Advertisement
ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶ ಆಲೂರು ತಾಲೂಕು ನಾಗವಾರ ಬಳಿ ಆನೆ ನಿರ್ಮಾಣ ಆರಂಭವಾಗಿದ್ದು, 1.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಆನೆಧಾಮದ ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಮುಗಿಯುವ ಸಾಧ್ಯತೆ ಇದೆ.
Related Articles
Advertisement
ಗಿಡಗಂಟಿಗಳ ತೆರವು ಕಾರ್ಯ ಆರಂಭ: ಕಳೆದೊಂದು ವರ್ಷದಿಂದ ಆನೆ ಶಿಬಿರ ಅಥವಾ ಆನೆಧಾಮ ನಿರ್ಮಾಣಕ್ಕೆ ಜಾಗ ಹುಡುಕುತ್ತಿದ್ದ ಅರಣ್ಯಾಧಿಕಾರಿಗಳು ಆಲೂರು ತಾಲೂಕು ನಾಗವಾರ ಮೀಸಲು ಅರಣ್ಯದಲ್ಲಿ ಸರ್ವೇ ನಂ 36 ಮತ್ತು 37ರ ಸುಮಾರು 25 ಎಕರೆ ಜಾಗವನ್ನು ಅರಣ್ಯ ಇಲಾಖೆ ಹಾಸನ ವಿಭಾಗದ ಅಧಿಕಾರಿಗಳು ಆನೆ ಶಿಬಿರಕ್ಕೆ ಗುರ್ತಿಸಿ ಆಯ್ಕೆ ಮಾಡಿದ್ದರು, ಈ ಪ್ರದೇಶ ಪರಿವೀಕ್ಷಿಸಿದ ಸರ್ಕಾರದಿಂದಲೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಮ್ಮತಿಸಿದ್ದು ಈಗ ಸರ್ಕಾರದಿಂದ ಅನುಮತಿ ಪಡೆದುಕೊಂಡು ಹಣ ಬಿಡುಗಡೆ ಮಾಡಿದ್ದಾರೆ. ಆ ಪ್ರದೇಶಗಳಲ್ಲಿ ಗಿಡಗಂಟಿಗಳನ್ನು ತೆರವು ಮಾಡುವ ಕೆಲಸ ಈಗ ಆರಂಭವಾಗಿದೆ.
ಹಿಡಿದ ಆನೆ ಸ್ಥಳಾಂತರ ತಪ್ಪುತ್ತದೆ: ಆನೆ ಶಿಬಿರ ನಿರ್ಮಾಣದ ಬಗ್ಗೆ “ಉದಯವಾಣಿ’ಗೆ ಮಾಹಿತಿ ನೀಡಿದ ಹಾಸನ ವಿಭಾಗದ ಉಪ ಆರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಕೇಂದ್ರ ಮತ್ತು ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆದು ಎರಡು ವರ್ಷಗಳ ಹಿಂದೆ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ 23 ಕಾಡಾನೆಗಳನ್ನ ಹಿಡಿದು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಎರಡು ಪುಂಡಾನೆಗಳನ್ನು ಹಿಡಿದು ಕಾಕನಕೋಟೆ, ಸಕ್ರೆಬೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನೂ 27 ಕಾಡಾನೆಗಳನ್ನು ಹಿಡಿಯಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ನಾಗವಾರ ಮೀಸಲು ಅರಣ್ಯದಲ್ಲಿಯೇ ಆನೆ ಶಿಬಿರ ಸ್ಥಾಪನೆಯಾದರೆ ಆಲೂರು – ಸಕಲೇಶಪುರ ಭಾಗದಲ್ಲಿ ಹಿಡಿದ ಪುಂಡಾನೆಗಳನ್ನು ಬೇರೆಡೆ ಸ್ಥಳಾಂತ ಮಾಡುವ ಶ್ರಮ ತಪ್ಪುತ್ತದೆ. ನಾಗವಾರ ಆನೆ ಶಿಬಿರದಲ್ಲಿಯೇ ಅವುಗಳನ್ನು ಪಳಗಿಸಿ ಇಲಾಖೆಯ ಕೆಲಸಕ್ಕೆ ಬಳಸಿಕೊಳ್ಳಬಹುದು. ಆನೆ ಶಿಬಿರ ಸ್ಥಾಪನೆಯಿಂದ ಕಾಡಾನೆಗಳ ಸಂಪೂರ್ಣ ಉಪಟಳ ತಪ್ಪದಿದ್ದರೂ ಆ ಭಾಗದ ಜನರಿಗೆ ಪುಂಡಾನೆಗಳ ಕಾಟದಿಂದ ಸ್ಪಲ್ಪವಾದರೂ ರಿಲೀಫ್ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.
ಹೆಚ್ಚೇನೂ ಉಪಯೋಗವಿಲ್ಲ: ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಸುಮಾರು 35 ಕಾಡಾನೆಗಳು ಬೀಡುಬಿಟ್ಟಿವೆ. ರೈತರು ಬೆಳೆದ ಲಕ್ಷಾಂತರ ರೂ. ಮೌಲ್ಯದ ಬೆಳೆಗಳನ್ನು ನಾಶಪಡಿಸಿವೆ. ಕಳೆದ ಒಂದು ತಿಂಗಳಲ್ಲಿ ಕಾಡಾನೆಗಳಿಗೆ ಇಬ್ಬರು ಬಲಿಯಾಗಿದ್ದಾರೆ.
ವನ್ಯಜೀವಿಗಳು ಸಹ ರಾಷ್ಟ್ರೀಯ ಸಂಪತ್ತು. ಮನುಷ್ಯನಿಗೆ ಎಷ್ಟು ಬದುಕಲು ಹಕ್ಕಿದೆಯೋ ಅಷ್ಟೇ ಹಕ್ಕು ಪ್ರಾಣಿಗಳೂ ಇದೆ. ನಾಗವಾರದಲ್ಲಿ ಆನೆಶಿಬಿರ ಸ್ಥಾಪಿಸಿದರೆ ಸೆರೆಹಿಡಿಯಲಾದ ಕಾಡಾನೆಗಳನ್ನು ನಾಗವಾರದಲ್ಲಿಯೇ ಪಳಗಿಸಬಹುದು.
ಪುಂಡಾನೆಗಳನ್ನು ಬೇರೆಕಡೆಯಿಂದ ಸಾಕಾನೆಗಳನ್ನು ತರುವ ಬದಲು ಇಲ್ಲಿಯೇ ಪಳಗಿದ ಆನೆಗಳ ಬಳಸಿಕೊಂಡು ಉಪಟಳ ನೀಡೋ ಕಾಡಾನೆಗಳ ಕಾಟ ಸ್ಪಲ್ಪ ಪ್ರಮಾಣದಲ್ಲಿ ತಪ್ಪಿಸಬಹುದು. ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ. ಕಾಡಾನೆಗಳ ದಾಳಿಯಿಂದ ಬೇಸತ್ತಿರುವ ಜನರಿಗೆ ಸ್ವಲ್ಪ ಸಮಾಧಾನವಾಗಹುದು ಎನ್ನುತ್ತಾರೆ ಪರಿಸರವಾದಿ ಎಚ್.ಎ.ಕಿಶೋರ್ ಕುಮಾರ್.
ಎನ್. ನಂಜುಂಡೇಗೌಡ