Advertisement

ಅನುಭವ ಮಂಟಪ ಯೋಜನೆ ನಮ್ಮದೇ

07:16 PM Apr 08, 2021 | Team Udayavani |

ಬಸವಕಲ್ಯಾಣ: ಬಿಜೆಪಿ ಸರ್ಕಾರ ಅನುಭವ ಮಂಟಪ ಮಾಡಲು ಹೊರಟಿರುವುದು ಸಂತೋಷದ ವಿಷಯ. ಆದರೆ ಅದರ ಯೋಜನೆ ರೂಪಿಸಿರುವುದು ಕಾಂಗ್ರೆಸ್‌
ಸರ್ಕಾರ ಎಂಬುದನ್ನು ಕಲ್ಯಾಣದ ಜನತೆ ಎಂದಿಗೂ ಮರೆಯಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಉಪ ಚುನಾವಣೆ ನಿಮಿತ್ತ ಮುಡಬಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

Advertisement

ನೂತನ ಅನುಭವ ಮಂಟಪದ ಕನಸು ಕಂಡಿದ್ದು ದಿ. ಶಾಸಕ ಬಿ. ನಾರಾಯಣರಾವ್‌. ಅವರು ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಎಲ್ಲ ಶಾಸಕರು, ನೂತನ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದರು ಎಂದು ಸ್ಮರಿಸಿದರು. ನಾನು 600 ಕೋಟಿ ರೂ. ಬಿಡುಗಡೆಗೆ ಒಪ್ಪಿಕೊಂಡು, ಗೋ.ರು.ಚ. ನೇತೃತ್ವದಲ್ಲಿ ಸಮಿತಿ ರಚಿಸಿ ಅದರ ರೂಪುರೇಷೆಗಳ ವರದಿ ತರಿಸಿಕೊಂಡಿದ್ದೆ. ಆದರೆ ಕಾಂಗ್ರೆಸ್‌ ಸರ್ಕಾರ ಅ ಧಿಕಾರಕ್ಕೆ ಬರಲಿಲ್ಲ. ನೂತನ ಅನುಭವ ಮಂಟಪ ಪುನರ್‌ ಸ್ಥಾಪನೆ ಮಾಡಲು ಮೊದಲು ನಿರ್ಧರಿಸಿದ್ದೇ ಕಾಂಗ್ರೆಸ್‌ ಎಂಬುದನ್ನು ಎಂದಿಗೂ ಮರೆಯಬಾರದು ಎಂದರು.

ಬಿಜೆಪಿ ಸರ್ಕಾರ ಹೈ.ಕ. ಭಾಗವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿತು. ಆದರೆ ಇಲ್ಲಿ ನಿಜವಾದ ಕಲ್ಯಾಣ ಆಗಿಲ್ಲ. ಕೇಂದ್ರದಲ್ಲಿ  ವಾಜಪೇಯಿ ಸರ್ಕಾರದಲ್ಲಿ ಎಲ್‌.ಕೆ. ಅಡ್ವಾನಿ ಉಪ ಪ್ರಧಾನಿಯಾಗಿದ್ದಾಗ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ 371(ಜೆ) ಜಾರಿಗೊಳಿಸುವಂತೆ ಮನವಿ ಮಾಡಿದ್ದರೆ ಅದು ಆಗುವುದಿಲ್ಲ ಎಂದು ಬರೆದ ಪತ್ರ ಇಂದಿಗೂ ಇದೆ ಎಂದರು.

ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರವಿದ್ದಾಗ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿ. ಮಾಜಿ ಸಿಎಂ ಧರಂಸಿಂಗ್‌ ನಮ್ಮ ಭಾಗ ಹಿಂದುಳಿದೆ. ನೀವು
ಮಾಡಲೇಬೇಕು ಅಂದಾಗ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿತು. ಇದರಿಂದ ಶಿಕ್ಷಣ, ಉದ್ಯೋಗ ಮೀಸಲಾತಿ ಸಿಕ್ಕಿರುವುದು ನಮ್ಮಿಂದವೇ ಹೊರತು ಬಿಜೆಪಿಯಿಂದ  ಅಲ್ಲ. ಈ ಕುರಿತು ಒಂದೇ ವೇದಿಕೆಯಲ್ಲಿ ನಾನು ಮತ್ತು ಬಿಎಸ್‌ವೈ ಚರ್ಚಿಸಲೂ ಸಿದ್ಧ ಎಂದು ಸವಾಲು ಹಾಕಿದರು.

ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಶಾಸಕ ಬಿ. ನಾರಾಯಣರಾವ್‌ ಅವರಿಗೆ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 10 ಸಾವಿರ
ಮತಗಳಿಂದ ಗೆಲ್ಲಿಸಿ ಕಳಿಹಿಸಿದ್ದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರು. ಇದೀಗ ಅವರ ಆಕಸ್ಮಿಕ ನಿಧನದಿಂದ ಎದುರಾದ ಉಪ ಚುನಾವಣೆಯಲ್ಲಿ ಅವರ ಪತ್ನಿ ಮಾಲಾ ಅವರನ್ನು ಗೆಲ್ಲಿಸಿ ಪುನಃ ಬಸವಕಲ್ಯಾಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.  ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಸರ್ಕಾರ ಬಂದಾಗಿನಿಂದಲೂ ಸಾಕಷ್ಟು ಉಪ ಚುನಾವಣೆ ನೋಡಿದ್ದೇವೆ. ಆದರೆ ಈ ಚುನಾವಣೆಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ಕಂದಾಯ ರೂಪದಲ್ಲಿ ಸಂದಾಯವಾದ ಹಣ ಮುಖ್ಯಮಂತ್ರಿ ಹಾಗೂ ಅವರ ಪುತ್ರ ವಿಜಯೇಂದ್ರ ಜೇಬಿಗೆ ಹೋಗುತ್ತಿದೆ ಎಂದು ಆರೋಪಿಸಿದರು.

Advertisement

ಈ ವೇಳೆ ಬಿ.ಆರ್‌. ಪಾಟೀಲ, ಶಾಸಕರಾದ ವಿಜಯಸಿಂಗ್‌, ರಹೀಂಖಾನ್‌, ಡಾ| ಚಂದ್ರಶೇಖರ ಪಾಟೀಲ, ಬಸವರಾಜ ಕಾಂಗ್ರೆಸ್‌ ಅಭ್ಯರ್ಥಿ ಮಾಲಾ
ಬಿ.ನಾರಾಯಣರಾವ್‌, ಬಸವರಾಜ ಬುಳ್ಳಾ, ತಿಪ್ಪಣ್ಣ ಕಮಕನೂರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠ ರಾಠೊಡ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ದತ್ತಾತ್ರಿ ಮುಲಗೆ ಸೇರಿದಂತೆ ಇತರರಿದ್ದರು.

ಬಿಜೆಪಿಯ 2018ರ ಚುನಾವಣೆ ಪ್ರಣಾಳಿಕೆಯಲ್ಲಿ 1 ಲಕ್ಷದವರೆಗೆ ಸೊಸೈಟಿ ಮತ್ತು ಬ್ಯಾಂಕ್ ಗಳ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ 2 ವರ್ಷದಲ್ಲಿ ಏಕೆ ಮಾಡಿಲ್ಲ?. ನಾನು ಮುಖ್ಯಮಂತ್ರಿ ಇದ್ದಾಗ ಯಾವುದೇ ಷರತ್ತು ವಿಧಿಸದೇ 50 ಸಾವಿರದವರೆಗೆ 22 ಲಕ್ಷ ರೈತ ಕುಟುಂಬಗಳ 8000 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. 7 ಕೆ.ಜಿ. ಅಕ್ಕಿ ಘೋಷಿಸಿದ್ದೆ. ಇವರು ಬಂದ ಮೇಲೆ 5 ಕೆ.ಜಿ.ಗೆ ಇಳಿಸಲಾಗಿದೆ. 2023ರಲ್ಲಿ ನಾವು ಅ ಧಿಕಾರಕ್ಕೆ ಬರುವುದು ಎಷ್ಟು ಸತ್ಯವೋ 10 ಕೆ.ಜಿ. ಅಕ್ಕಿ ಮತ್ತು ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 6 ಸಾವಿರ ರೂ. ಕೊಡುವುದು ಅಷ್ಟೇ ಸತ್ಯ.
ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next