ರಂಜನಾಪುರವೆಂಬ ರಾಜ್ಯದಲ್ಲಿ ದೇವವರ್ಮನೆಂಬ ರಾಜನಿದ್ದ. ಅವನಿಗೆ ತನ್ನ ಸೈನ್ಯದ ಗಜಪಡೆಯ ಪೈಕಿ ಐರಾವತ ಎಂಬ ಹೆಸರಿನ ಪಟ್ಟದ ಆನೆಯ ಮೇಲೆ ಎಲ್ಲಿಲ್ಲದ ಅಕ್ಕರೆ ಮತ್ತು ಪ್ರೀತಿ. ಆನೆಯೂ ಶ್ರದ್ಧೆಯಿಂದ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿತ್ತು. ಯುದ್ಧದಲ್ಲಿ ದೇವವರ್ಮನ ಸೈನ್ಯ ಸೋಲುವ ಹಂತದಲ್ಲಿದ್ದಾಗಲೆಲ್ಲಾ ಐರಾವತ ರಣರಂಗವನ್ನು ಪ್ರವೇಶಿಸಿ ಆವೇಶದಿಂದ ಶತ್ರುಗಳ ಮೇಲೆ ಮುನ್ನುಗ್ಗಿ ಜಯ ತಂದುಕೊಡುತ್ತಿತ್ತು. ಕಾಲ ಕಳೆಯುತ್ತಿದ್ದಂತೆ ಆನೆಗೆ ವಯಸ್ಸಾಯಿತು. ಕ್ರಮೇಣ ಸೈನ್ಯದಲ್ಲಿ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯವನ್ನೂ ಕಳೆದುಕೊಂಡಿತು. ಆದರೆ ರಾಜನ ಪ್ರೀತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅವನು ಐರಾವತವನ್ನು ಚೆನ್ನಾಗಿ ನೋಡಿಕೊಳುÉವಂತೆ ಸೈನಿಕರಿಗೆ ಆಜ್ಞಾಪಿಸಿದ್ದ. ಆನೆಗೆ ಹೆಚ್ಚಿನ ಕೆಲಸ ಇಲ್ಲದೇ ಇದ್ದರಿಂದ ಮಂಕಾಗತೊಡಗಿತು.
ಒಂದು ದಿನ ಸೈನಿಕರು ಆನೆಗೆ ನೀರು ಕುಡಿಸಲು ಊರ ಕೆರೆಗೆ ಕರೆದುಕೊಂಡು ಹೋಗಿದ್ದರು. ನೀರು ಸ್ವಲ್ಪ ಹಿಂದಕ್ಕೆ ಹೋಗಿದ್ದರಿಂದ ಆನೆ ಎಂದಿಗಿಂತ ಮುಂದೆ ಹೋಯಿತು. ಆದರೆ ಆ ಜಾಗದಲ್ಲಿ ಕೆಸರಿದ್ದುದರಿಂದ ಆನೆಯ ಕಾಲುಗಳು ಹೂತು ಹೋದವು. ಎಷೇr ಪ್ರಯತ್ನ ಪಟ್ಟರೂ ಆನೆಗೆ ಕೆಸರಿನಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ಅಸಹಾಯಕತೆಯಿಂದ ಐರಾವತ ಆನೆಳಿಟ್ಟಿತು. ರಾಜನಿಗೆ ವಿಷಯ ತಿಳಿದು ಆನೆಯನ್ನು ಮೇಲೆತ್ತಲು ನಾನಾ ಮಾರ್ಗಗಳನ್ನು ಕೈಗೊಂಡ.
ಏನು ಮಾಡಿದರೂ ಪ್ರಯೋಜನ ಆಗಲಿಲ್ಲ. ಕಡೆಗೆ ರಾಜ ದೇವ ವರ್ಮನಿಗೆ ಒಂದು ಉಪಾಯ ಹೊಳೆಯಿತು. ಕೂಡಲೆ ಅರಮನೆಯಿಂದ ಕಹಳೆಯನ್ನು ತರಿಸಲು ಮಂತ್ರಿಗಳಿಗೆ ಆಜ್ಞಾಪಿಸಿದ. ಕೆಲ ಸಮಯದಲ್ಲೇ ಕಹಳೆ ಬಂದಿತು. ಯುದ್ಧದ ಸಮಯದಲ್ಲಿ ಊದುವ ಕಹಳೆಯನ್ನು ರಾಜ ಯಾಕೆ ತರಿಸಿದ ಎಂದು ಸುತ್ತಮುತ್ತ ನೆರೆದಿದ್ದ ಜನರಿಗೆ ಕುತೂಹಲವಾಯಿತು. ರಾಜ, ಸೈನಿಕರೆಲ್ಲರನ್ನೂ ಕೆರೆಯಿಂದ ದೂರಕ್ಕೆ ನಿಲ್ಲುವಂತೆ ಹೇಳಿ, ಕಹಳೆಯನ್ನು ಊದಿಸಿದನು.
ಯುದ್ಧಭೂಮಿಯಲ್ಲಿ ಆನೆ, ಕಹಳೆ ಸದ್ದನ್ನು ಕೇಳುತ್ತಲೇ ಆವೇಶದಿಂದ ಶತ್ರುಗಳ ಮೇಲೆ ಮುನ್ನುಗ್ಗುತ್ತಿತ್ತು. ಕೆಸರಿನಲ್ಲಿ ಸಿಕ್ಕಿಕೊಂಡ ಆನೆಗೆ ಕಹಳೆಯ ದನಿ ಕೇಳುತ್ತಲೇ ಆವೇಶ ಉಕ್ಕಿತು. ಜೋರಾಗಿ ಕೈಕಾಲುಗಳನ್ನು ಆಡಿಸುತ್ತಾ ಯಾರ ಸಹಾಯವೂ ಇಲ್ಲದೆ ದಡಕ್ಕೆ ಬಂದೇಬಿಟ್ಟಿತು. ಮೂಕವಿಸ್ಮಿತರಾದ ಜನರು ರಾಜನ ಉಪಾಯಕ್ಕೆ ತಲೆದೂಗುತ್ತಾ ಜೈಕಾರ ಹಾಕಿದರು.
– ಸಂತೋಷ್‌ರಾವ್ ಪೆರ್ಮುಡ