ಹುಬ್ಬಳ್ಳಿ: ನವೋದ್ಯಮಗಳ ಸ್ಥಾಪನೆ ವಿಚಾರದಲ್ಲಿ ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಸಮಸ್ಯೆ-ಅವಕಾಶಗಳಿಗೆ ಕೊರತೆ ಇಲ್ಲ. ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಮೂಲಕ ಅವಕಾಶಗಳನ್ನು ಯುವಕರು ತಮ್ಮದಾಗಿಸಿಕೊಳ್ಳುವ ಉದ್ಯಮ ಸಾಮರ್ಥ್ಯ ತೋರಬೇಕಾಗಿದೆ ಎಂದು ಕೆಎಲ್ಇಯ ಸಿಟಿಐಇ ನಿರ್ದೇಶಕ ಡಾ| ನಿತಿನ್ ಕುಲಕರ್ಣಿ ಹೇಳಿದರು.
ಟೈ ಹುಬ್ಬಳ್ಳಿಯಿಂದ ಡೆನಿಸನ್ಸ್ ಹೋಟೆಲ್ನಲ್ಲಿ ಶನಿವಾರ ಆಯೋಜಿಸಿದ್ದ ಮೊದಲ ಯುವ ಉದ್ಯಮದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 2012ರಲ್ಲಿ ನವೋದ್ಯಮ ಸ್ಥಾಪನೆ ವಿಚಾರದಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಇದೀಗ ಮೂರನೇ ಸ್ಥಾನಕ್ಕೇರಿದೆ. 2018ರಲ್ಲಿ ಸುಮಾರು 7,700 ನವೋದ್ಯಮ ಆರಂಭಗೊಂಡಿವೆ ಎಂದರು.
ಭಾರತದಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ನಮ್ಮ ಕಣ್ಣ ಮುಂದೆಯೇ ಅನೇಕ ಸಮಸ್ಯೆಗಳು ಕಾಣುತ್ತಿವೆ. ಅವುಗಳನ್ನು ನಾವೂ ಅನುಭವಿಸುತ್ತೇವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಚಿಂತನೆ, ಅನ್ವೇಷಣೆ, ಸಕ್ರಿಯತೆಯ ಯತ್ನ ಅವಶ್ಯವಾಗಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗುವ ನವೋದ್ಯಮಿಗಳು ಕೇವಲ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತರಾಗದೆ, ಜಾಗತಿಕವಾಗಿ ಚಿಂತಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಸಂದರ್ಭದಲ್ಲಿ ಕೈಗೊಂಡ ಪ್ರೊಜೆಕ್ಟ್ ಮಾದರಿಗಳಿಗೆ ವಾಣಿಜ್ಯ ಉತ್ಪನ್ನ ರೂಪ ನೀಡಲು ಯತ್ನಿಸುತ್ತಿಲ್ಲ. ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ 6,500ಕ್ಕೂ ಹೆಚ್ಚು ಪ್ರೊಜೆಕ್ಟ್ ಮಾದರಿಗಳು ಸಿದ್ಧಗೊಳ್ಳುತ್ತಿವೆ. ಅದರಲ್ಲಿ ಒಂದು ಸಹ ವಾಣಿಜ್ಯ ಉತ್ಪನ್ನ ರೂಪ ಪಡೆಯುತ್ತಿರಲಿಲ್ಲ. 2015ರಲ್ಲಿ ಐದು ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ಗಳಿಗೆ ವಾಣಿಜ್ಯ ಉತ್ಪನ್ನ ರೂಪ ನೀಡಿದ್ದು, ಇದೀಗ ವಿವಿಧ ಪ್ರೊಜೆಕ್ಟ್ಗಳು ವಾಣಿಜ್ಯ ಉತ್ಪನ್ನ ರೂಪ ಪಡೆಯುತ್ತಿವೆ ಎಂದು ತಿಳಿಸಿದರು.
ತರುಣ ಮಹಾಜನ ಮಾತನಾಡಿ, ಉದ್ಯಮಗಳ ಚಿಂತನೆ, ನವೋದ್ಯಮದ ಯತ್ನಕ್ಕೆ ಟೈ ಹುಬ್ಬಳ್ಳಿ ಉತ್ತಮ ವೇದಿಕೆಯಾಗಿದೆ. ಇಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ಉದ್ಯಮ ಉತ್ತೇಜಕ ಪ್ರೋತ್ಸಾಹ ದೊರೆಯುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬಿಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ವಿಜೇತರಾದ ಪೆಸ್ಟೀನ್ ಹಾಗೂ ಸ್ಪೈಲ್-5 ತಂಡಗಳಿಗೆ ಬಹುಮಾನ ನೀಡಲಾಯಿತು. ಟೈ ಹುಬ್ಬಳ್ಳಿಯ ಅಜಯ ಹಂಡಾ, ಬ್ರಿಜೇಶ ಇನ್ನಿತರರಿದ್ದರು. ವೀರನಾರಾಯಣ ಹಾಗೂ ಮುತ್ತು ನಿರೂಪಿಸಿದರು.