Advertisement

ಚಿಣ್ಣರ ಹೆಜ್ಜೆಯಲ್ಲಿ ಮೂಡಿದ ಸಂಕಲ್ಪ ಶಕ್ತಿ

07:52 PM Oct 31, 2019 | mahesh |

ಕೋಟೇಶ್ವರದ ರಥಬೀದಿಯಲ್ಲಿ ಇಲ್ಲಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಆಯೋಜಿಸಿದ ಬೇಳೂರು ವಿಷ್ಣುಮೂರ್ತಿ ನಾಯಕ್‌ ರಚಿಸಿದ, ಕಡ್ಲೆ ಗಣಪತಿ ಭಟ್‌ ಅವರ ನಿರ್ದೇಶನದಲ್ಲಿ ಕೋಟಿಲಿಂಗೇಶ್ವರ ಕಲಾ ಬಳಗದ ವಿದ್ಯಾರ್ಥಿಗಳಿಂದ ಸಂಕಲ್ಪ ಶಕ್ತಿ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

Advertisement

ದೇವೇಂದ್ರನ ಒಡ್ಡೋಲಗ, ರಾಕ್ಷಸರ ಭೀತಿಯನ್ನು ಪರಿಹರಿಸಲು ತ್ರಿಮೂರ್ತಿಗಳಿದ್ದಾರೆಂಬ ಧೈರ್ಯ, ರಾಕ್ಷಸ ರಾಜ ಚಕ್ರಪಾಣಿ ಮಕ್ಕಳಿಲ್ಲದೆ ಕೊರಗುತ್ತಿದ್ದಾಗ ನಾರದನು ಸೂರ್ಯನ ಕುರಿತು ಯಾಗ ಮಾಡಲು ಸಲಹೆ ನೀಡುತ್ತಾನೆ. ಶುಕ್ರಾಚಾರ್ಯರ ನೇತೃತ್ವದಲ್ಲಿ ನಡೆದ ಯಾಗದಲ್ಲಿ ದೊರೆತ ಪ್ರಸಾದದ ಫಲವಾಗಿ ಸಿಂಧುವಿನ ಜನನವಾಗುತ್ತದೆ. ದೇಹ ಒಂದು ಸಂಪತ್ತು ಅದನ್ನು ಶ್ರಮದ ಕೆಲಸದಿಂದ ಹಾಳು ಮಾಡಿಕೊಳ್ಳಬಾರದೆಂಬ ಮನಸ್ಥಿತಿಯ ಮೈಗಳ್ಳ ಕೂಪಕರ್ಣ ಮತ್ತು ವಕ್ರತುಂಡಿಯರ ಪ್ರೇಮ ಸಲ್ಲಾಪ. ಇವರಿಗೆ ತನ್ನ ಮಗುವನ್ನು ನೋಡಿಕೊಳ್ಳುವ ಕೆಲಸ ನೀಡಿದ ಚಕ್ರಪಾಣಿ. ಇತ್ತ ಕೈಲಾಸದಲ್ಲಿ ಶಿವ ಪಾರ್ವತಿಯರ ತಾಂಡವ ನೃತ್ಯ. ಪಾರ್ವತಿಗೆ ಮಗುವನ್ನು ಪಡೆವ ಅಪೇಕ್ಷೆ. ಶಿವನ ನಿರಾಕರಣೆ. ಆದ್ದರಿಂದ ಪಾರ್ವತಿ ತನ್ನ ಮೈಯ ಸುಗಂಧದಿಂದ ಸುಮುಖನನ್ನು ಸೃಷ್ಟಿಸುತ್ತಾಳೆ.ಪಾರ್ವತಿಯು ಸ್ನಾನ ಮಾಡುತ್ತಿರುವಾಗ ಅಲ್ಲಿಗೆ ಶಿವನು ಬರುತ್ತಾನೆ. ಶಿವನನ್ನು ಸುಮುಖ ತಡೆಯುತ್ತಾನೆ. ಸಿಟ್ಟಿಗೆದ್ದ ಶಿವ ಸುಮುಖನ ತಲೆ ಕಡಿಯುತ್ತಾನೆ. ಪಾರ್ವತಿಯ ಗೋಳನ್ನು ಕೇಳಲಾಗದೆ ಒಂದು ತಲೆಯನ್ನು ತರಲು ಶಿವಗಣಗಳಿಗೆ ಆದೇಶಿಸುತ್ತಾನೆ. ಅವರು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದ್ದ ಆನೆಯ ತಲೆ ತರುತ್ತಾರೆ. ಅದರಿಂದ ಗಜಾನನು ಶಿವ ಶಕ್ತಿಯರ ಸಂಕಲ್ಪ ಶಕ್ತಿಯಿಂದ ಗಣನಾಯಕನಾಗಿ ಲೋಕದಲ್ಲಿ ಪ್ರಸಿದ್ಧನಾಗುವಂತೆ ಆಶೀರ್ವಾದ ಪಡೆಯುತ್ತಾನೆ.

ಮಗನಿಗೆ ಅಧಿಕಾರವನ್ನು ವಹಿಸಿ ಚಕ್ರಪಾಣಿ ವಾನಪ್ರಸ್ಥಕ್ಕೆ ಹೋಗುತ್ತಾನೆ. ಶಿವನ ಕುರಿತು ಸಿಂಧುವು ತಪಸ್ಸಿಗೆ ಕೂಪಕರ್ಣನೊಂದಿಗೆ ತೆರಳುತ್ತಾನೆ. ಶಿವನಿಂದ ವರಪಡೆದು ಸ್ವರ್ಗಕ್ಕೆ ದಾಳಿಯಿಟ್ಟು ದೇವತೆಗಳನ್ನು ಸೋಲಿಸಿ ಶಚಿಯನ್ನು ಬಲವಂತದಿಂದ ಪಡೆಯಲು ಪ್ರಯತ್ನಿಸಿದಾಗ ನಾರದನ ಹಿತೋಪದೇಶ ಕೇಳಿ ಬಿಟ್ಟು ಬಿಡುತ್ತಾನೆ. ಶಕ್ತಿಶಾಲಿಯಾದ ಗಣಪನ ಹುಡುಕಲು ಹೊರಡುತ್ತಾನೆ.ಗಣೇಶ ದೇವತೆಗಳ ಬೇಡಿಕೆಯಂತೆ ಸಿಂಧುವನ್ನು ಕೊಂದು ಲೋಕಕ್ಕೆ ನೆಮ್ಮದಿ ನೀಡುತ್ತಾನೆ. ಇದು ಈ ಪ್ರಸಂಗದ ಹಿನ್ನೆಲೆ.

ಮಕ್ಕಳಾದ ಅಕ್ಷಯ್‌ ಸಿಂಧುವಾಗಿ, ತನಿಷ್‌ ಚಕ್ರಪಾಣಿಯಾಗಿ, ತನ್ಮಯ್‌ ಗಣಪತಿಯಾಗಿ, ನಿಖೀತ್‌ ಸುಮುಖನಾಗಿ, ಶಶಾಂಕ್‌ ಕೂಪಕರ್ಣನಾಗಿ, ಓಂ ಪ್ರಸಾದ್‌ ವಕ್ರತುಂಡಿಯಾಗಿ, ಯಶಸ್‌ ದೇವೇಂದ್ರನಾಗಿ, ಅಪೇಕ್ಷಾ ಶಿವನಾಗಿ, ವಿನಿತಾ ಪಾರ್ವತಿಯಾಗಿ, ಅಭಿಕ್ಷಾ ಶಚಿಯಾಗಿ, ಸಮೃದ್ಧಿ ನಾರದನಾಗಿ, ಧನ್ಯಾ ಶುಕ್ರಾಚಾರ್ಯರಾಗಿ ಅಭಿನಯಿಸಿದರು.

ಶಿವ ಪಾರ್ವತಿಯರ ತಾಂಡವ ನೃತ್ಯ, ಕೂಪಕರ್ಣ – ವಕ್ರತುಂಡಿಯರ ಜಾನಪದ ಶೈಲಿಯ ನರ್ತನ ವಿಶೇಷ ಆಕರ್ಷಣೆಯಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್‌ ಕುಮಾರ್‌ ನೆಲ್ಲಿಕಟ್ಟೆ ಮಧುರ ಕಂಠದಿಂದ ರಂಜಿಸಿದರು. ಮದ್ದಲೆಯಲ್ಲಿ ಅಕ್ಷಯ್‌ ಕುಮಾರ್‌ ಬಿದ್ಕಲ್‌ಕಟ್ಟೆ, ಚಂಡೆಯಲ್ಲಿ ಶ್ರೀಕಾಂತ್‌ ಯಡಮೊಗೆ ಹಾಗೂ ಪನ್ನಗ ಮಯ್ಯ ಸಹಕರಿಸಿದರು.

Advertisement

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next