Advertisement
ಎ.16ರ ಸಂಜೆ 6ರಿಂದ ಎ.18ರ ಮಧ್ಯರಾತ್ರಿ 12 ಗಂಟೆಯವರೆಗೆ ಸಂತೆ ಮತ್ತು ಎಲ್ಲ ರೀತಿಯ ಜಾತ್ರೆ ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದನ್ವಯ ಎಪಿಎಂಸಿ(ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ವಾರದ ಸಂತೆ ನಡೆಯುತ್ತಿದ್ದ ಎಪಿಎಂಸಿ ಪ್ರಾಂಗಣದ ಗೇಟು ಹಾಕಿ ಬೀಗ ಹಾಕಿತ್ತು. ಮಾಹಿತಿ ತಿಳಿಯದೆ ಮಾಮೂಲಿನಂತೆ ಬುಧವಾರದ ಸಂತೆಗೆ ಆಗಮಿಸಿದ ನೂರಾರು ಮಂದಿ ಗೇಟಿಗೆ ಬಾಗಿಲು ಹಾಕಿ ನೊಟೀಸು ಲಗತ್ತಿಸಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ ವಾಪಸಾದರು.
ಕೊಪ್ಪಳ, ಶಿವಮೊಗ್ಗ, ದಾವಣಗೆರೆ ಮೊದಲಾದೆಡೆಗಳಿಂದ ಬಂದಿದ್ದ ಹತ್ತಾರು ಮಂದಿ ವ್ಯಾಪಾರಿಗಳು ಪ್ರಾಂಗಣದ ಗೇಟು ನೋಡಿ ಕಂಗಾಲಾಗಿದ್ದಾರೆ. ಕೆಲವು ಮಂದಿ ರಸ್ತೆ ಬದಿಯಲ್ಲಿಯೇ ವ್ಯಾಪಾರಕ್ಕೆ ಮುಂದಾದರು. ಹೆಚ್ಚಿನ ವ್ಯಾಪಾರಿಗಳು ಅಲ್ಲಿಂದ ತೆರಳಿದರು. “ನಮಗೆ ಯಾವುದೇ ಮಾಹಿತಿ ನೀಡಲಿಲ್ಲ. ಕೆಲವರು ಮತ್ತೆ ಊರಿಗೆ ವಾಪಸಾಗಿದ್ದಾರೆ. ಇದರಿಂದ ಅನೇಕರಿಗೆ ನಷ್ಟವಾಗಿದೆ’ ಎಂದು ಪ್ರಾಂಗಣದಿಂದ ವಾಪಸಾಗುತ್ತಿದ್ದ ಕೊಪ್ಪಳದ ತರಕಾರಿ, ಹಣ್ಣು ವ್ಯಾಪಾರಿಯೋರ್ವರು ಅಲವತ್ತುಕೊಂಡರು.