Advertisement
ಹೆಣ್ಣು ನಿಸರ್ಗದ ಸುಂದರ ಸೃಷ್ಟಿ. ಆಕೆ ಸಂಯಮಮೂರ್ತಿ, ಸಹನಾಶೀಲಳು- ಇತ್ಯಾದಿ ಆಕೆಯ ಬಗ್ಗೆ ಉಪಮೆ- ರೂಪಕಗಳು ಹೇರಳ. ಹೋದಲ್ಲಿ ಬಂದಲ್ಲಿ ಇದನ್ನು ಕೇಳಿದಾಗಲೆಲ್ಲ ಹೆಣ್ಣು ಹಿಗ್ಗುತ್ತಾಳೆ. ಈ ಸಂಯಮ- ಸಹನೆಗಳನ್ನೆಲ್ಲ ಆಕೆಗೆ ಕಲಿಸಿದ್ದು, ಋತುಚಕ್ರವೇ ಇರಬೇಕು ಎನ್ನುವುದು ನನ್ನ ಸಂದೇಹ. ಋತುಚಕ್ರದ ಆರಂಭದಲ್ಲಿ ಆ ಮೂರು ದಿನಗಳನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.
Related Articles
Advertisement
ಈಗ ಅದನ್ನೆಲ್ಲ ಬರೆದು ಪ್ರಕಟಿಸುವ ಧೈರ್ಯ ಇದ್ದಂತೆ ಆ ದಿನಗಳಲ್ಲಿ ಇರಲಿಲ್ಲ. ಮೊದಲಬಾರಿ ಋತುಮತಿಯಾದ ಸಂದರ್ಭವಂತೂ ಭಯಂಕರ ಗೊಂದಲ, ತಳಮಳ, ಜೊತೆಗೆ ಬದುಕಿನ ಬಗ್ಗೆಯೂ ಹತಾಶೆಯ ಭಾವವನ್ನು ಮೂಡಿಸಿತ್ತು. ಹಳ್ಳಿಗಳಲ್ಲಿ ಆಗ ಈಗಿನಂತೆ ಶೌಚಾಲಯಗಳು ಇರಲಿಲ್ಲ. ಹಳ್ಳ ಇಲ್ಲವೇ ಬೇಣವೇ ಗತಿಯಾಗಿತ್ತು. ಪ್ಯಾಡುಗಳ ಬಳಕೆ ಈಗಿನಷ್ಟು ಪ್ರಸಿದ್ಧಿ ಪಡೆದಿರಲಿಲ್ಲ. ಬಟ್ಟೆ ಪ್ಯಾಡುಗಳೇ ನಮ್ಮ ಸಂಗಾತಿಗಳಾಗಿದ್ದವು.
ಯಾರೊಂದಿಗೂ ಹೇಳಿಕೊಳ್ಳಲಾಗದೇ ಮುಜುಗರದಿಂದ ಒದ್ದಾಡಿದ್ದೆ. ಅದ್ಹೇಗೋ ಅಕ್ಕನಿಗೆ ತಿಳಿದು ಆಕೆ ಅಮ್ಮನಿಗೆ ಹೇಳಿದಾಗ, ಮೊದಲೇ ಪೀಚಲು ದೇಹದ ನನಗೆ ಬಹುಬೇಗ ಋತುಮತಿಯಾದ ಕಾರಣ ಮತ್ತು ಅದು ಏಳೆಂಟು ದಿನಗಳವರೆಗೂ ಮುಂದುವರಿದು, ರಕ್ತಹೀನತೆ ಉಂಟಾದೀತೆಂದು ಅಮ್ಮ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಅದೇನೋ ಟಾನಿಕ್ಕು ಬರೆದುಕೊಟ್ಟಿದ್ದಷ್ಟೇ ಈಗ ನೆನಪು.
ಶಾಲೆಗೆ ಹೋಗುವಾಗ, ಬಟ್ಟೆ ಒದ್ದೆಯಾಗಿ ಅನುಭವಿಸಿದ ಕಿರಿಕಿರಿಗಳು ಸಾಕಷ್ಟು. ಆಗೊಮ್ಮ ಈಗೊಮ್ಮೆ ಹೊರಬಟ್ಟೆಗೂ ಕಲೆಯ ಗುರುತು ಮೂಡಿ ಗೆಳತಿಯರು “ಅದಾ…?’ ಎನ್ನುತ್ತಾ ಲೇವಡಿ ಮಾಡಿದ ಉದಾಹರಣೆಗಳು, ಅದನ್ನು ಉಳಿದವರು ನೋಡಿಯಾರೆಂಬ ನಾಚಿಕೆಯಲ್ಲಿ ಕುಳಿತಲ್ಲಿಂದ ಏಳದೇ ಬಸ್‌ಸ್ಟಾಂಡುಗಳಲ್ಲಿ ಕಲ್ಲಾಗಿ ಕೂತ ದಿನಗಳು ಎಲ್ಲವೂ ಹೆಣ್ಣಿನ ಬದುಕಿನ ಏಳುಬೀಳುಗಳನ್ನು, ಶಿಥಿಲತೆಯನ್ನು ಆಕೆ ಮಾತ್ರ ಸಹಿಸಬೇಕಾದ ಪ್ರಕೃತಿಯೇ ನೀಡಿದ ಶಿಕ್ಷೆ ಎಂಬಂತೆ ಒಂದು ಕ್ಷಣಕ್ಕೆ ಅನ್ನಿಸುವುದಿದೆ.
ಒಬ್ಬಳು ಗೆಳತಿಯ ಅನುಭವವಂತೂ ತೀರಾ ವಿಭಿನ್ನ. ಶೌಚಾಲಯಕ್ಕೆ ಹೋದಾಕೆಗೆ ತಾನು ಋತುಮತಿಯಾದ ಸಂಗತಿ ಗೊತ್ತಾಯಿತು. ಆದರೆ, ಅದು ತಿಂಗಳ ಮುಟ್ಟೆಂದು ಆಕೆಗೆ ತಿಳಿದಿರಲಿಲ್ಲ. ರಕ್ತಸ್ರಾವವಾಗುತ್ತಿರುವುದು ಯಾಕೆಂದು ಅರಿವಾಗಲಿಲ್ಲ. ಏನೂ ತೋಚದೇ ಹಳ್ಳದ ನೀರಿನಲ್ಲಿ ಎಲ್ಲ ತೊಳೆದು ಹೋಗಲೆಂದು ತಾಸುಗಟ್ಟಲೆ ಹಳ್ಳದ ನೀರಿನಲ್ಲಿ ಕುಳಿತೇ ಇದ್ದಳು.
ಹೊರಗೆ ಹೋಗಿ ಬರುವೆನೆಂದು ಹೇಳಿಹೋದ ಮಗಳು ಬರಲಿಲ್ಲವೆಂದು ಗಾಬರಿಯಾಗಿ ತಾಯಿ ಅಲ್ಲಿಗೆ ಬಂದರೆ, ನೀರಿನಲ್ಲಿ ಕುಳಿತ ಇವಳ ನೋಡಿ ಅಚ್ಚರಿಯಿಂದ ವಿಚಾರಿಸಿದರು. ಈಕೆ ಅಳುಮುಂಜಿ ಮುಖಮಾಡಿ ಸಂಗತಿ ತಿಳಿಸಿದಾಗ, ತಾಯಿ ನಕ್ಕು, ತಲೆ ನೇವರಿಸಿ ಆಕೆಗೆ ತಿಳಿಹೇಳಿದ್ದರು. ಶಾಲೆಯ ಬಾಲೆಯರಿಗೆ ತಿಂಗಳ ಮುಟ್ಟು ನಿಜಕ್ಕೂ ಕಿರಿಕಿರಿಯ ಸಂಗತಿ.
ಹೈಸ್ಕೂಲಿನ ದಿನಗಳಲ್ಲಂತೂ ವಿಪರೀತ ಅಸಹ್ಯ, ಕಿರಿಕಿರಿಯ ಕಾಲ. ಋತುಸ್ರಾವದ ಬಗ್ಗೆ ಅನುಭವವಿಲ್ಲದ ಮೊದಲ ಹಂತ ಅದು. ಬಿಂದಾಸ್ ಆಗಿ ಬದುಕುತ್ತಿದ್ದ ಹೆಣ್ಮಗು ಕ್ರಮೇಣ ಹೆಣ್ಣಾಗುವ ,ಹೆಣ್ಣಿನ ನಯವಿನಯ ಆವಾಹಿಸಿಕೊಳ್ಳುವ ಸಮಯ. ಪ್ರಾಯದಲ್ಲಿ ಅದು ಮೂರು ದಿನಗಳಿಗೆ ಸೀಮಿತವಾಗಿರಲಿಲ್ಲ. ಏಳೆಂಟು ದಿನಗಳಾದರೂ ನೋವು, ಹಿಂಸೆ, ಅಸಹಾಯಕತೆ ಕಾಡುತ್ತಿದ್ದವು. ಆ ದಿನಗಳನ್ನೆಲ್ಲ ನೆನೆಸಿಕೊಂಡರೆ, ಈಗಲೂ ಮನಸ್ಸು ತೇವಗೊಳ್ಳುತ್ತದೆ.
ಪಿರಿಯಡ್ ಟ್ರ್ಯಾಕಿಂಗ್ ಆ್ಯಪ್‌ಗ್ಳು: ನಿಮ್ಮ ಮುಟ್ಟಿನ ದಿನ ಯಾವತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವ, ಅದರ ಬಗ್ಗೆ ಮಾಹಿತಿ ಕೊಡುವ ಕೆಲವು ಆ್ಯಪ್‌ಗ್ಳು ಇಲ್ಲಿವೆ…
1. ಕ್ಲೂ: ಇದು ತುಂಬಾ ಸಿಂಪಲ್ ಆದ ಆ್ಯಪ್. ಈ ಆ್ಯಪ್ ಕೆಂಪು, ನೀಲಿ, ಹಸಿರು ಮತ್ತು ಬಿಳಿ ಬಣ್ಣದಲ್ಲಿ ನಿಮ್ಮ ಋತುಚಕ್ರದ ಮಾಹಿತಿಯನ್ನು ನೀಡುತ್ತದೆ. ನೀವು ಫೀಡ್ ಮಾಡುವ ಡೇಟಾದ ಆಧಾರದ ಮೇಲೆ ನಿಮಗೆ ಸಮಯಕ್ಕೆ ಸರಿಯಾಗಿ ಮಾಹಿತಿ ಸಿಗುತ್ತದೆ.
2. ಈವ್: ನಿಮ್ಮ ಋತುಚಕ್ರ ಯಾವತ್ತು ಎಂಬುದನ್ನು ಇಮೋಜಿಗಳ ಮೂಲಕ ನಿಮಗೆ ನೆನಪಿಸಲಾಗುತ್ತದೆ. ಅಕ್ಷರಗಳ ಬದಲು ಸ್ಟಿಕರ್‌ಗಳಿರುತ್ತವೆ. ಈ ಆ್ಯಪ್‌ನಲ್ಲಿ ಬರ್ತ್ ಕಂಟ್ರೋಲ್ ಬಗ್ಗೆಯೂ ಮಾಹಿತಿ ಸಿಗುತ್ತದೆ.
3. ಫ್ಲೋ: ಈ ಆ್ಯಪ್‌ನ ವಿಶೇಷತೆಯೆಂದರೆ, ಇದನ್ನು ಪಾಸ್‌ವರ್ಡ್ ಬಳಸಿ ಸೆಕ್ಯೂರ್ ಮಾಡಬಹುದು. ಉಳಿದಂತೆ ಇದು ಕೂಡ ಕ್ಲೂನಂತೆ ಬೇರೆ ಬೇರೆ ಕಲರ್‌ಗಳಲ್ಲಿರುತ್ತದೆ.
4. ಪಿರಿಯಡ್ ಟ್ರ್ಯಾಕರ್: ಇದು ಕ್ಯಾಲೆಂಡರ್‌ನಂತೆ ಇರುವ ಆ್ಯಪ್. ದಿನನಿತ್ಯದ ಮಾಹಿತಿಯನ್ನು ನೀವಲ್ಲಿ ದಾಖಲಿಸಬಹುದು.
5. ಪಿಂಕ್ ಪ್ಯಾಡ್: ಇದು ಉಳಿದೆಲ್ಲ ಆ್ಯಪ್‌ಗ್ಳಿಗಿಂತ ಭಿನ್ನವಾಗಿದ್ದು, ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ನಂತ ಫೀಚರ್‌ಗಳನ್ನು ಹೊಂದಿದೆ. ಋತುಚಕ್ರ, ಗರ್ಭಧಾರಣೆ ಬಗೆಗಿನ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.
* ನಾಗರೇಖಾ ಗಾಂವಕರ, ದಾಂಡೇಲಿ