ಉಪ್ಪು, ಮಾವುಗಳೆರಡನ್ನೂ ಹಂತ ಹಂತವಾಗಿ ತುಂಬಿ, ಜಾಡಿಯ ಬಾಯನ್ನು ಬಟ್ಟೆಯಿಂದ ಬಿಗಿಯಾಗಿ ಕಟ್ಟಿ, ಅದರ ಮೇಲೆ ಬಿರಟೆ ಮುಚ್ಚಿಟ್ಟರೆ, ಅಲ್ಲಿಗೆ ಒಂದು ಘಟ್ಟದ ಅವರ ಕೆಲಸ ಮುಗಿದಂತೆ. ಆಮೇಲೆ ದೊಡ್ಡವರಿಗೆ ಖಾರದ ಸಾಮಾನು ಒಟ್ಟು ಮಾಡಿ, ಹಸ ಮಾಡುವ ಕೆಲಸ. ನಮಗೆ ಆ ಬಿರಟೆ ತೆಗೆದಾಗ ಮಾವಿನ ಕಾಯಿಯ ಚಿರಟಿಗೊಂಡ ರೂಪ ನೋಡುವ ಕುತೂಹಲ.
ಆಹಾ, ಅಜ್ಜಿ-ಅಮ್ಮ ಮಾಡುತ್ತಿದ್ದ ಉಪ್ಪಿನಕಾಯಿಯನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿದ್ದ ಬಾಯಿ, ಬೆರಳನ್ನು ಚೀಪಿ ಚೀಪಿ ಸವೆಸುತ್ತಿದ್ದ ನಾಲಿಗೆ, ಕೈ ತೊಳೆದ ಮೇಲೂ ಮಾವಿನಮಿಡಿಯ ಘಮ ಸವಿಯಲು, ಬೆರಳುಗಳನ್ನು ಆಘ್ರಾಣಿಸಲು ಹಾತೊರೆಯುತ್ತಿದ್ದ ಮೂಗು, ಜಾಡಿಯತ್ತಲೇ ಗಮನ ಹರಿಸುತ್ತಿದ್ದ ಚಿತ್ತ… ಆಹಾ!
ಜಾಡಿ ಅಂದಾಕ್ಷಣ ನೆನಪು ಅಜ್ಜಿಯ ಕಾಲಕ್ಕೆ, ಅಲ್ಲಿಂದ ಅಮ್ಮನ ಕಾಲಕ್ಕೆ ಓಡಿ, ಈಗಿನ ನಮ್ಮ ಕಾಲಕ್ಕೆ ಬಂದು ಗಕ್ಕನೆ ಬ್ರೇಕ್ ಹಾಕಿ ನಿಂತಿತಲ್ವಾ? ಜಾಡಿ ಅಂದ್ರೆ ಗೊತ್ತಲ್ವಾ? ಪಿಂಗಾಣಿಯಿಂದ ಮಾಡಿದ, ತುಂಬಾ ತೂಕದ ಮತ್ತು ಕೈತಪ್ಪಿ ಬಿದ್ದರೆ ಫಟ್ಟನೆ ಒಡೆಯುವಂಥದ್ದೂ ಆಗಿರುತ್ತಿದ್ದವು.ಆದರೆ ಅದೆಷ್ಟು ಮುತುವರ್ಜಿಯಿಂದ ನಮ್ಮ ಹಿರಿಯರು ಬಳಸುತ್ತಿದ್ದರೆಂದರೆ, ಅದು ಕೈತಪ್ಪಿ ಒಡೆಯುವ ಸಾಧ್ಯತೆಗಳು ತೀರಾ ಕಡಿಮೆ ಇದ್ದವು.
ಮಾವಿನಕಾಯಿ ಸೀಸನ್ ಶುರುವಾದರೆ ಸಾಕು, ಹತ್ತಿರದ ನಾಲ್ಕಾರು ಹಳ್ಳಿಗಳಿಂದ, ತಲೆಯ ಮೇಲೆ ಮಾವಿನ ಮಿಡಿಯ ಮೂಟೆ ಹೊತ್ತ ರೈತರು, ಇಡೀ ನಮ್ಮೂರಿನ ಪರಿಸರಕ್ಕೆ, ಸೊನೆ ( ಮಾವಿನ ಕಾಯಿಯಿಂದ ಒಸರುವ ದ್ರವ) ಮಿಡಿಯ ಸೋನೆ ಸುರಿದು ಬಿಡುತ್ತಿದ್ದರು. ಸಾವಿರದಂಕಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಿಡಿ ಮಾವುಗಳು ಚೆನ್ನಾಗಿ ಶುಚಿಯಾದ ಮೇಲೆ, ತೆಳುವಾದ ಪಂಚೆಯ ಮೇಲೆ ಉರುಳಾಡಿ, ಒಳ್ಳೆಯದು ಕೆಟ್ಟದು ಎಂದು ಬೇರ್ಪಡೆಯಾಗಿ ಉಪ್ಪಿನೊಡನೆ ಜಾಡಿಯೊಳಗೆ ಹೋಗುವವರೆಗೂ, ನಮಗೆ ಮಿಡಿ ಮಾವನ್ನು ಲಾಲಾರಸ ಸುರಿಸಿಕೊಂಡೇ ಕಾಯುವ ಕೆಲಸ. ಸ್ವಲ್ಪ ಡ್ಯಾಮೇಜ್ ಆಗಿದೆ ಅಂತ ಬೇರ್ಪಡಿಸಿದ ಮಾವು, ಉಪ್ಪು ಖಾರದೊಟ್ಟಿಗೆ ನಮ್ಮ ನಾಲಿಗೆ ಮೇಲೆ ಕುಳಿತಾಗಲೇ ನಮಗೆ ಸಮಾಧಾನ..
ಉಪ್ಪು, ಮಾವುಗಳೆರಡನ್ನೂ ಹಂತ ಹಂತವಾಗಿ ತುಂಬಿ, ಜಾಡಿಯ ಬಾಯನ್ನು ಬಟ್ಟೆಯಿಂದ ಬಿಗಿಯಾಗಿ ಕಟ್ಟಿ, ಅದರ ಮೇಲೆ ಬಿರಟೆ ಮುಚ್ಚಿಟ್ಟರೆ, ಅಲ್ಲಿಗೆ ಒಂದು ಘಟ್ಟದ ಅವರ ಕೆಲಸ ಮುಗಿದಂತೆ. ಆಮೇಲೆ ದೊಡ್ಡವರಿಗೆ ಖಾರದ ಸಾಮಾನು ಒಟ್ಟು ಮಾಡಿ, ಹಸ ಮಾಡುವ ಕೆಲಸ. ನಮಗೆ ಆ ಬಿರಟೆ ತೆಗೆದಾಗ ಮಾವಿನ ಕಾಯಿಯ ಚಿರಟಿಗೊಂಡ ರೂಪ ನೋಡುವ ಕುತೂಹಲ. ಅಂತೂ ಖಾರ ಬೆರೆಸಿ, ಸಾಕಷ್ಟು ದಿನ ಆ ಜಾಡಿಯನ್ನು ಸುತಾರಾಂ ಡಿಸ್ಟರ್ಬ್ ಮಾಡದೆ, ಧ್ಯಾನಸ್ಥ ಸ್ಥಿತಿಯಲ್ಲಿ ಕೂರಿಸೋದಿದೆಯಲ್ಲಾ, ಆ ಸಮಯ ಬೇಗ ಓಡದೆ, ಮುಷ್ಕರಕ್ಕೆ ಕುಳಿತಂತೆ ನಿಂತು ಬಿಡುತ್ತಿತ್ತು. ದಿನಾ ಊಟಕ್ಕೆ ಕುಳಿತಾಗ ಹೊಸ ಉಪ್ಪಿನಕಾಯಿ ಕೇಳಿ, ಬೈಸಿಕೊಳ್ಳುವುದು ನಮಗೇನೂ ಬೇಸರ ತರಿಸುತ್ತಿರಲಿಲ್ಲ..
ಅಂತೂ ಇಂತೂ ಒಂದು ಶುಭ ದಿನ, ಧ್ಯಾನಸ್ಥವಾಗಿದ್ದ ಹೊಸ ಉಪ್ಪಿನಕಾಯಿ, ಜಾಡಿಯಿಂದ ಮುಕ್ತವಾಗಿ ಹೊರಬಂದು, ಮೊಸರನ್ನ, ಗಂಜಿಯ ಜೊತೆ ನಮ್ಮ ಬಾಯಿ ಸೇರಿದಾಗ, ಲೊಟ್ಟೆ ಹೊಡೆಯುತ್ತ ತಿನ್ನುವುದರಲ್ಲಿ ಅಷ್ಟು ದಿನದ ಕಾಯುವಿಕೆಯ ಶ್ರಮ ಸಾರ್ಥಕತೆ ಕಾಣುತ್ತಿತ್ತು .
ಉಪ್ಪಿನಕಾಯಿ ರಸವನ್ನೆಲ್ಲ ಊಟದಲ್ಲಿ ಸವಿದು, ಮಿಡಿ ಮಾವಿನಕಾಯಿಯನ್ನು ನೀರಲ್ಲಿ ತೊಳೆದು ಆಮೇಲೊಂದಿಷ್ಟು ಹೊತ್ತು ಚಾಕಲೇಟ್ ಅನ್ನು ಬಾಯಲ್ಲಿ ಇಟ್ಟುಕೊಂಡಂತೆ ಇಟ್ಟುಕೊಂಡು ಸವಿಯೋದಿತ್ತಲ್ಲ… ಅದು ಬಾಲ್ಯದ ಚಪ್ಪರಿಕೆಯ ದಿ ಬೆಫ್ಟ್ ಎಂಬಂಥದ್ದು.
ಈಗ ಜಾಡಿಗಳು ಅಟ್ಟ ಸೇರಿವೆ ಅಥವಾ ಕೇವಲ ಷೋಪೀಸ್‌ಗಳಾಗಿ ಕುಳಿತಿವೆ. ಉಪ್ಪಿನಕಾಯಿ, ಉಪ್ಪು ತುಂಬಿಡುವ ಜಾಡಿಗಳ ಜಾಗಕ್ಕೆ ಗಾಜಿನದೋ, ಪ್ಲಾಸ್ಟಿಕ್‌ನದೋ ಡಬ್ಬ, ಭರಣಿಗಳು ಬಂದಿವೆ.
ಜಾಡಿಯನ್ನು ನೋಡಿರದವರಿಗೆ ಈ ಬರಹ ಬಹುಶಃ ರುಚಿಸುವುದಿಲ್ಲ. ಆದರೆ ಜಾಡಿಯೊಳಗೆ ಕೈ ಹಾಕಿ ಮೆಲ್ಲನೆ ಉಪ್ಪಿನಕಾಯಿ ಕದ್ದು ತಿನ್ನುತ್ತಿದ್ದ ಕೆಲವರಿಗಾದರೂ ಈ ಬರಹ, ಜಾಡಿಯ ಉಪ್ಪು ಖಾರದಲ್ಲಿ ಮುಳುಗೆದ್ದ ಉಪ್ಪಿನಕಾಯಿಯ ನೆನಪನ್ನು ತಾರದೇ ಇರದು ಮತ್ತು ಆ ಪರಿಮಳದ ನೆನಪನ್ನು ಮನದೊಳಗೆ ಹರಿದಾಡಿಸದೇ ಇರದು..
-ರೂಪಶ್ರೀ ಕುಮಾರ್