ಸೋಮೇನಹಳ್ಳಿ: ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವವರೆಗೂ ವಿರಮಿಸುವುದಿಲ್ಲ. ಈ ಭಾಗದ ಜನರಿಗೆ ಎತ್ತಿಹೊಳೆ ನೀರನ್ನು ಕೊಟ್ಟು ಶುದ್ಧ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಭರವಸೆ ನೀಡಿದರು.
ಸೋಮೇನಹಳ್ಳಿ ಬಸ್ ನಿಲ್ದಾಣದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಐದು ವರ್ಷ ಆಡಳಿತ ಪೂರ್ಣಗೊಳಿಸಿದರೂ ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ದೂರಿದ ಅವರು, ಮೋದಿ ಸುಳ್ಳು ಹೇಳುವವರೇ ಹೊರೆತು ಕೆಲಸ ಮಾಡುವವರಲ್ಲ ಎಂದು ಆರೋಪಿಸಿದರು.
ಆಲೋಚಿಸಬೇಕಿದೆ: ರಾಹುಲ್ ಗಾಂಧಿ ಪ್ರಧಾನಿಯಾದರೆ ಬಡತನ ರೇಖೆಯೊಳಗಿನ ಕುಟುಂಬದವರ ಖಾತೆಗೆ ವರ್ಷಕ್ಕೆ 72 ಸಾವಿರ ರೂ. ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರ ಏನೇನು ಅಭಿವೃದ್ಧಿ ಕಾರ್ಯ ಮಾಡಿದೆ, ಬಿಜೆಪಿ ಏನು ಮಾಡಿದೆ ಎಂಬುದನ್ನು ಮತದಾರರು ಆಲೋಚಿಸಬೇಕಿದೆ. 2020-21ರೊಳಗಾಗಿ ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಯಲಿದೆ. ಕೃಷ್ಣಾ ನದಿ ನೀರು ಈಗಾಗಲೇ ನಗರಗೆರೆ ಹೋಬಳಿಯ ಕೆಲವು ಗ್ರಾಮಗಳಲ್ಲಿ ಹರಿಯುತ್ತಿದೆ. ಈ ನೀರು ಹರಿಸಲು ಮುಂದಾಗುತ್ತೇವೆ ಎಂದು ಹೇಳಿದರು.
3ನೇ ಬಾರಿಗೆ ಗೆಲ್ಲಿಸಿ ಕಳುಹಿಸಿದರೆ ಶುದ್ಧ ಕುಡಿಯುವ ನೀರು ನೀಡುವ ಜೊತೆಗೆ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿ ನಿರುದ್ಯೋಗ ಸಮಸ್ಯೆ ಪರಿಹರಿಸಲಾಗುವುದು. ರೈತರಿಗೆ ಹಾಲಿಗೆ ಪ್ರೋತ್ಸಾಹ ಧನವನ್ನು 5 ರೂ. ಗಳಿಂದ 6 ರೂ.ಗೆ ಹೆಚ್ಚಿಸಿದ್ದೇವೆ. ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಚುನಾವಣೆಗೆ ಸ್ಪರ್ಧಿಸಿದಾಗ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತ ತಲೆ ಹಾಕುವುದಿಲ್ಲ ಎಂದು ದೂರಿದರು.
ಪಿಯು ಕಾಲೇಜು ಮಂಜೂರು ಭರವಸೆ: ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಸೋಮೇನಹಳ್ಳಿ ಚಿತ್ರಾವತಿ ನದಿಯ ಹತ್ತಿನ ಒಂದು ಚೆಕ್ ಡ್ಯಾಂ ನಿರ್ಮಾಣ, ಸಮುದಾಯ ಭವನ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ದುರಸ್ತಿ ಕಾಮಗಾರಿ ಮುಂತಾದವುಗಳನ್ನು ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯು ಕಾಲೇಜು ಮತ್ತು ಆಸ್ಪತ್ರೆಗೆ ಮುಂಜೂರು ಮಾಡಿಸುತ್ತೇವೆ. ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕುಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮೈತ್ರಿ ಸರ್ಕಾರ ಮಾಡಿದ್ದು, ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತು ಸದಸ್ಯೆ ಗಾಯತ್ರಿ, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ, ತಾಪಂ ಉಪಾಧ್ಯಕ್ಷ ಜಿ.ಬಿ.ಭೆ„ರಾರೆಡ್ಡಿ, ಕೃಷ್ಣೇಗೌಡ ಭಾಗವಹಿಸಿದ್ದರು.