ಮೈಸೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾದ ಬೆನ್ನಲ್ಲೆ ಮೈಸೂರು ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮೈಸೂರಿನ ಎನ್.ಆರ್. ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ನಿರೀಕ್ಷೆ ಹೊಂದಿದ್ದ ಸಂದೇಶ್‌ಸ್ವಾಮಿ, ತಮ್ಮ ಕುಟುಂಬಕ್ಕೆ ಟಿಕೆಟ್ ಕೈತಪ್ಪಲು ಕೆ.ಆರ್.ನಗರ ಶಾಸಕ ಸಾ.ರಾ ಮಹೇಶ್ ಕೈವಾಡವಿದ್ದು, ಮೈಸೂರಿನಲ್ಲಿ ಜೆಡಿಎಸ್ ಹಾಳಾಗಲು ಶಾಸಕ ಸಾ.ರಾ.ಮಹೇಶ್ ಕಾರಣ ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಚಾಮರಾಜ ಕ್ಷೇತ್ರದಲ್ಲಿ ಗೆಲ್ಲಿಸಲು ತಮ್ಮನ್ನು ಬಲಿಪಶು ಮಾಡಲಾಗುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳಿಂದ ಎನ್.ಆರ್.ಕ್ಷೇತ್ರದ 20 ಸಾವಿರ ಬೆಂಬಲಿಗರು ಜೆಡಿಎಸ್‌ನಿಂದ ದೂರ ಉಳಿಯಲಿದ್ದು, ಕ್ಷೇತ್ರಕ್ಕೆ ಸಂಬಂಧವಿಲ್ಲದ ವ್ಯಕ್ತಿಗೆ ವರಿಷ್ಠರು ಮಣೆಹಾಕಿದ್ದಾರೆ ಎಂದ ಅವರು, ಈ ಬಗ್ಗೆ ಎಚ್.ಡಿ. ರೇವಣ್ಣ ಅವರನ್ನು ಭೇಟಿಯಾಗಿ, ಚರ್ಚಿಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಎನ್.ಆರ್.ಕ್ಷೇತ್ರದಿಂದ ಸ್ಪರ್ಧೆ ನಿಶ್ಚಿತ: ತಮಗೆ ಟಿಕೆಟ್ ನೀಡಲು ವರಿಷ್ಠರು ನಿರ್ಧರಿಸಿದ್ದರು.ಆದರೆ, ಏಕಾಏಕಿ ಬೇರೊಬ್ಬರಿಗೆ ಟಿಕೆಟ್ ನೀಡಿರುವುದರಿಂದ ಆಘಾತವಾಗಿದೆ. ಟಿಕೆಟ್ ಕೊಡುತ್ತೇವೆಂಬ ಭರವಸೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದೇನೆ,
ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ, ಟಿಕೆಟ್ ನೀಡುವಂತೆ ಮನವಿ ಮಾಡುವೆ. ಈಗಲೂ ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದ್ದು, ಎನ್.ಆರ್. ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ, ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ವರಿಷ್ಠ ದಿಕ್ಕು ತಪ್ಪಿಸಿದ ಸಾರಾ: ತಮ್ಮ ಸಹೋದರನಿಗೆ ಟಿಕೆಟ್ ಕೈತಪ್ಪಿರುವ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್, ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಹಾಳಾಗಲು ಶಾಸಕ ಸಾ.ರಾ.ಮಹೇಶ್ ಕಾರಣವಾಗಿದ್ದು, ನನ್ನ ತಮ್ಮನಿಗೆ ಟಿಕೆಟ್ ತಪ್ಪಿರುವ ಹಿಂದೆ ಸಾ.ರಾ.ಮಹೇಶ್ ಕೈವಾಡವಿದೆ. ಪ್ರತಿ ಕ್ಷೇತ್ರದ ವಿಚಾರದಲ್ಲಿ ಸಾ.ರಾ.ಮಹೇಶ್ ಅವರು ಪಕ್ಷದ ವರಿಷ್ಠರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು,
ಎಚ್.ಡಿ.ಕೋಟೆ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರದಲ್ಲಿ ಟಿಕೆಟ್ ಗೊಂದಲಕ್ಕೆ ಶಾಸಕ ಸಾ.ರಾ.ಮಹೇಶ್ ಕಾರಣರಾಗಿದ್ದಾರೆ. ವರಿಷ್ಠರು ಜಿಲ್ಲೆಯ ಸಂಪೂರ್ಣ ಜವಾಬ್ದಾರಿ ಶಾಸಕ ಜಿ.ಟಿ.ದೇವೆಗೌಡರಿಗೆ ವಹಿಸಿದ್ದರೂ ಅವರ ಮಾತು ನಡೆಯುತ್ತಿಲ್ಲ. ಅಲ್ಲದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧವಾಗಿ ಮಾತನಾಡುವ ಶಕ್ತಿ ನಮ್ಮ ಕುಟುಂಬಕ್ಕಿಲ್ಲ, ಆದರೂ ಈ ಎಲ್ಲ ಬೆಳವಣಿಗೆ ಬಗ್ಗೆ ಮುಂದಿನ 2-3 ದಿನಗಳಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.