Advertisement

ಮನೆ ಮಾಳಿಗೆಗೆ ತಾಗ್ತಿದೆ ವಿದ್ಯುತ್‌ ತಂತಿ!

04:50 PM Aug 23, 2022 | Team Udayavani |

ದೋಟಿಹಾಳ: ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ವಿದ್ಯುತ್‌ ಅವಘಡದಿಂದ ಮೃತಪಟ್ಟಿದ್ದಾರೆ. “ಹರ್‌ ಘರ್‌ ತಿರಂಗಾ’ ಅಭಿಯಾನ ನಿಮಿತ್ತ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವ ವೇಳೆ ಹನುಮನಾಳದ ನಿವಾಸಿ ಜಗದೀಶ ಹಡಪದ(52) ಅವರು ಆ. 13ರಂದು ಧ್ವಜದ ಕಂಬ ಅಳವಡಿಸುವ ವೇಳೆ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

Advertisement

ಈ ಮಧ್ಯೆ ಸಮೀಪದ ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್‌ ಕಂಬದ ತಂತಿಗಳು ಮನೆಗಳ ಮೇಲೆ ಹಾಯ್ದು ಹೋಗಿದ್ದು, ಗ್ರಾಮಸ್ಥರು ನಿತ್ಯ ಅಪಾಯ ಮತ್ತು ಮಳೆ ಬಂದಾಗ ವಿದ್ಯುತ್‌ ಸ್ಪರ್ಶ ಆಗುವುದೆಂಬ ಭಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಗ್ರಾಮದಲ್ಲಿ ಜೆಸ್ಕಾಂ ಇಲಾಖೆಯವರು ವ್ಯವಸ್ಥಿತವಾಗಿ ವಿದ್ಯುತ್‌ ಕಂಬಗಳನ್ನು ಹಾಕಿಲ್ಲ. ಹೀಗಾಗಿ ಮುಖ್ಯರಸ್ತೆ ಸೇರಿದಂತೆ ಒಳ ರಸ್ತೆಗಳಲ್ಲಿ ವಿದ್ಯುತ್‌ ಕಂಬಗಳನ್ನು ಬಿಟ್ಟು ಮನೆಯ ಹಿಂಭಾಗ ಅಥವಾ ರಸ್ತೆ ಮಧ್ಯೆ ಇರುವುದು ಕಂಡುಬರುತ್ತದೆ. ವಿದ್ಯುತ್‌ ತಂತಿಗಳು ಮನೆ ಮೇಲೆ ಹಾಯ್ದು ಹೋಗಿವೆ. ಸದ್ಯ ಜೆಸ್ಕಾಂ ಸಿಬ್ಬಂದಿ ನಿರ್ವಹಣೆ ಇಲ್ಲದೇ ತಂತಿಗಳು ಮನೆ ಮಾಳಿಗೆ (ಚಾವಣಿ) ತಾಗುತ್ತಿವೆ. ಹಲವು ಸಲ ಗಾಳಿಗೆ ತಂತಿ ಅಲುಗಾಡಿ ಬೆಂಕಿ ಕಿಡಿ ಕಾಣಿಸಿಕೊಂಡಿದ್ದುಂಟು. ಆಗ ಮನೆಯಲ್ಲಿದ್ದ ಜನರು ಭಯಭೀತರಾಗಿ ಹೊರಗಡೆ ಬರುತ್ತಾರೆ. ಗ್ರಾಮದ ಯುವಕರು, ಮಹಿಳೆಯರು ಅಪಾಯಕ್ಕೆ ಸಿಲುಕಿದ ಉದಾಹರಣೆಗಳಿವೆ ಎಂದು ಗ್ರಾಮಸ್ಥರು ದೂರುತ್ತಾರೆ.

ಕಣ್ಣು ಮುಚ್ಚಿ ಕುಳಿತ ಜೆಸ್ಕಾಂ: ಗ್ರಾಮಸ್ಥರು ಗ್ರಾಪಂ ಹಾಗೂ ಜನಪ್ರತಿನಿ ಧಿಗಳಿಗೆ ಸಾಕಷ್ಟು ಸಲ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಕುಷ್ಟಗಿಯ ಜೆಸ್ಕಾಂ ಕಚೇರಿಗೆ ತೆರಳಿ ಅಧಿ ಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ತಾವೇ ತಂತಿಗಳಿಗೆ ಪ್ಲಾಸ್ಟಿಕ್‌ ಪೈಪ್‌ ಅಥವಾ ಕಟ್ಟಿಗೆಗಳಿಂದ ರಕ್ಷಣೆ ಮಾಡಿಕೊಂಡಿದ್ದೇವೆ ಎಂದು ಗ್ರಾಮದ ಮಂಗಳಪ್ಪ ವಾಲಿಕಾರ, ಚಂದನಗೌಡ ಪೊಲೀಸಪಾಟೀಲ್‌ ಸೇರಿದಂತೆ ಇತರರು ವಿವರಿಸಿದರು.

ಗ್ರಾಪಂ ವಾದ: ಗ್ರಾಮದಲ್ಲಿ ವಿದ್ಯುತ್‌ ಕಂಬಗಳಿಗೆ ಜೋಡಿಸಲಾದ ತಂತಿಗಳ ಸಾಲು ಕೆಳಗೆಯೇ ಕೆಲ ಗ್ರಾಮಸ್ಥರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಅಂತಹ ಮನೆಗಳಲ್ಲಿ ವಾಸಿಸುವವರಿಗೆ ಅಪಾಯ ತಗಲುವುದು ಖಂಡಿತ. ಈ ಕುರಿತು ಬಹುದಿನಗಳಿಂದ ಕುಷ್ಟಗಿಯ ಜೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಜೊತೆಗೆ ಜನಪ್ರತಿನಿ ಧಿಗಳಿಗೆ ಹಲವು ಬಾರಿ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ. ಏನು ಮಾಡದ ಸ್ಥಿತಿ ಪಂಚಾಯಿತಿಗೆ ಎದುರಾಗಿದೆ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.

Advertisement

ಒಂದು ವರ್ಷದಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿದ್ಯುತ್‌ ಅವಘಡದಿಂದ ಅನಾಹುತಗಳು ಸಂಭವಿಸಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಜೆಸ್ಕಾಂ ಇಲಾಖೆಯವರು ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬುದು ಸಾರ್ವಜನಿಕರ ಕಳಕಳಿಯಾಗಿದೆ.

ಕಡೇಕೊಪ್ಪ ಗ್ರಾಮದಲ್ಲಿ ವಿದ್ಯುತ್‌ ಕಂಬಗಳನ್ನು ಹಾಗೂ ಟ್ರಾನ್ಸಫರ್ಮರ್‌ (ವಿದ್ಯುತ್‌ ಪರಿವರ್ತಕ) ಬೇರೆಕಡೆಗೆ ಸ್ಥಳಾಂತರಿಸಬೇಕೆಂದು ಜೆಸ್ಕಾಂ ಇಲಾಖೆಗೆ ಈಗಾಗಲೇ 2-3ಪತ್ರಗಳನ್ನು ಬರೆಯಲಾಗಿದೆ. ಅವರಿಂದ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅಮೀನಸಾಬ್‌ ಅಲಂದಾರ, ಕೇಸೂರ ಗ್ರಾಪಂ ಪಿಡಿಒ

ಕಡೇಕೊಪ್ಪ ಗ್ರಾಮದಲ್ಲಿ ಮನೆಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್‌ ಕಂಬದ ತಂತಿ ಸರಿಪಡಿಸಲು ಒಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೊದನೆಗೆ ಗಂಗಾವತಿ ಡಿವಿಜನ್‌ ಕಚೇರಿಗೆ ಕಳುಸಿಕೊಡಲಾಗಿದೆ. ಅಲ್ಲಿಂದ ಅನುಮೋದನೆಯಾಗಿ ಬಂದ ಕೂಡಲೇ ಕಂಬ, ತಂತಿಗಳನ್ನು ಸ್ಥಳಾಂತರಿಸುತ್ತೇವೆ. –ದವಲಸಾಬ್‌ ನದಾಫ್‌, ಎಇಇ ಕುಷ್ಟಗಿ

-ಮಲ್ಲಿಕಾರ್ಜುನ ಮೆದಿಕೇರಿ

 

Advertisement

Udayavani is now on Telegram. Click here to join our channel and stay updated with the latest news.

Next