ಬೆಂಗಳೂರು: ಬಿತ್ತಿದ ಬೀಜಗಳೆಲ್ಲ ಬೆಳೆಯಾಗುವುದಿಲ್ಲ ಹಾಗೇ ಬರೆದವುಗಳೆಲ್ಲಾ ಕಾವ್ಯವಾಗುವುದಿಲ್ಲ. ಬರವಣಿಗೆಯಲ್ಲಿ ಯಾವಾಗಲೂ ಸತ್ವ ಇರಬೇಕು ಎಂದು ಕವಿ ಡಾ.ದೊಡ್ಡರಂಗೇಗೌಡ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಧ್ಯಾನ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಮಮತಾ ವಾರನಹಳ್ಳಿ ಅವರ “ಅವಿಶ್ರಾಂತ ಅಲೆಗಳು’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮಹಿಳಾ ವಲಯದಲ್ಲೂ ಉತ್ತಮ ಲೇಖಕಿಯರ ಪರಿಚಯವಾಗುತ್ತಿರುವುದು ಖುಷಿ ಪಡುವ ಸಂಗತಿಯಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಬರೆದಿದ್ದೇಲ್ಲಾ ಸಾಹಿತ್ಯ ಎನ್ನುವ ವಾತಾರವಣ ನಿರ್ಮಾಣವಾಗುತ್ತಿದೆ. ಹದಿನೈದು -ಇಪ್ಪತ್ತು ದಿನಗಳಲ್ಲಿ ಪುಸ್ತಕಗಳು ಹೊರಬರುತ್ತಿವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಸತ್ವಯುತ ಸಾಹಿತ್ಯ ಹೊರಹೊಮ್ಮಬೇಕು. ಪಂಪ, ರನ್ನ, ರಾಘವಾಂಕ, ಕುವೆಂಪು, ದ.ರಾ.ಬೇಂದ್ರೆ, ಅಡಿಗರು ಸೇರಿದಂತೆ ಹಲವು ಹಿರಿಯ ಸಾಹಿತಿಗಳನ್ನು ಅಭ್ಯಾಸಿಸಬೇಕು. ಆಗ ಸಾಹಿತ್ಯದ ರುಚಿ ಗತಿಸುತ್ತಿದೆ ಎಂದರು.
ಲೇಖಕಿ ಮಮತಾ ವಾರನಹಳ್ಳಿ ಅವರ “ಅವಿಶ್ರಾಂತ ಅಲೆಗಳು’ ಕವನ ಸಂಕಲನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಕೃತಿಯಲ್ಲಿ ಹಲವು ಉತ್ತಮವಾದ ಕವಿತೆಗಳಿವೆ. ಒಂದೊಂದು ಕವಿತೆ ಹೊಸತನ್ನು ಓದುಗನಿಗೆ ನೀಡುತ್ತದೆ. ಇವರ ಲೇಖನಿಯಿಂದ ಮತ್ತಷ್ಟು ಕವಿತೆಗಳು ಹೊರಹೊಮ್ಮಲಿ ಎಂದರು.
ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಲೇಖಕರು ಪರಿಚಯವಾಗುವ ಅಗತ್ಯವಿದೆ. ಹೊಸ ಲೇಖಕರ ಪರಿಚಯವಾದರೆ ಹೊಸತನ ಹುಟ್ಟಿಕೊಳ್ಳುತ್ತದೆ. ಆ ಹಿನ್ನೆಲೆಯಲ್ಲಿ ಮತ್ತಷ್ಟು ಯುವ ಸಾಹಿತಿಗಳು ಸಾಹಿತ್ಯಲೋಕಕ್ಕೆ ಬರಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತ ರಘುನಾಥ ಚ.ಹ, “ಅವಿಶ್ರಾಂತ ಅಲೆಗಳು’ ಕವನ ಸಂಕಲನದ ಬಗ್ಗೆ ಮಾತನಾಡಿದರು. ಕಥೆಗಾರ ಕಂಡಿನಾಗ ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ಕ್ಷೇತ್ರದ ಅಧ್ಯಕ್ಷ ವೈಬಿಎಚ್ ಜಯದೇವ್,ಲೇಖಕಿ ಮಮತಾ ವಾರನಹಳ್ಳಿ ಉಪಸ್ಥಿತರಿದ್ದರು.