ಬೆಂಗಳೂರು: ಚುನಾವಣಾ ಪ್ರಚಾರದ ಹಾಡುಗಳು ಹಾಗೂ ರೇಡಿಯೊ ಜಿಂಗಲ್‌ಗಳನ್ನು ಬಿಜೆಪಿ ಮಂಗಳವಾರ ಬಿಡುಗಡೆಗೊಳಿಸಿತು.
ಮತದಾರರನ್ನು ಸೆಳೆಯುವ ಐದು ಹಾಡುಗಳು ಮತ್ತು ಮೂರು ರೇಡಿಯೊ ಜಿಂಗಲ್‌ಗಳನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹಾಗೂ ಸಂಸದೆ ಮತ್ತು ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕಿ ಶೋಭಾ ಕರಂದ್ಲಾಜೆ ಬಿಡುಗಡೆ ಮಾಡಿದರು.
“ಒಡೆದು ಆಳುವ ಸರಕಾರಕ್ಕೆ ವಿದಾಯ ಹೇಳಿ…’, “ಮೋದಿ ಹಾದಿಗೆ ಮೋದಿಯೇ ಸರಿಸಾಟಿ…’, “ನವಕರುನಾಡಿನ ತಾವರೆ ತೇರಿನ ಹೆಮ್ಮೆಯ ಸಾರಥಿ….’ ಎಂಬ ಹಾಡುಗಳ ಸಹಿತ ಹಲವು ಹಾಡುಗಳು ಗಮನ ಸೆಳೆಯುತ್ತವೆ. ಹಾಡುಗಳ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ, ಯಡಿಯೂರಪ್ಪ ಮಂಡಿಸಿದ್ದ ಪ್ರತ್ಯೇಕ ಕೃಷಿ ಬಜೆಟ್, ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದು, ಅಮಿತ್ ಶಾ ಮತ್ತು ಯಡಿಯೂರಪ್ಪ ಜೋಡಿಯ ಕುರಿತ ಮೆಚ್ಚುಗೆ ಸಾಲುಗಳು ಬಂದುಹೋಗುತ್ತವೆ.
ಈ ಹಾಡುಗಳು ಮತ್ತು ಜಿಂಗಲ್‌ಗಳು ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಮಾವೇಶಗಳಲ್ಲಿ, ರಾಜ್ಯಾದ್ಯಂತ ಸಂಚರಿಸುವ ಪಕ್ಷದ ಚುನಾವಣಾ ಪ್ರಚಾರದ ವಾಹನಗಳಲ್ಲಿ ಮೊಳಗಲಿವೆ. ಜತೆಗೆ ಎಫ್ಎಂ ರೇಡಿಯೋದಲ್ಲೂ ಪ್ರಸಾರವಾಗಲಿದೆ. ಇಂದು ಮತ್ತೆ 5 ಹಾಡುಗಳ ಬಿಡುಗಡೆ: ಇನ್ನೂ ಐದು ಹಾಡುಗಳನ್ನು ಬುಧವಾರ ಬಿಡುಗಡೆಗೊಳಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪುತ್ತೂರಿನ ಜಗದೀಶ್ ಆಚಾರ್ಯ ರಚಿಸಿ, ಸಂಯೋಜನೆ ಮಾಡಿರುವ ಈ ಹಾಡುಗಳು ಮತ್ತು ಜಿಂಗಲ್‌ಗಳು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹೆಚ್ಚು ಸದ್ದುಮಾಡಿದ್ದ ಸರಗಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆಗಳು ಸಹಿತ ಹಲವು ವೈಫಲ್ಯಗಳು ಮತ್ತು ಬಿಜೆಪಿ ಅಧಿಕಾರಾವಧಿಯಲ್ಲಿನ ಸಾಧನೆಗಳನ್ನು ಬಿಂಬಿಸುತ್ತವೆ.