Advertisement

ಅರಣ್ಯವಾಸಿಗಳ ಮನೆಗೆ ಶಾಶ್ವತ ಬೆಳಕು

10:41 PM Jan 09, 2020 | mahesh |

ಬೆಳ್ತಂಗಡಿ: ತಾಲೂಕಿನ ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಾಳಿಗೆ ನಿವಾಸಿಗ‌ಳಿಗೆ ಮಾತ್ರ ಕಗ್ಗತ್ತಲಿಂದ ಶಾಶ್ವತ ಬೆಳಕಿನೆಡೆಗೆ ಸಾಗುವ ಭಾಗ್ಯ ಒದಗಿ ಬಂದಿದೆ.

Advertisement

ಮಾಳಿಗೆ ಪರಿಸರದಲ್ಲಿ 29 ಕುಟುಂಬಗಳು ಶತಮಾನ ದಿಂದ ಕೃಷಿ ಚಟುವಟಿಕೆಯೊಂದಿಗೆ ಬದುಕು ಸಾಗಿಸು ತ್ತಿದ್ದಾರೆ. ಆದರೆ ಚಿಮಿಣಿ, ಸೋಲಾರ್‌ ಸಂಕಷ್ಟ ಮಾತ್ರ ತಪ್ಪಿರಲಿಲ್ಲ. ಅರಣ್ಯ ವಿಭಾಗದ ಅನುಮತಿ ನಿರಾಕರಣೆ ಯಿಂದ ವಿದ್ಯುತ್‌ ಸಂಪರ್ಕ ಮರೀಚಿಕೆಯಾಗಿತ್ತು.

ವನ್ಯಜೀವಿ ವಿಭಾಗದಿಂದ ಸಮ್ಮತಿ
ಪ್ರಸಕ್ತ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಸುಲ್ಕೇರಿಮೊಗ್ರು ಗ್ರಾಮದ ಮಾಳಿಗೆ
ಬಯಲು ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಕೇಂದ್ರದ ಪರಿಸರ ಸಚಿವಾ ಲಯ (ವನ್ಯಜೀವಿ ವಿಭಾಗ) ಸಮ್ಮತಿ ಸೂಚಿಸಿದೆ.

ಮಾರ್ಚ್‌ ಒಳಗೆ ಕಾಮಗಾರಿ
2016ರಲ್ಲಿ ಮೆಸ್ಕಾಂನಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ವಿವಿಧ ಇಲಾಖೆಗಳ ಅನುಮೋದನೆ ಪಡೆದು ಅಂತಿಮವಾಗಿ ಕೇಂದ್ರ ಪರಿಸರ ಸಚಿವಾಲಯದ ಮುಂದೆ ಬಂದಿತ್ತು. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯದಿಂದ ಇದಕ್ಕೆ ಬೆಂಬಲವೂ ಲಭಿಸಿತ್ತು. ಆಗಸ್ಟ್‌ 20/ 2019ರಂದು ನಡೆದ ಸಭೆಯಲ್ಲಿ ಈ ಕಾಮಗಾರಿಗೆ ಅಂತಿಮ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ. ಮೆಸ್ಕಾಂ ಇಲಾಖೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಆ ಮೂಲಕ ಶತಮಾನದಿಂದ ವಿದ್ಯುತ್‌ ವಂಚಿತರಾಗಿರುವ ಈ ಪ್ರದೇಶದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

ಜ. 8ರಂದು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಬೆಳ್ತಂಗಡಿಯಲ್ಲಿ ನಡೆದ ಅರಣ್ಯವಾಸಿ ಗಳೊಂದಿಗಿನ ಸಭೆಯಲ್ಲಿ ಮಾರ್ಚ್‌ ಒಳಗಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಭರವಸೆಯನ್ನು ಶಾಸ‌ಕ ಹರೀಶ್‌ ಪೂಂಜ ನೀಡಿದ್ದರಲ್ಲದೆ, ಇದಕ್ಕೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು.

Advertisement

11 ಕೆ.ವಿ. – ಭೂಗತ ಕೇಬಲ್‌
ಭಾರತ ಸರಕಾರದ ಅಧಿಸೂಚನೆ ಸಂಖ್ಯೆ ಎಫ್‌.ನಂ. 25/2012-ಎಫ್‌ಸಿ ದಿನಾಂಕ 05/02 2014ರ ಆದೇಶದಂತೆ ರಾಷ್ಟ್ರೀಯ ಉದ್ಯಾನವನದ ಒಳಗೆ ಭೂಗತ ಕೇಬಲ್‌ ಮೂಲಕ ವಿದ್ಯುತ್‌ ಮಾರ್ಗ ನಿರ್ಮಿಸಲು ಅವಕಾಶವಿರುತ್ತದೆ. ಇದರಡಿ ಅರ್ಜಿ ಪರಿಶೀಲಿಸಿ ಇದೀಗ 11 ಕೆ.ವಿ. ವಿದ್ಯುತ್‌ ಲೈನ್‌ ಎಳೆಯಲು ಸಚಿವಾಲಯ ಅನುಮೋದನೆ ನೀಡಿದೆ. ರಾಷ್ಟ್ರೀಯ ಉದ್ಯಾನವನದ ಒಳಗೆ 647 ಮೀ. ಉದ್ದ ಲೈನ್‌ ಹಾದು ಹೋಗಲಿದೆ.

ವಿದ್ಯುತ್‌ ಸಂಪರ್ಕ
ಈ ಪ್ರದೇಶದವರಿಗೆ ವಿದ್ಯುತ್‌ನ ಬೇಡಿಕೆ ದಶಕಗಳಿಂದ ಕೇಳಿಬಂದಿತ್ತು. ಇದೀಗ 29 ಕುಟುಂಬಗಳಿಗೆ ಮಾರ್ಚ್‌ ಒಳಗಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತದೆ.
 - ಹರೀಶ್‌ ಪೂಂಜ, ಶಾಸಕರು

ವಿದ್ಯುತ್‌, ರಸ್ತೆ ಸಂಪರ್ಕ
ರಾಷ್ಟ್ರೀಯ ಉದ್ಯಾನವನದೊಳಗೆ, ಅರಣ್ಯದಂಚಿನ ನಿವಾಸಿಗಳಿಗೆ ವಿದ್ಯುತ್‌, ರಸ್ತೆ ಸಂಪರ್ಕವನ್ನು ಸಂಬಂಧಪಟ್ಟ ಇಲಾಖೆಗಳು ಮಾಡಲಿ.
 - ಶೇಖರ ಕುಕ್ಕೇಡಿ, ಜಿ.ಪಂ. ಸದಸ್ಯರು, ಅಳದಂಗಡಿ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next