ಸೇಡಂ: ತಾಲೂಕಿನ ಮಳಖೇಡದಲ್ಲಿ ರಾಷ್ಟ್ರಕೂಟರ ಉತ್ಸವದ ನಿಮಿತ್ತ ನಡೆದ ಮೆರವಣಿಗೆ ಇಡೀ ಉತ್ಸವದ ಕೇಂದ್ರ ಬಿಂದುವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಕಲಾ ತಂಡಗಳು ನೃತ್ಯದ ಸೊಬಗಿನಿಂದ ಜನರನ್ನು ತಮ್ಮತ್ತ ಸೆಳೆದರು.
ರಾಷ್ಟ್ರಕೂಟರ ಕೋಟೆಯಲ್ಲಿ ನಿರ್ಮಿಸಲಾಗಿರುವ ಕವಿರಾಜಮಾರ್ಗ ಕೃತಿ ಶಿಲಾಕೃತಿ ಬಳಿ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ವೈದ್ಯಕೀಯ ಶಿಕ್ಷಣ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ, ಗಂಗಾಧರ ಸ್ವಾಮೀಜಿ ಕಲ್ಯಾಣ ಮಂಟಪದ ಎದುರಿಗಿನ ಕಾರ್ಯಕ್ರಮದ ವೇದಿಕೆಗೆ ತಲುಪಿತು. ಕಾಸರಭೋಸಗಾದ ಭೀಮರಾಯ ಭಜಂತ್ರಿ ಅವರ ಮಹಿಳಾ ತಂಡದ ಚಿಟ್ಟಹಲಗೆ ವಾದನ ಸಾಮಾನ್ಯ ಮಹಿಳೆಯರ ಹುಬ್ಬೇರಿಸುವಂತಿತ್ತು. ಇನ್ನು ವೀರಗಾಸೆ ಕುಣಿತ, ಚಿತ್ರದುರ್ಗ ತಿಪ್ಪೆಸ್ವಾಮಿ ತಂಡದ ಗಾರುಡಿ ಗೊಂಬೆ, ತೀರ್ಥ ತಾಂಡದ ಶಾರುಬಾಯಿ ತಂಡದ ಲಂಬಾಣಿ ನೃತ್ಯ ಗಮನಸೆಳೆದವು. ಸ್ಥಳೀಯ ಕಲಾವಿದ ಮಲ್ಲಪ್ಪ ಅವರ ತಂಡದ ಹಲಗೆ ವಾದನ.
ರೇವಣಸಿದ್ದಯ್ಯ ತಂಡದ ಪುರವಂತಿಕೆ, ಕಲಬುರಗಿಯ ಸಂಜು ಬರಗಾಲಿ ತಂಡದ ಡೊಳ್ಳು ಕುಣಿತ, ಮಳಖೇಡ ಭಾಗ್ಯವಂತಿ ಕಲಾ ತಂಡದ ಕೋಲಾಟ, ಮಂಡ್ಯದ ಸವಿತಾ ಚೀರಕುನ್ನಯ್ಯ ತಂಡದ ಪೂಜಾ ಕುಣಿತ, ಮಂಡ್ಯ ರಾಜಮ್ಮ ತಂಡದ ಪಟ ಕುಣಿತ, ಚಾಮರಾಜನಗರ ಕುಮಾರ ತಂಡದ ಸೋಮನ ಕುಣಿತ, ಕಲಬುರಗಿ ನಾಗು ತಂಡದ ಚಿಲಿಪಿಲಿ ಗೊಂಬೆ, ಚಿತ್ರದುರ್ಗ ಮನೋಜನ ತಂಡದ ಕೀಲು ಕುದುರೆ, ಅಫಜಲಪುರ ಮಳೆಪ್ಪ ತಂಡದ ಹೆಜ್ಜೆ ಕುಣಿತ, ಕುರಕುಂಟಾ ಅಕ್ಕನಾಗಮ್ಮ ತಂಡದ ಮಹಿಳಾ ಡೊಳ್ಳು ಮತ್ತು ಆಳಂದನ ಬಲಭೀಮ ಮುದ್ರೆ ತಂಡದ ಗೋಂದಳಿ ನೃತ್ಯ ಇಡೀ ಉತ್ಸವಕ್ಕೆ ಮೆರುಗು ನೀಡಿತು.
ಸಚಿವ ಡಾ| ಶರಣಪ್ರಕಾಶ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಮುಖಂಡ ರಾಜಶೇಖರ ಪುರಾಣಿಕ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಹಜರತ್ ಸೈಯ್ಯದ್ ಶಹಾ ಮುಸ್ತಫಾ ಖಾದ್ರಿ, ಗ್ರಾಪಂ ಅಧ್ಯಕ್ಷ ನಾಗರಾಜ ನಂದೂರ, ಅಬ್ದುಲ್ ಗಫೂರ್, ಕರೆಪ್ಪ ಪಿಲ್ಲಿ, ಶ್ರೀನಿವಾಸ ತೆಲ್ಕೂರ, ಗುರುನಾಥರೆಡ್ಡಿ ಹೆಜ್ಜೆ ಹಾಕಿದರು.