ಏಕೋ ಏನೋ, ಈಗಿನ ವಾಟ್ಸಾಪ್ ಫೇಸ್‌ಬುಕ್ ಯುಗದಲ್ಲಿ ಸಂಬಂಧಗಳು ತಮ್ಮ ಸಣ್ತೀ ಕಳೆದುಕೊಂಡಿದೆ. ಇಲ್ಲಿ ನಮಗೆ ಸಂಬಂಧಪಟ್ಟವರಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಸದ್ಯ, ನಮ್ಮ ಭಾವನೆಗಳೆಲ್ಲವೂ ಕೇವಲ ಕೃತಕ ಇಮೋಜಿಗಳಲ್ಲಿ, ಸಿನೆಮಾ ಹಾಡುಗಳಲ್ಲಿ, ಭಾವನಾತ್ಮಕ ಮೆಸೇಜುಗಳಲ್ಲಿ, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಮಾತ್ರ ವ್ಯಕ್ತಗೊಳ್ಳುವುದನ್ನು ಕಾಣುತ್ತೇವೆ. ನಮ್ಮೆಲ್ಲ ಮನಸ್ಸಿನ ಭಾವನೆಗಳನ್ನು ಅವುಗಳಿಂದ ವ್ಯಕ್ತಪಡಿಸಲು ಸಾಧ್ಯವೆ? ನಮ್ಮ ಭಾವನೆಗಳನ್ನು ನಾವು ವ್ಯಕ್ತಪಡಿಸದೆ ಇದ್ದರೆ ಅದು ಮನಸಿನಾಳದಲ್ಲೇ ಉಳಿದು ಮನದ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ. ಸದ್ಯದ ಆನ್‌ಲೈನ್ ಯುಗ ಹೀಗೇ ಮುಂದುವರೆದರೆ ಭವಿಷ್ಯದಲ್ಲಿ ಸಂಬಂಧಗಳ ಬೆಲೆಯೇ ಗೊತ್ತಿಲ್ಲದ ರೊಬೋಟುಗಳಂತಾಗಿಬಿಡುತ್ತೇವೆ.
ಕೆಲವರ ಮನಸ್ಸು ತುಂಬಾ ಮೃದುವಾಗಿರುತ್ತದೆ. ಅವರು ಸಂಬಂಧಪಟ್ಟವರಲ್ಲಿ ತಮ್ಮ ಮನದಾಳವನ್ನು ಹಂಚಿಕೊಳ್ಳಲು ಹಪಹಪಿಸುತ್ತಾರೆ. ಯಾವಾಗ ಅವರಿಗೆ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುವುದಿಲ್ಲವೋ, ಎಲ್ಲಿ ಅವರ ಅಂತರಾಳಕ್ಕೆ ಬೆಲೆ ಸಿಗುವುದಿಲ್ಲವೋ, ಅಂಥ ಸಂದರ್ಭದಲ್ಲಿ ಅವರು ಅನಿವಾರ್ಯವಾಗಿ ತಮ್ಮ ಭಾವನೆಗಳನ್ನು, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ, ಫೇಸುºಕ್ ಪೋಸ್ಟ್‌ಗಳಲ್ಲಿ ಹೇಳಿಕೊಳ್ಳುತ್ತಾರೆ. ಅವರು ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಭಾವನೆ ಹಂಚಿಕೊಳ್ಳುತ್ತಾರೆ ಅಂದ್ರೆ , ಅವರ ಭಾವನೆಗಳಿಗೆ ಬೆಲೆ ಸಿಗದೆ ಬೇರೆ ಎಲ್ಲ ದಾರಿ ಎಲ್ಲ ಮುಚ್ಚಿಕೊಂಡು, ಏಕಾಂಗಿತನ ಕಾಡಿ, ಮಾನಸಿಕ ನೆಮ್ಮದಿ ಹಾಳಾಗಿ ಕೊನೆಗೆ ವಾಟ್ಸಾಪ್, ಫೇಸ್‌ಬುಕ್‌ಗಳೇ ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ ಎಂದುಬಿಡುತ್ತಾರೆ.
ಆದ್ದರಿಂದ ನಾವು ನಮ್ಮ ದಿನದ ಸ್ವಲ್ಪ ಸಮಯವನ್ನು ನಮ್ಮನ್ನು ಪ್ರೀತಿಸುವ ಹೆತ್ತವರಿಗೆ, ಒಡಹುಟ್ಟದವರಿಗೆ, ಜೀವದ ಗೆಳೆಯ-ಗೆಳತಿಯರಿಗಾಗಿ, ಮೀಸಲಾಗಿಡೋಣ.
ಪ್ರಜ್ವಲ್
ದ್ವಿತೀಯ ಬಿ. ಎ., ಕನ್ನಡ ವಿಭಾಗ , ಮಂಗಳಗಂಗೋತ್ರಿ