ಪುತ್ತೂರು ವಿವೇಕಾನಂದ ಕಾಲೇಜಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಗಣೇಶೋತ್ಸವದಲ್ಲಿ ಕಥಕ್ಕಳಿಯ ಕುಚೇಲಂ ವೃತ್ತ ಪ್ರದರ್ಶನ ಮನ ಸೆಳೆಯಿತು. ಕಥಕ್ಕಳಿ ನೋಟಗಳು, ಪರಿಷ್ಕೃತ ಭಾವಭಂಗಿಗಳು ಮತ್ತು ವಿಷಯ ವಸ್ತುವಿನೊಂದಿಗೆ ಅಲಂಕೃತ ಹಾಡುಗಾರಿಕೆ ಹಾಗೂ ನಿಖರವಾದ ತಾಳ, ಮದ್ದಳೆ ಮತ್ತು ಚಂಡೆಯೂ ಸೇರಿಕೊಂಡು ಪಾತ್ರಧಾರಿಗಳ ಆರ್ಕಷಕ ಭಂಗಿಯಿಂದ ನಡೆದ ನೃತ್ಯ ಮನಸೊರೆಗೊಂಡಿತು.
ಗಣಪತಿ ಸ್ತುತಿಯೊಂದಿಗೆ ಕುಚೇಲ ವೃತ್ತಂ ಪ್ರಸಂಗ ಪ್ರಾರಂಭವಾಯಿತು. ದ್ವಾಪರಯುಗದ ಕೃಷ್ಣ ಮತ್ತು ಕುಚೇಲನ ಸ್ನೇಹ ಸಂಬಂಧವನ್ನು ದೃಶ್ಯ ರೂಪದಲ್ಲಿ ಪ್ರಸ್ತುತ ಪಡಿಸಿದರು. ಕುಚೇಲನನ್ನು ಕಂಡ ಕೃಷ್ಣನು ಸ್ನೇಹ ಭಾವದಿಂದ ಓಡಿ ಬರುವ ದೃಶ್ಯ ಚಕಿತಗೊಳಿಸಿತು. ಸಭಿಕರ ಮಧ್ಯದಲ್ಲಿ ಕೃಷ್ಣನು ಕುಚೇಲನನನ್ನು ಸ್ನೇಹ ಭಾವದಿಂದ ಆಲಿಂಗನ ಮಾಡುವುದು ಚಪ್ಪಾಳೆ ಗಿಟ್ಟಿಸಿಕೊಳ್ಳುವಂತೆ ಮಾಡಿತು. ಗಣಪತಿಯ ಮೂರ್ತಿಗೆ ಪ್ರಾರ್ಥಿಸಿ ಕುಚೇಲನನ್ನು ಕೃಷ್ಣನು ವೇದಿಕೆಗೆ ಕರೆದು ಹೋದ ದೃಶ್ಯಕ್ಕೆ ಹಿಮ್ಮೇಳದವರು ಸಾಥ್ ನೀಡಿದ್ದು ಖುಷಿಕೊಟ್ಟಿತು. ಪ್ರಾಣ ಸ್ನೇಹಿತನಾದ ಕುಚೇಲನಿಗೆ ರುಕ್ಮಿಣಿ ಮತ್ತು ಕೃಷ್ಣ ಸೇರಿ ಅತಿಥಿ ಸತ್ಕಾರದ ದೃಶ್ಯದ ಮೂಲಕ ತಮ್ಮ ಪವಿತ್ರವಾದ ಸ್ನೇಹವನ್ನು ತೋರ್ಪಡಿಸುವುದು ಬಹಳ ಆಕರ್ಷಣೀಯವಾಗಿತ್ತು. ಈ ದೃಶ್ಯಕ್ಕೆ ಅದ್ಭುತ ಕಂಠ ಸಿರಿಯ ಹಾಡು ಮತ್ತಷ್ಟು ರಂಗು ತಂದು ಕೊಟ್ಟಿತು. ನಿಷ್ಕಲ್ಮಶ ಸ್ನೇಹವನ್ನು ಸಾರುವ ದೃಶ್ಯವನ್ನು ಕಟ್ಟಿ ಕೊಡುವಲ್ಲಿ ಕಲಾವಿದರು ಯಶಸ್ವಿಯಾದರು .
ವಿಭಿನ್ನ ಹಾವಭಾವ ಭಂಗಿ ಮತ್ತು ನೃತ್ಯ ಶೈಲಿ ಪ್ರೀತಿಯ ಗೆಳೆಯನನ್ನು ಕುಳ್ಳಿರಿಸಿ ಮಾತನಾಡುವುದು ಹಿನ್ನಲೆ ಹಾಡಿನ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ.
ಇನ್ನು ಕುಚೇಲನು ತನ್ನ ಹಳೆಯ ಬಟ್ಟೆಯಲ್ಲಿ ಕಟ್ಟಿ ತಂದಿದ್ದ ಅವಲಕ್ಕಿಯನ್ನು ಕೃಷ್ಣನಿಗೆ ಕೊಡಲು ಹಿಂಜರಿಯುತ್ತಾನೆ. ಕುಚೇಲನ ಸಂಕುಚಿತ ಸ್ವಭಾವ ಪೇಕ್ಷಕರಿಗೆ ಅಲ್ಪ ಬೇಸರವನ್ನುಂಟು ಮಾಡುತ್ತದೆ. ತದನಂತರ ಕುಚೇಲ ಮಹತ್ವ ಮತ್ತು ಶ್ರೀ ಕೃಷ್ಣನ ಮೇಲಿಟ್ಟ ಭಕ್ತಿ ಗೌರವ, ಪ್ರೀತಿಯನ್ನು ಕಂಡ ರುಕ್ಮಿಣಿಯು ಭಾವಪರವಶಳಾಗುತ್ತಾಳೆ. ಕೃಷ್ಣನ ಜೊತೆ ಸೇರಿ ತಾನು ಅವಲಕ್ಕಿಯ ರುಚಿಯನ್ನು ಸವಿಯುತ್ತಾಳೆ. ಈ ಎಲ್ಲಾ ದೃಶ್ಯಾವಳಿಗಳನ್ನು ಸಂಭಾಷಣೆಯ ಹಾಡಿನ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಇವರ ನಡುವಿನ ಸಂಭಾಷಣೆ ದೃಶ್ಯವೂ ಪೇಕ್ಷಕರಿಗೆ ಸಂತೋಷದ ಕಡಲಲ್ಲಿ ತೇಲಿಸಿತು.
ಕೃಷ್ಣನಾಗಿ ಕಲಾಮಂಡಲ ಗುರುವಯ್ಯರ್, ಕುಚೇಲನಾಗಿ ಕಲಾಮಂಡಲ ಹರಿನಾರಾಯಣ್, ರುಕ್ಮಿಣಿಯಾಗಿ ಕಲಾಮಂಡಲ ನವೀನ್ ವಿಭಿನ್ನ ಹಾವಭಾವದ ಮತ್ತು ವಿಭಿನ್ನ ಭಂಗಿಯ ಮೂಲಕ ರಂಜಿಸಿದರು. ಅದ್ಭುತ ಕಂಠ ಸಿರಿಯ ಮೂಲಕ ಸಾಯಿ ಕುಮಾರ್ ಮತ್ತು ಪಾಲೂರು ಗಣೇಶ್ ಪೇಕ್ಷಕರ ಚಿತ್ತವನ್ನು ಸೆಳೆಯುವಲ್ಲಿ
ಯಶಸ್ವಿಯಾದರು.
ಸಾಯಿನಂದಾ ಚಿಟ್ಪಾಡಿ