Advertisement

ಜನರ ನಡುವೆ ಕಾಣದ ಚುನಾವಣ ಮೂಡ್‌ ಒಂತೆ ದಿನ ಪೋವಡ್‌..ಒಂತೆ ದಿನಾ..

12:02 AM Apr 14, 2024 | Team Udayavani |

ಮಂಗಳೂರು: ಬಿಸಿಲಿನ ಧಗೆ ಏರುತ್ತಲೇ ಇದೆ. ಅಲ್ಲಲ್ಲಿ ಸಣ್ಣಗೆ ಮಳೆಯಾಗುತ್ತಿದೆ. ಆದರೆ ಚುನಾವಣೆ ಕಾವು ಇನ್ನೂ ಬಿಸಿಲಿನ ಧಗೆಯನ್ನು ಮೀರಿದಂತಿಲ್ಲ.

Advertisement

ಹಲವೆಡೆಗಳಲ್ಲಿ ಮನೆ ಮನೆ ಪ್ರಚಾರ ಸಂಪೂರ್ಣವಾಗಿ ಆರಂಭವಾಗದಿದ್ದರೂ ಮತದಾರರ ಬಾಯಲ್ಲಿ ಚುನಾವಣೆಯ ಸಂಗತಿ ಹರಿದಾಡುತ್ತಿದೆ. ಕೆಲವರು ಪಕ್ಷವಾಗಿ, ಇನ್ನೂ ಕೆಲವರು ಪಕ್ಷಾತೀತವಾಗಿ ತಮ್ಮ ನೆಚ್ಚಿನ ಸ್ಪರ್ಧಿಗಳ ಬೆಂಬಲಕ್ಕೆ ಸಜ್ಜಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಬೇಡಿಕೆಯ ಬಗ್ಗೆ ಕೆಲವು ಮಂದಿ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದ್ದಾರೆ. ಚುನಾವಣೆ ಬಳಿಕವಾದರೂ ಈಡೇರಿಸುವ ಭರವಸೆ ಅಭ್ಯರ್ಥಿಗಳಿಂದ, ಪಕ್ಷ ಗಳಿಂದ ಸಿಗಬಹುದೇ ಎಂಬ ಕುತೂಹಲ ದಲ್ಲಿದ್ದಾರೆ.

ಬೀಚ್‌, ನದಿ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರು ತಿಸಿಕೊಂಡ ಪ್ರಮುಖ ಕ್ಷೇತ್ರಗಳ ಪೈಕಿ ಮಂಗಳೂರು ನಗರ ಉತ್ತರ ಕ್ಷೇತ್ರವೂ ಒಂದು. ಒಂದೆಡೆ ನಗರ ಪ್ರದೇಶ ಮತ್ತೂಂದೆಡೆ ಗ್ರಾಮೀಣ ಪ್ರದೇಶದ ಮಿಶ್ರಣ. ಹಾಗಾಗಿಯೋ ಏನೋ? ಇನ್ನೂ ಇಲ್ಲಿಯ ಮತದಾರರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಬಂದಂತಿಲ್ಲ. ಅಂಗಡಿ, ಹೋಟೆಲ್‌, ಬೀಚ್‌ ಬದಿ ಕುಳಿತವರು ಆ ಪಕ್ಷ, ಈ ಪಕ್ಷ ಎಂದೆಲ್ಲ ಸಣ್ಣ ದನಿಯಲ್ಲಿ ಚರ್ಚಿಸುವುದು ಬಿಟ್ಟರೆ ಬೇರೆ ದೊಡ್ಡ ಮಟ್ಟಿನ ಗೌಜಿ ಕಾಣುತ್ತಿಲ್ಲ.

ಚುನಾವಣೆಯ ಪೂರ್ವಭಾವಿಯಾಗಿ ಈ ಕ್ಷೇತ್ರದಲ್ಲಿ ಉದಯವಾಣಿ ತಂಡ ಒಮ್ಮೆ ಸಂಚರಿಸುತ್ತಾ ಹೋದದ್ದು ಕೂಳೂರು ಜಂಕ್ಷನ್‌ಗೆ. ಅಲ್ಲೇ ರಿಕ್ಷಾ ನಿಲ್ದಾಣದಲ್ಲಿ ನಿಂತಿದ್ದ ರಮೇಶ್‌ ಸಪಲ್ಯ ಅವರ ಪ್ರಕಾರ ಬಿಜೆಪಿ ಗೆಲ್ಲುತ್ತ ದಂತೆ. ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಜನಪರ ಯೋಜನೆಗಳು ನಮ್ಮನ್ನು ತಲುಪಿವೆ. ದೇಶ ಸುಭಧ್ರವಾಗಿರಬೇಕಾದರೆ ಮತ್ತೆ ಮೋದಿ ಪ್ರಧಾನಿ ಯಾಗಬೇಕು ಎನ್ನುತ್ತಾರೆ ಅವರು. ಆದರೆ, ಇದೇ ಅಭಿಪ್ರಾಯ ತಣ್ಣೀರುಬಾವಿ ಜಂಕ್ಷನ್‌ನಲ್ಲಿ ಬಸ್‌ಗೆ ಕಾಯುತ್ತಿದ್ದ ರಮೀಝ್ ಅವರಲ್ಲಿ ಇಲ್ಲ. ಅವರ ಪ್ರಕಾರ ಕಾಂಗ್ರೆಸ್‌ನ ಗ್ಯಾರಂಟಿಗಳು ರಾಜ್ಯದಂತೆ ಕೇಂದ್ರದಲ್ಲೂ ಕೆಲಸ ಮಾಡುತ್ತದೆ. ಜನ ಹೊಸತನ್ನು ಬಯಸುತ್ತಾರೆ, ಈ ಬಾರಿ ಕೇಂದ್ರದಲ್ಲಿ ಸರಕಾರ ಬದಲಾವಣೆಯಾಗಲಿದೆ ಎನ್ನುತ್ತಾರೆ.

ಒಂತೆ ದಿನ ಪೋವಡ್‌ !
ಪಣಂಬೂರು, ಬೈಕಂಪಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚುನಾವಣೆಯ ಗೌಜಿ, ಅಬ್ಬರ ಇನ್ನೂ ಅರಂಭವಾದಂತಿಲ್ಲ. “ಒಂತೆ ದಿನ ಪೋವಡ್‌’ ಎನ್ನುತ್ತಾರೆ ಬಹುಮಂದಿ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ ರಾಧಾ ಅವರ ಪ್ರಕಾರ ಪ್ರಚಾರಕ್ಕೆಯಾರೂ ಬಂದಿಲ್ಲ. ವಿಧಾನಸಭಾ ಚುನಾವಣೆಯಷ್ಟು ಕ್ರೇಜ್‌ ಈ ಚುನಾವಣೆಗಿಲ್ಲ, ಮತದಾನ ಮಾತ್ರ ತಪ್ಪಿಸುವುದಿಲ್ಲ ಎನ್ನುತ್ತಾರೆ.

Advertisement

ಕೂಳೂರು ಮೇಲ್ಸೇತುವೆ ಬಳಿ ರಸ್ತೆ ಕಾಮಗಾರಿಯಲ್ಲಿ ನಿರತರಾಗಿದ್ದ ಮಹಾರಾಷ್ಟ್ರದ ಸುಮನ್‌ ದೇಸಾಯಿ ಮಾತಿಗಿಳಿದು, “ಇಲ್ಲಿಯ ಚುನಾವಣೆ, ಅಭ್ಯರ್ಥಿಯ ಬಗ್ಗೆ ಗೊತ್ತಿಲ್ಲ … ಆದರೆ, ಊರಿಗೆ ತೆರಳಿ ಖಂಡಿತಾ ಮತಚಲಾಯಿಸುತ್ತೇವೆ ಎಂದರು. ಮುಕ್ಕದ ಗುಣಪಾಲ್‌ ಅವರು ಹೇಳುವಂತೆ ಚುನಾವಣೆಯಲ್ಲಿ ಯಾವ ಪಕ್ಷ ಬಂದರೂ ಪರವಾಗಿಲ್ಲ. ಇಲ್ಲಿನ ಪ್ರಮುಖ ಸಮಸ್ಯೆಗೆ ಪರಿಹಾರ ಹುಡುಕಲು ಆದ್ಯತೆ ನೀಡಬೇಕು. ಆದರೆ, ಬಹು ವರ್ಷದ ಬೇಡಿಕೆಯಾದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಇನ್ನೂ ಈಡೇರಿಲ್ಲ. ಇದೇ ಕ್ಷೇತ್ರದಲ್ಲಿ ಹಲವು ರಾಷ್ಟ್ರೀಯ ಕಂಪೆನಿಗಳಿದ್ದರೂ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿಲ್ಲ. ಯಾವುದೇ ಪಕ್ಷದವರು ಆಯ್ಕೆಯಾದರೂ, ಈ ವಿಷಯಕ್ಕೆ ಗಮನ ನೀಡಬೇಕು ಎನ್ನುತ್ತಾರೆ ಅವರು. ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದ್ದು, ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಿದೆ ಎಂಬುದು ವಿದ್ಯಾರ್ಥಿ ಶಿಶಿರ್‌ ಅವರ ಮಾತು.

ನೀರು ಕಾಣುತ್ತದೆ .. ಕುಡಿಯಲು ಆಗಲ್ಲ !
“ತಡಂಬೈಲ್‌ನಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ಸೇಸಪ್ಪ ಅವರನ್ನು ಮಾತನಾಡಿಸಿದಾಗ “ಪಣಂಬೂರು, ತಣ್ಣೀರುಬಾವಿ, ಸುರತ್ಕಲ್‌ನಲ್ಲಿ ಬೀಚ್‌, ನದಿಗಳಲ್ಲಿ ನೀರಿದ್ದರೂ ಸಮರ್ಪಕ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಮ್ಮದು. ಸ್ಥಳೀಯಾಡಳಿತದಿಂದಲೂ ಸಮರ್ಪಕ ನೀರು ಸಿಗುತ್ತಿಲ್ಲ. ಕೊಳವೆಬಾವಿ, ಬಾವಿ ಇಲ್ಲದ ನಮ್ಮಂತವರ ಪರಿಸ್ಥಿತಿ ಏನು? ಮತ ಯಾಚನೆಗೆ ಇನ್ನೂ ಅಭ್ಯರ್ಥಿಗಳು ಬಂದಿಲ್ಲ. ಅವರು ಬಂದಾಗಲೂ ಇದೇ ಪ್ರಶ್ನೆ ಅವರಲ್ಲೂ ಕೇಳುತ್ತೇನೆ ಎಂದು ಸ್ಪಷ್ಟವಾಗಿ ನುಡಿಯುತ್ತಾರೆ ಅವರು.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next