Advertisement

ಕರ್ನಾಟಕದ ವಿದ್ಯುತ್‌ ಕ್ಷೇತ್ರಕ್ಕೆ ಇಸ್ರೇಲ್‌ ತಂತ್ರಜ್ಞಾನ

03:45 AM Jan 27, 2017 | Team Udayavani |

ಬೆಂಗಳೂರು: ವಿದ್ಯುತ್‌ ಕ್ಷೇತ್ರದಲ್ಲೂ ಸಹ ಇಸ್ರೇಲ್‌ ತಂತ್ರಜ್ಞಾನ ಅಳವಡಿಕೆಗೆ ರಾಜ್ಯ ಸರ್ಕಾರ ಚಿಂತಿಸುತ್ತಿದ್ದು, ವಿದ್ಯುತ್‌ ಸುಧಾರಿತ ಯೋಜನೆಗಳ ಸಾಧಕ-ಬಾಧಕಗಳ ಸಾಕ್ಷಾತ್‌ ಅಧ್ಯಯನಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ತಂಡ ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದೆ.

Advertisement

ಕರ್ನಾಟಕ ಈಗಾಗಲೇ ಕೃಷಿ ಮತ್ತು ಹನಿ ನೀರಾವರಿ ಪದ್ದತಿಯಲ್ಲಿ ಇಸ್ರೇಲ್‌ನ ತಂತ್ರಜ್ಞಾನಕ್ಕೆ ಮಾರು ಹೋಗಿದೆ. ಅದೇ ರೀತಿ ಅಲ್ಲಿನ ಇಂಧನ ಕ್ಷೇತ್ರದ ತಂತ್ರಜ್ಞಾನವನ್ನು ರಾಜ್ಯದ ವಾತಾವರಣಕ್ಕೆ ಪೂರಕವಾಗಿದ್ದರೆ ಇಲ್ಲಿನ ವಿದ್ಯುತ್‌ ವಲಯದಲ್ಲಿ ಬಳಸಿಕೊಂಡು ಕ್ರಾಂತಿಕಾರಕ ಬದಲಾವಣೆ ತರಲು ಸರ್ಕಾರ ಉತ್ಸುಕವಾಗಿದೆ.

ಈಗಾಗಲೇ ಪ್ರಾಥಮಿಕ ಹಂತದ ಮಾಹಿತಿ ವಿನಿಮಯ ಪೂರ್ಣಗೊಂಡಿದೆ. ಖುದ್ದಾಗಿ ತಂತ್ರಜ್ಞಾನದ ಪರಿಶೀಲನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳೊಂದಿಗೆ ಇದೇ ತಿಂಗಳ 28ರಿಂದ ಫೆ.3ರವರೆಗೆ ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಉತ್ಪಾದನಾ ತಂತ್ರಜ್ಞಾನ ಮತ್ತು ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯುತ್‌ ಪ್ರಸರಣದ ನಿರ್ವಹಣಾ ತಂತ್ರಜ್ಞಾನದ ಬಗ್ಗೆಯೂ ಉಭಯ ಸರ್ಕಾರಗಳು ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ.

ಇಸ್ರೇಲ್‌ ಸರ್ಕಾರವೇ ಕರ್ನಾಟಕಕ್ಕೆ ವಿದ್ಯುತ್‌ ತಂತ್ರಜ್ಞಾನದ ನೆರವು ನೀಡಲು ಹಾಗೂ ತನಗೆ ಅಗತ್ಯವಿರುವ ತಂತ್ರಜ್ಞಾನವನ್ನು ರಾಜ್ಯದಿಂದ ಪಡೆಯಲು ಉತ್ಸುಕವಾಗಿ ರಾಜ್ಯ ಸರ್ಕಾರಕ್ಕೆ ಆಹ್ವಾನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೇಲ್‌ ಸರ್ಕಾರದ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಇಂಧನ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ಇಸ್ರೇಲ್‌ ಪ್ರವಾಸಕ್ಕೆ ನಿಯೋಜಿಸಿದ್ದಾರೆ.

ರಾಜ್ಯದ ನಿಯೋಗ ಜ.30ರಂದು ಇಸ್ರೇಲ್‌ನ ರಾಷ್ಟ್ರೀಯ ಮೂಲ ಸೌಕರ್ಯ, ಇಂಧನ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಲಿದೆ. ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಯಲಿದೆ. ಅಶಾಲಿಮ್‌ ವಿದ್ಯುತ್‌ ಸ್ಥಾವರಕ್ಕೂ
ಭೇಟಿ ನೀಡಲಿದ್ದು, ತಜ್ಞರು, ಸಂಶೋಧಕರು ಹಾಗೂ ವಿದ್ಯುತ್‌ ಪ್ರಸರಣಾ ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಲಿದ್ದಾರೆ.

Advertisement

ವಿಶ್ವದ ಐದನೇ ಅತಿ ದೊಡ್ಡ ಸ್ಥಾವರ?: ಇಸ್ರೇಲ್‌ನ ನೆವೆಗ್‌ ಮರುಭೂಮಿಯಲ್ಲಿ ನಿರ್ಮಾಣವಾ ಗುತ್ತಿರುವ ಅಶಾಲಿಮ್‌ ವಿದ್ಯುತ್‌ ಸ್ಥಾವರವು ಸೌರ ವಿದ್ಯುತ್‌, ಫೋಟೋವೋಲ್ಟೆಕ್‌ ವಿದ್ಯುತ್‌ ಹಾಗೂ ನೈಸರ್ಗಿಕ ಅನಿಲ ಉತ್ಪಾದನಾ ಘಟಕಗಳನ್ನು
ಒಳಗೊಂಡಿದೆ. ಜಗತ್ತಿನಲ್ಲೇ ಐದನೇ ಅತಿದೊಡ್ಡ ಸ್ಥಾವರವೆಂಬ ಹಿರಿಮೆಗೆ ಪಾತ್ರವಾಗುವ ಸಾಧ್ಯತೆ ಇದೆ. ಈ ಸ್ಥಾವರಕ್ಕೂ ಸಚಿವರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂಭವವಿದೆ.

ಕೃಷಿ ಕ್ಷೇತ್ರಕ್ಕೆ ಪರಿಣಾಮಕಾರಿ ವಿದ್ಯುತ್‌ ವಿತರಣೆ, ನವೀಕರಿಸಬಹುದಾದ ಇಂಧನ ಉತ್ಪಾದನೆ ಸೇರಿದಂತೆ ಇತರ ಸುಧಾರಿತ ತಂತ್ರಜ್ಞಾನಗಳ ಅಧ್ಯಯನ, ವೀಕ್ಷಣೆಗಾಗಿ ಇಸ್ರೇಲ್‌ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇಸ್ರೇಲ್‌ ಸರ್ಕಾರದ ಆಹ್ವಾನದ ಮೇರೆಗೆ, ಮುಖ್ಯಮಂತ್ರಿ ಸೂಚನೆ ಮೇರೆಗೆ ನನ್ನ ನೇತೃತ್ವದಲ್ಲಿ ನಿಯೋಗ ತೆರಳಲಿದೆ.ಇಸ್ರೇಲ್‌ನಿಂದ ಮಾಹಿತಿ ಪಡೆಯುವುದರ ಜತೆಗೆ ರಾಜ್ಯದಲ್ಲಿನ ಯಶಸ್ವಿ ಪ್ರಯೋಗಗಳ ಬಗ್ಗೆ ಅವರು ಮಾಹಿತಿ ಪಡೆಯಲಿದ್ದಾರೆ. ಹೂಡಿಕೆದಾರರನ್ನೂ ಸಹ ರಾಜ್ಯಕ್ಕೆ ಆಹ್ವಾನಿಸಲಾಗುವುದು. ಇದರಿಂದಾಗಿ ಪರಸ್ಪರ ಉತ್ತಮ ತಂತ್ರಜ್ಞಾನಗಳ ವಿನಿಮಯವಾಗುವ ನಿರೀಕ್ಷೆ ಇದೆ.
– ಡಿ.ಕೆ.ಶಿವಕುಮಾರ್‌,
ಇಂಧನ ಸಚಿವ

-ಎಂ.ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next