“ಪುಣ್ಯ ಫಿಲಂಸ್’ ಬ್ಯಾನರ್‌ನಲ್ಲಿ ಪವನ್ ಕುಮಾರ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು.
ಸೂಪರ್ ಹೀರೋ ಕಾನ್ಸೆಪ್ಟ್ ನ ಈ ಸಿನಿಮಾಕ್ಕೆ “ದಿ ಎಂಡ್’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ. ಸುರೇಶ್ ಅನಾವರಣಗೊಳಿಸಿದರು.
“ಕನ್ನಡದಲ್ಲಿ ಇದು ಮೊದಲ ಸೂಪರ್ ಹೀರೋ ಸಿನಿಮಾ’ ಎಂದಿರುವ “ದಿ ಎಂಡ್’ ಸಿನಿಮಾ ನಿರ್ದೇಶಕ ಪವನ್ ಕುಮಾರ್, “ಸೂಪರ್ ಹೀರೋ ಎಂದರೆ ವಿಶೇಷ ಶಕ್ತಿಯುಳ್ಳವನು. ಉದಾಹರಣೆಗೆ ಹನುಮಂತ ಒಬ್ಬ ಸೂಪರ್ ಹೀರೋ. ಪುರಾಣದಲ್ಲಿ ಬರುವ ಸಪ್ತ ಚಿರಂಜೀವಿಗಳನ್ನು ಆದರ್ಶವಾಗಿಟ್ಟುಕೊಂಡು ಈ ಸಿನಿಮಾದ ಕಥೆ ಮಾಡಿದ್ದೇವೆ. ಬೆಂಗಳೂರು, ಮಂಗಳೂರು, ಗೋವಾ, ಬಾದಾಮಿ ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಈಗ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಇದೇ ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ತರುವ ಯೋಚನೆಯಿದೆ’ ಎಂದರು.
“ದಿ ಎಂಡ್’ ಸಿನಿಮಾದಲ್ಲಿ ರವಿಶೇಖರ್, ಪವಿತ್ರ ರಾಜ್, ಕೆ. ಎಸ್. ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
-ಉದಯವಾಣಿ ಸಿನಿ ಸಮಾಚಾರ