Advertisement

Puttur ಚೂರಿ ಇರಿತ ಕಟ್ಟು ಕಥೆ ಶಂಕೆ; ಸೂತ್ರಧಾರನಿಗೆ ಖಾಕಿ ಶೋಧ

11:50 PM Aug 21, 2024 | Team Udayavani |

ಪುತ್ತೂರು: ಕೊಂಬೆಟ್ಟು ಸ.ಪ.ಕಾಲೇಜಿನ ವಿದ್ಯಾರ್ಥಿನಿಗೆ ಸಹಪಾಠಿ ವಿದ್ಯಾರ್ಥಿಯೋರ್ವ ಚೂರಿಯಿಂದ ಇರಿದಿರುವುದಾಗಿ ಆರೋಪಿಸಿ ಆಕೆ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಯ ವಿಚಾರಣೆಯ ಸಂದರ್ಭದಲ್ಲಿ ಮೇಲ್ನೋಟಕ್ಕೆ ಆರೋಪ ಕಟ್ಟು ಕಥೆ ಅನ್ನುವ ಅಂಶ ಕಂಡು ಬಂದಿದ್ದು, ಹೀಗಾಗಿ ಪ್ರಕರಣದ ಹಿಂದಿನ ಅಸಲಿ ಸೂತ್ರಧಾರನಿಗೆ ಖಾಕಿ ಪಡೆ ಶೋಧ ನಡೆಸುತ್ತಿದೆ.

Advertisement

ಏನಿದು ಪ್ರಕರಣ?
ಆ. 20ರ ಬೆಳಗ್ಗೆ 8.45ರ ಸುಮಾರಿಗೆ ಪುತ್ತೂರು ಕಾಲೇಜು ರಸ್ತೆಯ ಕಾಲು ಸಂಕದ ಬಳಿ ತನ್ನ ಮೇಲೆ ಚೂರಿ ಇರಿತ ನಡೆದಿದೆ ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿ ಈ ಕೃತ್ಯ ಎಸಗಿರುವುದಾಗಿ ಆಕೆ ಪೊಲೀಸ್‌ ಹೇಳಿಕೆ ನೀಡಿದ್ದಳು. ವಿದ್ಯಾರ್ಥಿನಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ವಿದ್ಯಾರ್ಥಿ ಹಿಂದೂ ಧರ್ಮಕ್ಕೆ ಸೇರಿದ್ದ ವಿಚಾರ ಊರಿಡೀ ಹಬ್ಬಿ ಎರಡೂ ಸಮುದಾಯವರು ಜಮಾಯಿಸಿದ್ದರು. ಪೊಲೀಸರು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನೋರ್ವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.

ಆರಂಭದಲ್ಲಿ ಚೂರಿ; ಹೇಳಿಕೆಯಲ್ಲಿ ಬ್ಲೇಡ್‌!
ಸಂತ್ರಸ್ತೆ ವಿದ್ಯಾರ್ಥಿನಿ ಹೇಳುವ ಪ್ರಕಾರ ಶ್ರೀಧರ್‌ ಭಟ್‌ ಅಂಗಡಿ ರಸ್ತೆಯಲ್ಲಿ ತಾನು ತೆರಳುತ್ತಿದ್ದ ವೇಳೆ ತನ್ನ ಕಾಲೇಜಿನ ಇನ್ನೊಂದು ತರಗತಿಯ ವಿದ್ಯಾರ್ಥಿ ಫಾಲೋ ಮಾಡುತ್ತಿದ್ದ. ನನಗೆ ಭಯ ಆಗಿತ್ತು. ಉಳಿದವರೂ ಓಡಿದ್ದು ನಾನೂ ಓಟಕ್ಕಿತ್ತೆ. ಆತ ನನ್ನ ಬಳಿ ಬಂದು ನಿನ್ನ ಸ್ನೇಹಿತೆಯ ಬದಲು ನಾನು ನಿನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಈ ವೇಳೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಆತ ಬ್ಲೇಡ್‌ನಿಂದ ಕೊಯ್ದು ಓಡಿದ್ದಾನೆ ಎಂದು ಆರೋಪಿಸಿದ್ದಳು. ಆರಂಭದಲ್ಲಿ ಚೂರಿಯಿಂದ ಇರಿತ ಎನ್ನುವ ಆರೋಪ ಕೇಳಿ ಬಂದಿದ್ದು, ಅದಾದ ಬಳಿಕ ಬ್ಲೇಡ್‌ನಿಂದ ಕೃತ್ಯ ಎನ್ನುವುದಾಗಿ ಸುದ್ದಿ ಹಬ್ಬಿತ್ತು.

ಸಿಸಿ ಟಿವಿಯಲ್ಲಿ ಇಲ್ಲ!
ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಪೊಲೀಸರು ಶ್ರೀಧರ ಭಟ್‌ ಅಂಗಡಿ ರಸ್ತೆ, ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಂಪರ್ಕ ರಸ್ತೆಯ ಸಿಸಿ ಕೆಮರಾಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿನಿ ತೆರಳುತ್ತಿದ್ದ ದೃಶ್ಯ ಕಂಡುಬಂದಿಲ್ಲ. ಅನಂತರ ಪೊಲೀಸರು ಕೊಂಬೆಟ್ಟು ಶಾಲಾ ಪರಿಸರದಲ್ಲಿನ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದು, ಈ ವೇಳೆಯೂ ಆಕೆ ಕಾಣಿಸಿಲ್ಲ. ಇನ್ನೊಂದೆಡೆ ವಿದ್ಯಾರ್ಥಿನಿ ಬೆಳಗ್ಗೆ ಬೊಳುವಾರಿನಲ್ಲಿ ರಿಕ್ಷಾದಿಂದ ಇಳಿದು ಕಾಲೇಜಿನ ಕಡೆಗೆ ಹೋಗುತ್ತಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಇನ್ನೊಂದೆಡೆ ಆರೋಪಿತ ವಿದ್ಯಾರ್ಥಿಯು ತನ್ನ ಸ್ನೇಹಿತನ ಜತೆಗೆ ನೆಲ್ಲಿಕಟ್ಟೆ ರಸ್ತೆ ಬಳಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ದೂರು ನೀಡಿದ ವಿದ್ಯಾರ್ಥಿನಿ ಹಾಗೂ ಆರೋಪಕ್ಕೆ ಒಳಗಾಗಿರುವ ವಿದ್ಯಾರ್ಥಿ ಎಲ್ಲಿಯೂ ಜತೆಯಾಗಿ ಬರುತ್ತಿದ್ದ ದೃಶ್ಯ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗದೇ ಇರುವುದರಿಂದ ಚೂರಿ ಇರಿತ ಇದು ಕಟ್ಟು ಕಥೆಯ ಎನ್ನುವ ಅನುಮಾನ ಮೂಡಿದೆ.

ಅದು ಎಡಿಟ್‌ ದೃಶ್ಯ?
ಸಿಸಿ ಕೆಮರಾದಲ್ಲಿನ ದೃಶ್ಯಗಳ ಬಗ್ಗೆ ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿನಿ ಗಮನಕ್ಕೆ ತಂದಾಗ ಇದು ಎಡಿಟ್‌ ಮಾಡಿದ ದೃಶ್ಯ ಎಂದು ಆಕೆ ಸಮರ್ಥಿಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಗಾಯ ಇರಲಿಲ್ಲ ಎಂದ ಸಹಪಾಠಿಗಳು
ವಿದ್ಯಾರ್ಥಿನಿ ಬೆಳಗ್ಗೆ ಕಾಲೇಜಿಗೆ ಬಂದ ವೇಳೆ ಆಕೆಯ ಕೈಯಲ್ಲಿ ಯಾವುದೇ ಗಾಯಗಳೂ ಇರಲಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಹಾಗಾಗಿ ಇದಾದ ಅನಂತರ ಆದ ಗಾಯ ಇರಬಹುದು ಎಂದು ಶಂಕಿಸಲಾಗಿದೆ. ಆಕೆಯ ಕೈಗೆ ಗೀರಿದವರು ಯಾರು, ಯಾವ ಕಾರಣಕ್ಕೆ ಎನ್ನುವ ಅಂಶ ನಿಗೂಢವಾಗಿದೆ.

ವಿದ್ಯಾರ್ಥಿ ಬಿಡುಗಡೆ
ವಿದ್ಯಾರ್ಥಿನಿಯ ಆರೋಪಕ್ಕೆ ಪೂರಕವಾಗಿ ಯಾವುದೇ ಸಾಕ್ಷಿÂಗಳು ಲಭ್ಯವಾಗದ ಕಾರಣ ಪೊಲೀಸರು ರಾತ್ರಿಯೇ ಆರೋಪಿತ ವಿದ್ಯಾರ್ಥಿಯನ್ನು ಹೆತ್ತವರ ಜತೆ ಮನೆಗೆ ಕಳುಹಿಸಲಾಗಿದೆ. ಈ ಮಧ್ಯೆ ವಿದ್ಯಾರ್ಥಿನಿ ನೀಡಿದ ದೂರಿನ ಪ್ರಕಾರ ಆತನ ವಿರುದ್ಧ ಪೋಕೊÕ ಕಾಯ್ದೆ ಅಡಿ ದೂರು ಸ್ವೀಕರಿಸಿದ್ದಾರೆ. ಆತ ತಪ್ಪು ಮಾಡಿಲ್ಲ ಎಂದಾದ ಮೇಲೆ ದೂರು ದಾಖಲಿಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಬುಧವಾರ ಹಿಂದೂ ಸಂಘಟನೆಯ ಮುಖಂಡರು ಬಾಲಕನ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ.

ಸೂತ್ರಧಾರ ಯಾರು?
ವಿದ್ಯಾರ್ಥಿಗಳಿಬ್ಬರ ಜಗಳಕ್ಕೆ ಕೋಮು ಬಣ್ಣ ನೀಡಿರುವುದೇ ಪ್ರಕರಣ ಈ ಹಂತಕ್ಕೆ ತಲುಪಲು ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಚೂರಿ ಇರಿತ ಎನ್ನುವ ಹೇಳಿಕೆಯ ಹಿಂದೆ ಯಾವುದಾದರೂ ಸಂಘಟನೆ, ವ್ಯಕ್ತಿಗಳ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸೂತ್ರಧಾರನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಸತ್ಯಾಸತ್ಯತೆ ಆಧರಿಸಿ ವರದಿ: ಎಸ್‌ಪಿ
ಚೂರಿ ಇರಿತದ ಬಗ್ಗೆ ವಿದ್ಯಾರ್ಥಿನಿ ದೂರಿನ ಅನ್ವಯ ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಹೊರಬರುವ ಸತ್ಯಾಸತ್ಯತೆಯನ್ನು ಆಧರಿಸಿ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಹೇಳಿದ್ದಾರೆ. ಪುತ್ತೂರು ನಗರ ಠಾಣೆಗೆ ಭೇಟಿ ನೀಡಿದ ಅವರು ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ಪ್ರಗತಿಯಲ್ಲಿದೆ. ಹಾಗಾಗಿ ಹೆಚ್ಚಿನ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕಾನೂನಿನ ನೆಲೆಯಲ್ಲಿ ಪಾರದರ್ಶಕ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದರು.

ದೂರಿನಲ್ಲಿ ಏನಿದೆ..?
ತಾನು ವ್ಯಾಸಾಂಗ ಮಾಡುತ್ತಿರುವ ಪುತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ, ಬಾಲಕಿಯ ಹಿಂದುಗಡೆಯಿಂದ ಆಕೆಯ ಪರಿಚಯದ ಆರೋಪಿತನಾದ ಬಾಲಕನು ಹಿಂಬಾಲಿಸಿಕೊಂಡು ಬಂದು ಪ್ರೀತಿಸುತ್ತಿರುವ ವಿಷಯವಾಗಿ ಮಾತನಾಡಿದ್ದಾನೆ. ಇದನ್ನು ನಿರಾಕರಿಸಿದ್ದು, ಕೋಪಗೊಂಡ ಆತ ಯಾವುದೋ ಹರಿತವಾದ ಆಯುಧದಿಂದ ಕೈಗೆ ತಿವಿದು ಪರಾರಿಯಾಗಿದ್ದ ಎಂದು ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next