Advertisement

ಮಕ್ಕಳ ಸಾಹಿತ್ಯ ಪರಿಷತ್‌ನಿಂದ ನಿತ್ಯವೂ ಗಿಡ ನೆಡುವ ಕಾರ್ಯ

11:09 AM Jul 01, 2019 | Suhan S |

ಚನ್ನರಾಯಪಟ್ಟಣ: ವಿಶ್ವ ಪರಿಸರ ದಿನಾಚರಣೆ ಎಂದರೆ ಒಂದು ದಿವಸಕ್ಕೆ ಮಾತ್ರ ಸೀಮಿತವಾಗುತ್ತದೆ, ಆದರೆ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಳೆದ 26 ದಿವಸದಿಂದ ನಿರಂತರವಾಗಿ ಸಾವಿರಾರು ಗಿಡ ನೆಡುವ ಮೂಲಕ ವಿಶೇಷ ವಾಗಿ ಪರಿಸರ ಮಾಸಾಚರಣೆ ಮಾಡಿದ್ದಾರೆ.

Advertisement

ಪರಿಸರ ದಿನಾಚರಣೆ ಎಂದರೆ ಒಂದು ದಿನ ಎರಡ್ಮೂರು ಗಿಡ ನೆಟ್ಟು ಕಾರ್ಯಕ್ರಮ ಆಯೋಜನೆ ಮಾಡಿ ನೆರೆದಿದ್ದ ಮಕ್ಕಳಿಗೆ ಹಾಗೂ ಸಭಿಕರಿಗೆ ಭಾಷಣ ಮಾಡುತ್ತಾರೆ. ಆದರೆ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಹಾಗೂ ಭೂಮಿ ಉಳಿಸಿ ಆಂದೋಲನ ಸಮಿತಿ ವಿನೂತನವಾಗಿ 26 ದಿವಸ ನಿರಂತರವಾಗಿ ಗಿಡ ನೆಟ್ಟು ಆಚರಣೆ ಮಾಡಿದಲ್ಲದೇ ಸಾವಿರಾರು ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್‌ ಬಳಕೆ ಮಾಡದಂತೆ, ನೀರಿನ ಮಿತ ಬಳಕೆ ಹಾಗೂ ಪರಿಸರ ಉಳಿವಿಗೆ ಜನತೆ ವಹಿಸಬೇಕಾದ ಅಗತ್ಯ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಗಿಡ ನಾಟಿ: ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಆವರಣ, ದೇವಾಲಯ, ಚರ್ಚ್‌, ಸರ್ಕಾರಿ ಆಸ್ಪತ್ರೆ, ರಾಜ್ಯ ರಸ್ತೆ ಸಾರಿಗೆ ನಿಗಮ, ಅನಾಥಾಶ್ರಮ, ಪೊಲೀಸ್‌ ಠಾಣೆ ಆವರಣ, ಸರ್ಕಾರಿ ವಸತಿ ನಿಲಯಗಳು, ವಸತಿಶಾಲೆಗಳು, ಗ್ರಾಮಠಾಣಾ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಗಿಡ ಬೆಳೆಯಲು ಯೋಗ್ಯವಾದ ಸ್ಥಳ ಆಯ್ಕೆ ಮಾಡಿಕೊಂಡು ಸಾವಿರಾರು ಗಿಡ ನಾಟಿ ಮಾಡಿದಲ್ಲದೇ ಅಲ್ಲಲ್ಲಿ ಸಂವಾದ ನಡೆಸಿ ಪರಿಸರ ಜಾಗೃತಿ ಮಾಹಿತಿ ನೀಡಿದಲ್ಲದೇ, ಪರಿಸರ ನಾಶದಿಂದ ಆಗುತ್ತಿರುವ ತೊಂದರೆಯನ್ನು ಮಕ್ಕಳು, ರೈತರು ಹಾಗೂ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಉತ್ತಮ ಸ್ಪಂದನೆ: ಜೂ.5ರಂದು ಪ್ರಾರಂಭವಾದ ಗಿಡ ನೆಡುವ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರು ನೇರವಾಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಶಾಲೆಯ ಆವರಣದಲ್ಲಿ ಗಿಡ ನೆಟ್ಟಕೊಟ್ಟರೆ ತಾವು ಸಸಿಗಳನ್ನು ಪೋಷಣೆ ಮಾಡುವುದಾಗಿ ಹೇಳುವ ಮೂಲಕ ನೂರಾರು ಶಿಕ್ಷಕರು ಪರಿಸರ ಪ್ರೇಮ ವನ್ನು ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರೂ ಗಿಡ ನೆಟ್ಟರು: ಬಾಗೂರು ಹೋಬಳಿ ಓಬಳಾಪುರ ಗ್ರಾಮಸ್ಥರು, ನಾಗರನವಿಲೆ ದೇವಾಲಯ ಆಡಳಿತ ಮಂಡಳಿ ಸ್ವತಃ ಮುಂದೆ ಬಂದು ತಲಾ 250 ಗಿಡಗಳನ್ನು ನೆಡಲು ಸ್ಥಳವಕಾಶ ನೀಡಿದ್ದರು. ಪಟ್ಟಣ ಸಮೀಪದ ಅಲ್ಫೋನ್ಸ್‌ನಗರ ಕ್ರಿಶ್ಚಿಯನ್‌ ಚರ್ಚ್‌ ಧರ್ಮ ಗುರುಗಳಾದ ಡೇವಿಡ್‌ ಪ್ರಕಾಶ್‌ ಸುಮಾರು 500 ಗಿಡ ನೆಡಲು ಸ್ಥಳಾವಕಾಶ ಮಾಡಿಕೊಟ್ಟರಲ್ಲದೇ ಅವುಗಳನ್ನು ಪೋಷಿಸುವುದಾಗಿ ಭರವಸೆ ನೀಡಿದ್ದಾರೆ.

Advertisement

ಪುರಸಭೆಯ ಅಧಿಕಾರಿಗಳು ಹೌಸಿಂಗ್‌ ಬೋರ್ಡ್‌, ಕುಡಿಯುವ ನೀರು ಶುದ್ಧೀಕರಣ ಘಟಕದಲ್ಲಿ ಸುಮಾರು 400 ಗಿಡ ನೆಡಲು ಸಹಕಾರ ನೀಡಿದ್ದರು.

ಪರಿಸರ ಪ್ರೇಮಿಯಿಂದ ಗಿಡ ಕೊಡುಗೆ: ತಾಲೂಕಿನಲ್ಲಿ ನಿರಂತರ 26 ದಿವಸ ಸಾವಿರಾರು ಗಿಡ ನೆಟ್ಟಿರುವ ಎಲ್ಲಾ ಗಿಡವನ್ನು ಪರಿಸರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಶೋಕ ಅವರು ತಮ್ಮ ತೋಟದಲ್ಲಿ ಬೆಳೆಸಿದ್ದರು. ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಉಚಿತವಾಗಿ ಗಿಡ ನೀಡುತ್ತಿದ್ದರು. ಆದರೆ ಈ ಬಾರಿ ತಾವೇ ಮುಂದೆ ನಿಂತು 50 ಗ್ರಾಮದ ಶಾಲಾ ಆವರಣ ಹಾಗೂ 10 ಸಾರ್ವಜನಿಕ ಸ್ಥಳದಲ್ಲಿ ಗಿಡ ನಾಟಿ ಮಾಡಿರುವುದು ವಿಶೇಷ.

ಇಂದು ಸಮಾರೋಪ: ನಿರಂತರವಾಗಿ ನಡೆದ ಪರಿಸರ ದಿನಾಚರಣೆಗೆ ಜು.1 ರಂದು ಸಮಾರೋಪ ನಡೆಯಲಿದೆ. ಮುಖ್ಯ ಮಂತ್ರಿ ಸಂಸದೀಯ ಕಾರ್ಯದರ್ಶಿ ಎಂ.ಎ.ಗೋಪಾಲಸ್ವಾಮಿ, ಶಾಸಕ ಸಿ.ಎನ್‌.ಬಾಲಕೃಷ್ಣ, ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥಸ್ವಾಮೀಜಿ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ನವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳಿಗೆ ಉಚಿತವಾಗಿ ಗಿಡ ವಿತರಣೆ ಮಾಡುವುದಲ್ಲದೇ ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಿ ಪರಿಸರ ಉಳಿವಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು.

ಶ್ರಮಿಸಿದವರಿಗೆ ಸನ್ಮಾನ: ನಿರಂತರವಾಗಿ 26 ದಿವಸ ಗಿಡ ನೆಡಲು ಸಹಕಾರ ನೀಡಿದ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎ.ಎಂ.ಜಯರಾಂ, ಎ.ಎಲ್.ನಾಗೇಶ್‌, ಕೆ. ಶಾಮಸುಂದರ್‌, ಗೋವಿಂದ, ನೀಲಸ್ವಾಮಿ, ಅಭಿ, ಗುಪ್ತಾ ಇವರನ್ನು ಆದಿಚುಂಚನ ಗಿರಿ ಶಾಖಾ ಮಠದ ಶಂಭುನಾಥಸ್ವಾಮೀಜಿ ಹಾಗೂ ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್‌.ಅಶೋಕ್‌ ಅವರು ಗೌರವಿಸಲಿದ್ದಾರೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next