Advertisement

ಆಂಗ್ಲಮಾಧ್ಯಮ ಶಾಲೆಗೆ ಒತ್ತು ಕನ್ನಡದ ಅಸ್ತಿತ್ವಕ್ಕೆ ಕುತ್ತು

10:51 AM Dec 22, 2019 | Suhan S |

ಹುಬ್ಬಳ್ಳಿ: ಪ್ರತಿಷ್ಠೆಗಾಗಿ ಪರಭಾಷೆ ವ್ಯಾಮೋಹ ಬೆಳೆಸಿಕೊಳ್ಳುತ್ತಿರುವುದು ಕನ್ನಡದ ಕಗ್ಗೊಲೆಗೆ ಕಾರಣವಾಗಿದೆ. ಸರಕಾರ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಕನ್ನಡದ ಅಸ್ತಿತ್ವದ ಪ್ರಶ್ನೆ ಮೂಡಿದೆ ಎಂದು ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ ಹೇಳಿದರು.

Advertisement

ಮೂರುಸಾವಿರ ಮಠದ ಡಾ| ಮೂಜಗಂ ಸಭಾಂಗಣದಲ್ಲಿ ಶನಿವಾರ ನಡೆದ ಅಖಂಡ ಧಾರವಾಡ ಜಿಲ್ಲಾ 8ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯದ ಪ್ರಶಸ್ತಿ ಹಾಗೂ ಪುರಸ್ಕಾರ ಬಯಸುವ ಸಾಹಿತಿಗಳು ಸರಕಾರಿ ಕನ್ನಡ ಶಾಲೆಗಳಿಗೆ ಆಂಗ್ಲ ಮಾಧ್ಯಮ ಶಾಲೆಗಳು ಲಗ್ಗೆ ಇರಿಸುತ್ತಿರುವ ಬಗ್ಗೆ ಮೌನ ವಹಿಸಿದ್ದಾರೆ. ಇಂತಹ ಸಾಹಿತಿಗಳಿಗೆ ಸರಕಾರ ಸನ್ಮಾನ-ಬಿರುದುಗಳನ್ನು ನೀಡುತ್ತಿದ್ದು, ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹವಿಲ್ಲದಂತಾಗಿದೆ. ಹೊಸ ಬರಹಗಾರರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಚುಟುಕು ಸಾಹಿತ್ಯ ಪರಿಷತ್‌ ನ ಕಾರ್ಯಚಟುವಟಿಕೆ ಗುರುತಿಸಿ ಅಗತ್ಯ ನೆರವು ನೀಡಿದರೆ ಮತ್ತಷ್ಟು ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕೆಎಲ್‌ಇ ಶಿಕ್ಷಣ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಚುಟುಕು ಸಾಹಿತ್ಯದ ಬೆಳವಣಿಗೆಗೆ ಚುಟುಕು ಸಾಹಿತ್ಯ ಪರಿಷತ್‌ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಇಂದಿನ ಯುವಜನತೆಯಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಲ್ಲಿ ಈ ಸಮ್ಮೇಳನಗಳು ಸಹಕಾರಿಯಾಗಿವೆ ಎಂದರು.

ಪರಿಷತ್‌ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ, ಪರಿಷತ್‌ನ ಯಾವುದೇ ಚಟುವಟಿಕೆ, ಸಮ್ಮೇಳನಕ್ಕೆ ಸರಕಾರದಿಂದ ಅನುದಾನ ಪಡೆಯದೆ ಸಾಹಿತ್ಯಾಸಕ್ತರು ಒಟ್ಟಾಗಿ ಎಲ್ಲಾ ಖರ್ಚುಗಳನ್ನು ನಿಭಾಯಿಸುತ್ತಿದ್ದೇವೆ. ಕನ್ನಡ ಸೇವೆಗೆ ಸ್ವಯಂಪ್ರೇರಣೆಯಿಂದ ಆಗಮಿಸಿ ಕಾರ್ಯದಲ್ಲಿ ತೊಡಗಿಕೊಳ್ಳುವ ಸಂಪ್ರದಾಯ ಇಲ್ಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಉಳಿದ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಶ್ರೀಪಾದ ಬೋಗಾರ ಅವರ ಚುಟುಕು ಮಿಂಚು ಕವನ ಸಂಕಲನ ಬಿಡುಗಡೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದರು. ಪ್ರೊ| ವೀರನಗೌಡ್ರ ಮರಿಗೌಡ್ರ, ಮೃತ್ಯುಂಜಯ ಮಟ್ಟಿಹಾಳ, ರೋಹಿಣಿ ರಾವ್‌, ಸಂಧ್ಯಾ ಕೃಷ್ಣಾ ದೀಕ್ಷಿತ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next