಸಾಹಿತ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವಿಠuಲರಾವ್‌ ಗಾಯಕವಾಡ ಹೇಳಿದರು.

Advertisement

ಕಲ್ಪತರು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ನಗರದ ಜೋಡು ವೀರಾಂಜನೇಯ ದೇವಸ್ಥಾನ ಸಭಾಂಗಣದಲ್ಲಿ ನಡೆದ ದಾಸೋತ್ಸವ-2019 ದಾಸ ಸಾಹಿತ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ದಾಸ ಮತ್ತು ಶರಣ ಸಾಹಿತ್ಯ ನಾಡಿಗೆ ಸಿಕ್ಕ ವಿಶೇಷ ಕೊಡುಗೆಯಾಗಿದೆ. ಸಮಾಜವನ್ನು ಸನ್ನಡತೆ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವಲ್ಲಿ ಈ ಸಾಹಿತ್ಯ ಪ್ರಕಾರಗಳು ಮಹತ್ವದ ಪಾತ್ರ ವಹಿಸಿವೆ. ಉಭಯ ಸಾಹಿತ್ಯದ ಸಾರವು ಬಹುತೇಕ ಒಂದೇಯಾಗಿದೆ. ಹಲವು ಆಯಾಮಗಳ ಮೂಲಕ ಸತ್ಯ ತೋರಿದ್ದಾರೆ. ಭೋಗ ಜೀವನದ ಬದಲು ಅಧ್ಯಾತ್ಮದ ಜೀವನದಿಂದಲೇ ಮುಕ್ತಿ ಎಂದು ಸಂದೇಶ ಸಾರಿದ್ದಾರೆ ಎಂದರು.

ಮೈಸೂರು ವಿವಿ ಪ್ರಸಾರಾಂಗ ಸಹ ನಿರ್ದೇಶಕ ಅನಿಲಕುಮಾರ ಬೊಮ್ಮಘಟ್ಟ ಮಾತನಾಡಿ, ಹರಿದಾಸ ಸಾಹಿತ್ಯದ ಅನುಮಾನ ಹಾಗೂ ಊಹಾಪೋಹಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಿದೆ. ಕೀರ್ತನೆಗಳ ವರ್ಗೀಕರಣವೂ ಮಾಡಬೇಕಿದೆ. ಮಹಿಳೆಯರ ಸಮಕಾಲಿನ ಸವಾಲುಗಳ ಕುರಿತು ಅಧ್ಯಯನ ನಡೆಯಬೇಕಿದೆ. ಸಮಾಜದಲ್ಲಿ ತಾರತಮ್ಯಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಸಮೀರ್‌ ಸಾಂಸ್ಕೃತಿಕ ಸೇವಾ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷೆ ಜಯಲಕ್ಷ್ಮೀ ಮಂಗಳಾಮೂರ್ತಿ ಸೇರಿ ಇತರರು ಮಾತನಾಡಿದರು.

Advertisement

ಕಲ್ಪತರು ಪ್ರಶಸ್ತಿ ಪ್ರದಾನ: ಸತ್ಯನಾರಾಯಣ ಮುಜುಂದಾರ, ಪ್ರಮೋದ ಕಟ್ಟಿ, ವೆಂಕಟೇಶ ನವಲಿ ಅವರಿಗೆ ಕಲ್ಪತರು ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಯಣ್ಣ ಸಿರವಾರ, ತ್ರಿವೇಣಿಬಾಯಿ, ಶಾಶ್ವತಸ್ವಾಮಿ ಮುಕ್ಕುಂದಿಮಠ, ಶ್ರೀಹರಿರಾವ್‌ ಕುಲಕರ್ಣಿ ಸೇರಿ ಇತರರನ್ನು ಸನ್ಮಾನಿಸಲಾಯಿತು.

ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ನರಸಿಂಗರಾವ್‌ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು, ಸಾಹಿತಿ ದಸ್ತಗಿರಸಾಬ್‌ ದಿನ್ನಿ, ಶೀಲಾದಾಸ, ಎಂ.ರೇವತಿ, ಹರೀಶಾಚಾರ್ಯ, ಹನುಮೇಶಾಚಾರ್ಯ, ಲಕ್ಷ್ಮೀಕಾಂತ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next