ಮೈಸೂರು: ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ಆರಂಭಿ ಸಿರುವ ರಾಜ್ಯದಲ್ಲೇ ಪ್ರಥಮ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್‌ಡಿಕೆ ಜತೆ ಚರ್ಚೆ: ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿ ಸುವ ಸಮ್ಮಿಶ್ರ ಸರ್ಕಾರದ ಯೋಚನೆ ಸರಿಯಿಲ್ಲ ಎಂದು ಮೊಟ್ಟ ಮೊದಲಿಗೆ ಪ್ರತಿಕ್ರಿಯಿಸಿದವನು ನಾನು. ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಈ ವಿಷಯ ಸೇರಿಲ್ಲದಿದ್ದರೂ ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲು ನನ್ನ ವಿರೋಧವಿದೆ. ನೆಲ-ಜಲ-ಭಾಷೆ ವಿಚಾರದಲ್ಲಿ ರಾಜೀ ಪ್ರಶ್ನೇಯೆ ಇಲ್ಲ. ಕರ್ನಾಟಕದ ಜನರ ಹಕ್ಕು ರಕ್ಷಣೆ ಮಾಡಲೇಬೇಕು ಎಂದರು.
ಸಂವಿಧಾನ ತಿದ್ದುಪಡಿ: ಮಕ್ಕಳು ಯಾವ ಮಾಧ್ಯಮ ದಲ್ಲಿ ಕಲಿಯಬೇಕು ಎಂಬುದನ್ನು ನಿರ್ಧರಿಸುವುದು ಪೋಷಕರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ, ರಾಜ್ಯ ಸರ್ಕಾರ ಭಾಷಾ ಮಾಧ್ಯಮದ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರುವ ಅವಶ್ಯಕತೆ ಇದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಇದು ಕರ್ನಾಟಕ ರಾಜ್ಯದ ಪ್ರಶ್ನೆ ಮಾತ್ರವಲ್ಲ, ಎಲ್ಲ ರಾಜ್ಯಗಳ ಮಾತೃಭಾಷೆಗೂ ಇದರಿಂದ ಧಕ್ಕೆ ಇದೆ. ಹೀಗಾಗಿ ಎಲ್ಲ ರಾಜ್ಯ ಸರ್ಕಾರಗಳೂ ಒಟ್ಟಾಗಿ ಪ್ರಯತ್ನ ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.
ಸ್ಪಂದಿಸದ ಮೋದಿ: ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಎಲ್ಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಮಾತ್ರವಲ್ಲ, ಖುದ್ದು ಭೇಟಿ ಮಾಡಿ ಮನವಿ ಮಾಡಿ ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.
ಪೋಷಕರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ದಲ್ಲಿ ಓದಿಸುವ ವ್ಯಾಮೋಹವಿದೆ. ಆರ್ಥಿಕವಾಗಿ ದುರ್ಬಲರು, ಬಡವರೂ ಸಹ ಇಂಗ್ಲಿಷ್ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುವ ವ್ಯಾಮೋಹ ಹೊಂದಿರು ವುದು ಒಳ್ಳೆಯ ಬೆಳವಣಿಗೆಯಲ್ಲ.
ಕನ್ನಡ ಹೃದಯ ಭಾಷೆ: ಕನ್ನಡ ಭಾಷೆ ಮತ್ತು ಮಾಧ್ಯಮದ ಬಗ್ಗೆ ಜನರಲ್ಲಿ ಗೊಂದಲವಿದೆ. ಕನ್ನಡ ಭಾಷೆ-ಮಾಧ್ಯಮ ಎರಡೂ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಯಲು ಯಾರ ವಿರೋಧವೂ ಇಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ನಿರರ್ಗಳ ವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬಹುದು. ಆದರೆ, ಅದು ಹೃದಯದ ಭಾಷೆಯಾಗದು, ಕನ್ನಡ ಮಾತ್ರ ಹೃದಯದ ಭಾಷೆ ಆಗಲು ಸಾಧ್ಯ ಎಂದು ಹೇಳಿದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸ.ರ. ಸುದರ್ಶನ, ಖಜಾಂಚಿ ನಾ. ನಾಗಚಂದ್ರ ಉಪಸ್ಥಿತರಿದ್ದರು. ಸಂಸ್ಥೆ ಅಧ್ಯಕ್ಷ ಪ.ಮಲ್ಲೇಶ್ ಅಧ್ಯಕ್ಷತೆವಹಿಸಿದ್ದರು.