Advertisement

ರಾಜನ ಆನೆ

07:25 AM Dec 07, 2017 | Harsha Rao |

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ ಮತ್ತು ಲಕ್ಷಾಂತರ ಕಾಲಾಳುಗಳು ಇದ್ದರು. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಆ ಆನೆ ಭಾಗವಹಿಸುತ್ತಿದ್ದ ಯುದ್ಧಗಳನ್ನೆಲ್ಲಾ ರಾಜನೇ ಗೆಲ್ಲುತ್ತಿದ್ದ. ಒಂದು ರೀತಿಯಲ್ಲಿ ರಾಜನಿಗೆ ಅದೃಷ್ಟದ ಆನೆಯಾಗಿತ್ತು. ತನ್ನ ಮೇಲೆ ರಾಜನ ಕೃಪಾಕಟಾಕ್ಷವಿದೆ ಎಂದು ಆನೆ ಯಾವತ್ತೂ ಉಬ್ಬುತ್ತಿರಲಿಲ್ಲ. ತಾಳ್ಮೆ, ಶ್ರದ್ಧೆಯಿಂದಲೇ ತನಗೆ ವಹಿಸಿದ ಕೆಲಸವನ್ನುಪ ನಿರ್ವಂಚನೆಯಿಂದ ಮಾಡುತ್ತಿತ್ತು. ಹೀಗಿರುವಾಗ ಆನೆಗೆ ವಯಸ್ಸಾಗುತ್ತಿದ್ದಂತೆ, ಕೆಲಸ ಮಾಡುವ ಕ್ಷಮತೆ ಕುಂದುತ್ತಾ ಬಂದಿತು. ಅದನ್ನು ಗಮನಿಸಿದ ರಾಜ ಇನ್ನು ಮುಂದೆ ಯಾವುದೇ ಕೆಲಸವನ್ನು ಆ ಅದೃಷ್ಟದ ಆನೆಯಿಂದ ಮಾಡಿಸುವುದು ಬೇಡ ಎಂದು ಫ‌ರ್ಮಾನು ಹೊರಡಿಸಿದ.

Advertisement

ಯಾವುದೇ ಕೆಲಸ ಮಾಡದೆಯೂ ಆನೆ ಮಂಕಾಗತೊಡಗಿತು. ತಾನು ನಿಶ್ಯಕ್ತ, ತನ್ನಿಂದೇನೂ ಆಗದು ಎಂಬ ಭಾವನೆ ಅದಕ್ಕೆ ಬಂದುಬಿಟ್ಟಿತು. ಅದಕ್ಕೇ ಕುಳಿತಲ್ಲೇ ಕುಳಿತು, ಹೊಟ್ಟೆ ತುಂಬ ಊಟ ಮಾಡುತ್ತಾ ದಿನ ದೂಡುತ್ತಿತ್ತು. ಒಮ್ಮೆ ನೀರು ಕುಡಿಯಲು ಕೊಳಕ್ಕೆ ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ  àಳಿಡಲು ಶುರುಮಾಡಿತು. ಸೈನಿಕರು ಓಡೋಡಿ ಬಂದರು. ಆನೆಯನ್ನು ಎತ್ತಲು ಎಷ್ಟೇ ಪ್ರಯತ್ನಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು. ಅದನ್ನು ಕಂಡ ರಾಜ ನೊಂದುಕೊಂಡ. ಮಂತ್ರಿಗಳಿಗೆ ಏನಾದರೂ ಮಾಡಿ ಆನೆಯನ್ನು ಕಾಪಾಡುವಂತೆ ಕೇಳಿಕೊಂಡ. ಮಂತ್ರಿ ಒಬ್ಬ ಸೈನಿಕನನ್ನು ಕರೆದು ಯುದ್ಧದ ಸಂದರ್ಭದಲ್ಲಿ ಮೊಳಗಿಸುವ ಕಹಳೆಯ ದನಿಯನ್ನು ಹೊರಡಿಸಲು ಹೇಳಿದ. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನೆಟ್ಟಗಾಯಿತು. ತನ್ನ ರಾಜ್ಯಕ್ಕೆ ಅಪಾಯ ಎದುರಾಗಿದೆ, ತನ್ನ ಸೈನಿಕರಿಗೆ ಏನಾದರೂ ಸಹಾಯ ಮಾಡಬೇಕೆಂಬ ಹುಮ್ಮಸ್ಸು ಮೈಯಲ್ಲಿ ಉಕ್ಕಿತು. ಎಲ್ಲರೂ ನೋಡ ನೋಡುತ್ತಿದ್ದಂತೆ ತನ್ನೆಲ್ಲಾ ಬಲವನ್ನು ಒಗ್ಗೂಡಿಸಿ ತಾನೇ ಕೆಸರಿನಿಂದ ಹೊರಗೆ ಬಂದಿತು.

ಸುತ್ತಲಿದ್ದವರೆಲ್ಲರೂ ಹಷೊìàದ್ಘಾರ ಮಾಡಿದರು. ರಾಜ ಇದು ಹೇಗೆ ಸಾಧ್ಯವಾಯಿತೆಂದು ಮಂತ್ರಿಯನ್ನು ಕೇಳಿದಾಗ “ದೈಹಿಕ ಬಲವೊಂದೇ ಎಲ್ಲವೂ ಅಲ್ಲ. ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು. ಅದರಿಂದಲೇ ಛಲ ಬರುತ್ತದೆ. ಅದಕ್ಕೇ ಸ್ಪೂರ್ತಿ ನೀಡುವ ಕೆಲಸವನ್ನು ಮಾಡಿದೆ. ಸಹಜವಾಗಿ ಆನೆ ಛಲದಿಂದ ಮೇಲಕ್ಕೆದ್ದಿತು.’

– ಬಸಮ್ಮ ನೀಲಪ್ಪ, ಶಿಂಗಟರಾಯನಕೇರಿ, ಗದಗ

Advertisement

Udayavani is now on Telegram. Click here to join our channel and stay updated with the latest news.

Next