Advertisement

BJP: ಪಂಚರಾಜ್ಯ ಚುನಾವಣೆ ಬಳಿಕವೇ ಅಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ?

11:05 PM Oct 28, 2023 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಸಾರಥಿ ಹಾಗೂ ಉಭಯ ಸದನದ ವಿಪಕ್ಷ ನಾಯಕರ ನೇಮಕ ಪ್ರಕ್ರಿಯೆ ಮತ್ತೆ ಗ್ರಹಣ ಗ್ರಸ್ತವಾಗಿದೆ. ಪಂಚರಾಜ್ಯಗಳ ಚುನಾವಣೆಯ ಫ‌ಲಿತಾಂಶದವರೆಗೆ ಕಾಯಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಈ ಮಧ್ಯೆ ತೆಲಂಗಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ “ಒಬಿಸಿ ನಾಯಕತ್ವ’ದ ಹೇಳಿಕೆ ರಾಜ್ಯದಲ್ಲೂ ಚರ್ಚೆಗೆ ಕಾರಣವಾಗಿದೆ.

Advertisement

ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವನ್ನು ಕಳೆದ ಐದು ತಿಂಗಳುಗಳಿಂದ ಒಕ್ಕಲಿಗ ಹಾಗೂ ಲಿಂಗಾಯತ ನಾಯಕತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಚರ್ಚೆಗೆ ಒಳಪಡಿಸಲಾಗುತ್ತಿದೆ. ಈ ಎರಡು ಆಯಕಟ್ಟಿನ ಹುದ್ದೆಗೆ ಈ ಎರಡು ಸಮುದಾಯದ ನಾಯಕರ ಹೆಸರನ್ನೇ ಹೆಚ್ಚಾಗಿ ಹರಿಬಿಡಲಾಗಿದೆ. ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ, ಲಿಂಗಾಯತರಿಗೆ ವಿಪಕ್ಷ ಸ್ಥಾನ ಎಂಬಂತೆ ರಾಜ್ಯ ಮಟ್ಟದಲ್ಲಿ ಹಂಚಿಕೆ ನಡೆಯುತ್ತಿದೆ. ಆದರೆ ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಅಮಿತ್‌ ಶಾ ನೀಡಿದ “ಒಬಿಸಿ ನಾಯಕತ್ವ’ ವಿಚಾರ ಈಗ ಕರ್ನಾಟಕಕ್ಕೂ ವಿಸ್ತರಣೆ ಯಾಗಬಹುದು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಒಕ್ಕಲಿಗ ಹಾಗೂ ಲಿಂಗಾಯತರ ರೀತಿಯಲ್ಲೇ ಹಿಂದುಳಿದ ವರ್ಗದ ಸಣ್ಣ ಸಣ್ಣ ಜಾತಿಗಳು ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸುತ್ತಿವೆ. ಕುರುಬ ಸಮುದಾಯವನ್ನು ಹೊರತುಪಡಿಸಿ ಇತರ ಹಿಂದುಳಿದ ವರ್ಗ ಬಿಜೆಪಿ ಜತೆಗಿದೆ. ಆದರೆ ಹಿಂದುಳಿದ ವರ್ಗಕ್ಕೆ ನಿರೀಕ್ಷಿತ ಆದ್ಯತೆ ಬಿಜೆಪಿಯಲ್ಲಿ ಇದುವರೆಗೆ ಸಿಕ್ಕಿಲ್ಲ. ಕೆ.ಎಸ್‌.ಈಶ್ವರಪ್ಪ ಹೊರತುಪಡಿಸಿ ಒಬಿಸಿಯಲ್ಲಿ ಹೊಸ ನಾಯಕತ್ವವನ್ನೇ ಬಿಜೆಪಿ ಬೆಳೆಸಿಲ್ಲ. ಹೀಗಾಗಿ ಒಬಿಸಿ ಹಾಗೂ ದಲಿತ ಸಮುದಾಯದ ಮೇಲೆ ಬಿಜೆಪಿ ವರಿಷ್ಠರು ಲಕ್ಷ್ಯ ಹರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಜತೆಗೆ ಮೈತ್ರಿ ಮಾಡಿರು ವುದರಿಂದ ಹಳೆ ಮೈಸೂರು ಭಾಗ ಹಾಗೂ ಒಕ್ಕಲಿಗರಿಗೆ ಆದ್ಯತೆ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಒಲವು ಹೊಂದಿಲ್ಲ. ಹೀಗಾಗಿ ಲಿಂಗಾ ಯತ- ಒಬಿಸಿ ಅಥವಾ ಒಬಿಸಿ- ದಲಿತ ಕಾಂಬಿ ನೇಷನ್‌ ಬಗ್ಗೆ ಚರ್ಚೆ ನಡೆಯುತ್ತಿದೆ.

ಸದ್ಯಕ್ಕಿಲ್ಲ
ಈ ಎಲ್ಲ ಸಾಧ್ಯಾಸಾಧ್ಯತೆ ಹಿನ್ನೆಲೆ ಯಲ್ಲಿ ತತ್‌ಕ್ಷಣಕ್ಕೆ ವಿಪಕ್ಷ ಹಾಗೂ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ನಡೆಸದಿರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಪಂಚರಾಜ್ಯ ಚುನಾ ವಣ ಫ‌ಲಿತಾಂಶ ಆಧರಿಸಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನಕ್ಕೂ ವಿಪಕ್ಷ ನಾಯಕರು ಸಿಗುವುದು ಅನುಮಾನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next