Advertisement

ಇರುವೆಯೂ ಆನೆಯೂ

12:30 AM Mar 03, 2019 | |

ನಗು ಯಾವಾಗ ಬರುತ್ತದೆ ಎಂದು ನೆನಪಿಸಿಕೊಂಡರೇ ನಗು ಬರುತ್ತದೆ! ದುಂಡಗಿನ ಹೊಟ್ಟೆ, ದಪ್ಪ ದೇಹ, ಟೈಟ್‌ ಉಡುಪು, ಮೋಟು ಪೋನಿ ಟೈಲ್‌- ಹೀಗಿರುವ ವ್ಯಕ್ತಿಯೊಂದು ಭಸ್‌ ಭಸ್‌ ಎಂದು ಕಷ್ಟಪಟ್ಟು ಹೆಜ್ಜೆ ಇಡುತ್ತ, ಏದುಸಿರು ಬಿಡುತ್ತ ನಡೆಯುತ್ತಿರುವಾಗ ಜಾರಿ ಬಿದ್ದರೆಂದು ಊಹಿಸಿ ಯಾರಾದರೂ ನಗದೇ ಇರುವುದುಂಟೆ? ಆದರೆ, ನಕ್ಕರೆ ಅಪಹಾಸ್ಯ ಮಾಡಿದಂತೆ. ಬಿದ್ದವರನ್ನು ಕೈ ಎತ್ತಿ ಆಧರಿಸುವುದು ಮುಖ್ಯವೇ ಹೊರತು ನಗುವುದಲ್ಲ. ಆದರೆ ನಗುವುದು ಮನುಷ್ಯ ಸಹಜಗುಣವಲ್ಲವೆ? ನಗುವಲ್ಲಿ ನಗದಿದ್ದರೆ ಯಾರಾದರೂ ಏನೆಂದಾರು? ಏನು ಮಾಡೋಣ, ನಗುವುದು ಸುಲಭ, ನಗದಿರುವುದು ಕಷ್ಟವೇ.

Advertisement

ಈಗ ವಾಟ್ಸಾಪ್‌ನಲ್ಲಿ ಎಂತೆಂಥ ವಿಡಿಯೋ ಸಂದೇಶಗಳು ಬರುತ್ತವೆ. ಒಮ್ಮೆ ಒಬ್ಟಾಕೆ ದೊಡ್ಡ ಬಾಲ್‌ ಮೇಲೆ ನಿಂತುಕೊಂಡು ವ್ಯಾಯಾಮ ಮಾಡುತ್ತಿದ್ದ ವೀಡಿಯೋ ಬಂತು. ಬಾಲ್‌ ಉರುಳಿತು. ಆಕೆ “ಡುಬ್ಬ’ ಬಿದ್ದಳು. ಕೂಡಲೇ ಮಗುವೊಂದು ಹ್ಹಿ ಹ್ಹಿ ಹ್ಹಿ ಹ್ಹಿ ನಗುವ ವೀಡಿಯೋ. ನನ್ನ ನಾಲ್ಕು ವರ್ಷದ ಮಗಳು ಅದನ್ನು ಪುನಃ ಪುನಃ ರಿವೈಂಡ್‌ ಮಾಡಿ ನೋಡುತ್ತಿದ್ದಳು. ಬಿದ್ದು ಬಿದ್ದು ನಗುತ್ತಿದ್ದಳು. “”ನೀನು ಹೀಗೇ ಬೀಳು. ನಾನು ನಗುತ್ತೇನೆ” ನನ್ನ ಬಳಿ ಬಂದು ಕೇಳಿಕೊಂಡಳು.

ಅವಳನ್ನು ನೋಡುವಾಗಲೆಲ್ಲ ನನಗೆ ಅಜ್ಜಿ-ಮೊಮ್ಮಕ್ಕಳ ನಡುವಿನ ಸಂಬಂಧ ನೆನಪಾಗುತ್ತದೆ. ಅಜ್ಜಿ  ಕತೆ ಹೇಳುವುದು, ಮಕ್ಕಳು ಹೂಂಗುಟ್ಟುವುದು; ಕೆಲವೊಮ್ಮೆ ಅಜ್ಜಿ ಒಗಟಿನಂಥ ಕತೆಗಳನ್ನು ಹೇಳಿ ಅದಕ್ಕೆ ಮಕ್ಕಳಿಂದ ಉತ್ತರ ಕೇಳಿ ಗಲಿಬಿಲಿಗೊಳಿಸುವುದು- ಈ ಸಂತೋಷವೇ ಬೇರೆ. ಒಮ್ಮೆ ಅಜ್ಜಿ ಕತೆ ಹೇಳುತ್ತಿದ್ದಳು. ಒಂದು ಆನೆ ಮತ್ತು ಒಂದು ಇರುವೆ ತುಂಬ ಗೆಳೆಯರಾಗಿದ್ದವಂತೆ. ಸಂಜೆ ಇಬ್ಬರೂ ಒಟ್ಟಿಗೆ ವಾಕಿಂಗ್‌ ಹೋಗುತ್ತಿದ್ದವಂತೆ. ಇರುವೆ ಮುಂದೆ ಓಡಿಹೋಗಿ ಆನೆಗೆ ಗೊತ್ತಾಗದಂತೆೆ ಒಂದು ಮರದ ಮರೆಯಲ್ಲಿ ಬಚ್ಚಿಟ್ಟುಕೊಂಡಿತಂತೆ. “ಯಾಕೆ ಬಚ್ಚಿಟ್ಟುಕೊಂಡಿತು?’ ಅಜ್ಜಿಯ ಪ್ರಶ್ನೆ.

ಮಕ್ಕಳು ಹೇಳಿದರು, “ಆನೆಯನ್ನು ಕಾಲು ಅಡ್ಡಹಾಕಿ ಬೀಳಿಸಲು!’  
ಆದರೆ, ಅಜ್ಜಿಯ ಉತ್ತರವೇ ಬೇರೆ. “ಆನೆ ಇರುವೆಗೆ ಸಕ್ಕರೆ ಮಿಠಾಯಿ ಕೊಟ್ಟಿಲ್ಲ. ಅದಕ್ಕೇ’.
ಅಜ್ಜಿ ಮತ್ತೂಂದು ಕಥೆ ಆರಂಭಿಸಿದರು.
“ಆನೆ ಮತ್ತು ಇರುವೆ ಬೈಕ್‌ನಲ್ಲಿ ಹೋಗುತ್ತಿದ್ದವಂತೆ. ಬೈಕ್‌ ಅಪಘಾತವಾಯಿತು. ಆನೆಗೆ ಗಾಯವಾಯಿತು. ಡ್ರೈವ್‌ ಮಾಡುತ್ತಿದ್ದ ಇರುವೆಗೆ ಏನೂ ಆಗಲಿಲ್ಲ. ಯಾಕೆ?’
ಮಕ್ಕಳ ಉತ್ತರ, “ಇರುವೆ ತುಂಬ ಚಿಕ್ಕದಿತ್ತಲ್ಲ , ಅದಕ್ಕೆ!’
ಹಲವರಿಂದ ಹಲವು ಉತ್ತರ. ಏನೇನು ಉತ್ತರ ಹೇಳಿದರೂ ಅಜ್ಜಿ ಗೆ ಸಮಾಧಾನವಿಲ್ಲ. ಕೊನೆಗೆ ಅಜ್ಜಿಯೇ ಉತ್ತರ ಹೇಳಿದಳು. “ಇರುವೆ ಹೆಲ್ಮೆಟ್‌ ಹಾಕ್ಕೊಂಡಿತ್ತಲ್ಲ, ಹಾಗಾಗಿ!’
“ಆನೆಯನ್ನು ಆಸ್ಪತ್ರೆಗೆ ಸೇರಿಸುವಾಗ ಇರುವೆಯೂ ಜೊತೆಗೆ ಹೋಯಿತು. ಯಾಕೆ?’ ಮರುಪ್ರಶ್ನೆ.
ಮಕ್ಕಳಿಗೆ ಉತ್ತರ ಹೊಳೆಯಿತು. “ಗೆಳೆಯನಲ್ಲವೆ? ಒಟ್ಟಿಗೆ ಹೋಗಲೇಬೇಕು’.
ಅಜ್ಜಿಯ ಉತ್ತರ, “ಹಾಗಲ್ಲ, ಇರುವೆಗೆ ದಾನ ಮಾಡುವುದರಲ್ಲಿ ಉತ್ಸಾಹ. ರಕ್ತದಾನ ಮಾಡಲು ಹೋಗಿತ್ತು!’
ಒಮ್ಮೆ ಆನೆ ದಾರಿಯಲ್ಲಿ ಹೋಗುತ್ತಿರುವಾಗ ಸತ್ತ ಇರುವೆಯೊಂದನ್ನು ಕಂಡಿತು. ಆನೆ  “ಡೆಡ್‌ ಆ್ಯಂಟ್‌ ಡೆಡ್‌ ಆ್ಯಂಟ್‌’ ಎಂದು ಕುಣಿದಾಡಿತು. ಮುಂದೆ ಹೋದಾಗ ಜೀವಂತ ಇರುವೆ ಕಂಡಿತು. ಈಗ ಆನೆ ಏನು ಹೇಳಿ ಕುಣಿಯುತ್ತದೆ?’ ಅಜ್ಜಿಯ ಪ್ರಶ್ನೆ.
ಆಗಲೂ ಆನೆಯು ಕುಣಿಯುತ್ತದೆ, ಇರುವೆಯನ್ನು ಕಾಲಡಿ ಹಾಕಿ ! 
ಇನ್ನೊಮ್ಮೆ ಅಜ್ಜಿ ಕೇಳಿದ ಪ್ರಶ್ನೆ ಸ್ವಾರಸ್ಯಕರವಾಗಿದೆ. “ಆನೆಯನ್ನು ಫ್ರಿಡ್ಜ್ನೊಳಗೆ ಇಡುವುದು ಹೇಗೆ?’
ಮಕ್ಕಳು ಕೂಡಲೇ ಹೇಳಿದರು, “ಆಟಿಕೆ ಆನೆಯಲ್ಲವೆ? ಅದನ್ನು ಸುಲಭವಾಗಿ ಫ್ರಿಡ್ಜ್ ನೊಳಗಿಡಬಹುದು’.
ಅಜ್ಜಿಯ ಆಕ್ಷೇಪ, “ಜೀವಂತ ಆನೆಯನ್ನು ಹೇಗೆ ಫ್ರಿಡ್ಜ್ ನೊಳಗಿಡುವುದು?’
ಮಕ್ಕಳಿಗೆ ಉತ್ತರ ಗೊತ್ತಾಗಲಿಲ್ಲ. ಆಗ ಅಜ್ಜಿಯೇ ಹೇಳಿದರು, “ಗೋದ್ರೆಜ್‌ ಕಂಪೆನಿಗೆ ಹೇಳಿ ದೊಡ್ಡ ಫ್ರಿಡ್ಜ್ ರೆಡಿ ಮಾಡುವುದು. ಅದರೊಳಗೆ ಆನೆಯನ್ನು ಇಡುವುದು’
ಮಕ್ಕಳು “ಹೋ’ ಎಂದು ನಕ್ಕರು.

“ಹಡಗು ಮುಂದಕ್ಕೆ ಚಲಿಸಿತು. ಭಾರ ಹೆಚ್ಚಾಗಿ ಮುಳುಗಲಾರಂಭಿಸಿತು. ಈಗ ಏನು ಮಾಡುವುದು?’ ಅಜ್ಜಿಯ ಪ್ರಶ್ನೆ.
ಮಕ್ಕಳು ತತ್‌ಕ್ಷಣ ಹೇಳಿದರು, “ಆಗ ಹೇಳಿದ ಫ್ರಿಡ್ಜ್ನ್ನ ಇನ್ನೂ ಇಟ್ಟುಕೊಂಡಿದ್ದೀಯಾ. ಅದನ್ನು ಎಸೆದು ಬಿಡು. ಹಡಗು ಸಲೀಸಾಗಿ ಸಾಗುತ್ತದೆ’ 
ಅಜ್ಜಿಗೆ ಉತ್ತರದಿಂದ ಸಮಾಧಾನವಾಗಿರಬೇಕು. “ಸರಿ, ಫ್ರಿಡ್ಜ್ನ್ನು ಎಸೆದುಬಿಟ್ಟೆ’ ಎಂದಳು.
“ಒಂದು ಕಡೆ ಗಂಡ-ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು. ಇವತ್ತು ಗಂಡ ಮನೆಗೆ ಬರುವಾಗ ಅವಳು ಮರೆಯಲ್ಲಿ ಲಟ್ಟಣಿಗೆ ಹಿಡಿದು ನಿಂತಿದ್ದಳು. ಆದರೆ, ಅವನು ಬರಲೇ ಇಲ್ಲ. ಹೆಂಡತಿ ಕಾದು ಕಾದು ಹೊರಗೆ ಬಂದು ನೋಡುವಾಗ ಅಂಗಳದಲ್ಲಿಯೇ ಬಿದ್ದಿದ್ದ. ಅವನಿಗೆ ಏನಾಯಿತು?’
ಮಕ್ಕಳಿಗೆ ಉತ್ತರ ಹೊಳೆಯಲಿಲ್ಲ.
ಅಜ್ಜಿಯೇ ಹೇಳಿದಳು, “ನಾನು ಆಗ ಪ್ರಿಡ್ಜ್ನ್ನು ಹೊರಗೆ ಎಸೆದಿದ್ದೇನಲ್ಲ, ಅದು ಅವನ ತಲೆಗೆ ತಾಗಿ, ಅವನು ಬಿದ್ದುಬಿಟ್ಟಿದ್ದ’
ವಿಷಯ ಏನೇ ಇರಲಿ, ನಗುವಿನಲ್ಲಿ ಕಲ್ಮಶವಿಲ್ಲದಿದ್ದರೆ ಅದು ಸುಂದರವೇ.

Advertisement

ಕೃಷ್ಣವೇಣಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next