Advertisement

ಭಾರತೀಯ ಸೈನ್ಯ ಸೇರಲು ಯುವತಿಯರ ಉತ್ಸಾಹ

11:01 AM Aug 03, 2019 | Suhan S |

ಬೆಳಗಾವಿ: ಸೇನೆ ಸೇರಲು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯಷ್ಟೇ ಸಾಕಾಗಿದ್ದರೂ, ಎಂಜಿನಿಯರಿಂಗ್‌ ಅಲ್ಲದೇ ವಿವಿಧ ಪದವಿ ಪಡೆದವರೂ ದೇಶ ಸೇವೆಯ ಕಿಚ್ಚು ಹಚ್ಚಿಕೊಂಡು ಆಯ್ಕೆಗಾಗಿ ಸಾಲು ಹಚ್ಚಿದ್ದಾರೆ.

Advertisement

ಎಂಜಿನಿಯರಿಂಗ್‌, ಬಿಎಸ್ಸಿ, ಬಿಕಾಂ ಕಲಿಯುತ್ತಿರುವ ಯುವತಿಯರು ಐಷಾರಾಮಿ ಉದ್ಯೋಗಗಳ ಬೆನ್ನು ಹತ್ತದೇ ಭಾರತೀಯ ಸೈನ್ಯ ಸೇರಲು ಕಾತುರರಾಗಿದ್ದಾರೆ.

ಬೆಳಗಾವಿಯ ಮರಾಠಾ ಲಘುಪದಾತಿ ದಳದ ಶಿವಾಜಿ ಮೈದಾನದಲ್ಲಿ ನಡೆಯುತ್ತಿರುವ ದೇಶದ ಮೊದಲ ಮಹಿಳಾ ಮಿಲಿಟರಿ ಪೊಲೀಸ್‌ ಭರ್ತಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದವರು ಎಸ್ಸೆಸ್ಸೆಲ್ಸಿ, ಪಿಯುಸಿ ಅಲ್ಲದೇ ಡಿಗ್ರಿ ಮಾಡುತ್ತಿರುವವರೂ ಇದ್ದಾರೆ. ಎಂಜಿನಿಯರ್‌, ಡಾಕ್ಟರ್‌, ಪ್ರೊಫೆಸರ್‌ ವೃತ್ತಿಗಿಂತ ಗಡಿ ರಕ್ಷಣೆ ಕಾರ್ಯ ಇವರನ್ನು ಸೆಳೆದಿದೆ.

ಕೇರಳದ ನಮ್ರತಾ ಸಿವಿಲ್ ಇಂಜಿನಿಯರಿಂಗ್‌ ಓದುತ್ತಿದ್ದಾಳೆ. ತಮಿಳುನಾಡಿನ ಕಾಲೇಜಿನಲ್ಲಿ ಕಲಿಯುತ್ತಿರುವ ಈಕೆಗೆ ಚಿಕ್ಕವಳಿದ್ದಾಗಿನಿಂದಲೂ ಸೈನಿಕರ ಬಗ್ಗೆ ಅತೀವ ಅಭಿಮಾನ. ಸೇನೆ ಸೇರಬೇಕೆಂಬ ಬಯಕೆ ಇದ್ದರೂ ಅವಕಾಶ ಇಲ್ಲದ್ದಕ್ಕೆ ಸುಮ್ಮನಿದ್ದೆ. ಈಗ ಮಹಿಳೆಯರಿಗೂ ಅವಕಾಶ ಕಲ್ಪಿಸಿದ್ದರಿಂದ ದೂರದ ಕೇರಳದಿಂದ ಸೈನ್ಯ ಪ್ರವೇಶ ಪರೀಕ್ಷೆಗೆ ಬಂದಿರುವುದಾಗಿ ಹೇಳುತ್ತಾಳೆ.

ಎರಡು ದಿನಗಳಿಂದ ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿರುವ ಈ ಯುವತಿಯರಿಗೆ ಸೈನ್ಯ ಪರೀಕ್ಷೆಯ ಮೊದಲ ಅನುಭವ ಇದಾಗಿದೆ. ಪಾಲಕರೊಂದಿಗೆ ಬಂದವರಲ್ಲಿ ಕೆಲ ಯುವತಿಯರು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಪರೀಕ್ಷೆಗೆ ಆಯ್ಕೆಗೊಂಡಿದ್ದಾರೆ. ಸೇನೆಗೆ ಸೇರಲು ಇನ್ನೆರಡೇ ಹೆಜ್ಜೆ ಬಾಕಿ ಎಂದು ಹಿರಿ ಹಿರಿ ಹಿಗ್ಗುತ್ತಿದ್ದಾರೆ.

Advertisement

ಕೇರಳದ ಅಮಿತಾ ಆರ್‌.ಎಚ್., ನೀತು ಪ್ರಸಾದ, ಅತುಲ್ಯಾ ಪಿಯುಸಿ ಮುಗಿಸಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಬಿಎಸ್ಸಿ ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿರುವ ಇವರಿಗೆ ದೇಶದ ಬಗ್ಗೆ ಅಪಾರ ಅಭಿಮಾನ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ನಮಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ದೇಶ ಸೇವೆ ಮಾಡಿ ಊರಿಗೆ ಹಾಗೂ ದೇಶಕ್ಕೆ ಕೀರ್ತಿ ತಂದು ಕೊಡುವುದೇ ನಮ್ಮ ಉದ್ದೇಶ. ಹೀಗಾಗಿ ಅಷ್ಟೊಂದು ದೂರದಿಂದ ಬೆಳಗಾವಿಗೆ ಬಂದಿರುವುದಾಗಿ ಹೇಳುತ್ತಾರೆ.

ಎಮಿಥಾ, ಕರುಣಾ ಡಾರ್ವನ್‌, ದೇವಿಕಾ, ಐಶ್ವರ್ಯ ಹಾಗೂ ರಾಜಿ ಎಂಬವರೂ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಸದ್ಯ ಬಿ.ಎ. ಹಾಗೂ ಬಿ.ಕಾಂ. ಕಲಿಯುತ್ತಿರುವ ಈ ಯುವತಿಯರಿಗೆ ಮೊದಲಿನಿಂದಲೂ ಆರ್ಮಿ ಸೇರಬೇಕೆಂಬ ಬಯಕೆ ಇತ್ತು. ಇಲ್ಲದಿದ್ದರೆ ಪೊಲೀಸರಾಗುವ ಆಸೆ ಹೊಂದಿದ್ದರು. ಇದೇ ಮೊದಲ ಸಲ ಭಾರತೀಯ ಸೇನೆಯಲ್ಲಿ ಮಹಿಳೆಯರನ್ನು ಆಹ್ವಾನಿಸಿದ್ದಕ್ಕೆ ಕಾಲ ಕೂಡಿ ಬಂತು ಎಂಬ ಸಂತಸ ವ್ಯಕ್ತಪಡಿಸುತ್ತಾರೆ.

ಸೇನೆಗೆ ಸೇರಲು ಬಂದವರಲ್ಲಿ ಬಹುತೇಕರು ಸುಮಾರು 2-3 ತಿಂಗಳಿಂದ ತಯಾರಿ ಮಾಡಿಕೊಂಡಿದ್ದರು. ಕೆಲವರು ತರಬೇತಿ ಕೇಂದ್ರಗಳಲ್ಲಿ, ಇನ್ನೂ ಕೆಲವರು ಸ್ವಂತ ಬಲದಿಂದ ಓಟ, ಉದ್ದ ಜಿಗಿತ, ಎತ್ತರ ಜಿಗಿತ ತರಬೇತಿ ಪಡೆದಿದ್ದರು. ಹೀಗಾಗಿ ಬಹುತೇಕ ವಿದ್ಯಾರ್ಥಿಗಳಲ್ಲಿ ದೈಹಿಕ ಪರೀಕ್ಷೆ ಅಷ್ಟೊಂದು ಕಠಿಣ ಆಗಿರಲಿಲ್ಲ. ಆ. 5ರವರೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next