ಹುಬ್ಬಳ್ಳಿ: ಹಿರಿಯರು ಮನೆಯ ನಂದಾದೀಪವಿದ್ದ ಹಾಗೆ. ಅವರನ್ನು ಕಡೆಗಣಿಸಬಾರದು ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. ಇಲ್ಲಿನ ವಿದ್ಯಾನಗರ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ಮನೆಗೆ ಭಾರವಲ್ಲ. ನಮಗೆ ಮಾರ್ಗದರ್ಶಿಗಳಾಗಿದ್ದು, ಹಿರಿಯರು ಮನೆಯಲ್ಲಿ ಇದ್ದರೆ ನಮಗೆ ಭದ್ರತಾ ಭಾವನೆ ಇರುತ್ತದೆ. ಹೆಚ್ಚುತ್ತಿರುವ ವೃದ್ಧಾಶ್ರಮಗಳ ಸಂಖ್ಯೆ ಇಳಿಮುಖವಾದಾಗ ಮಾತ್ರ ಸಮಾಜ ಹಾಗೂ ಕುಟುಂಬ ವ್ಯವಸ್ಥೆ ಬಲಗೊಂಡಂತೆ. ಮಕ್ಕಳು, ಮೊಮಕ್ಕಳು ಸೇರಿ ಹಿರಿಯರ ದಿನ ಆಚರಿಸುವಂತಾಗಬೇಕು ಎಂದರು.
ಏಷ್ಯಾ ಅಥ್ಲೆಟಿಕ್ ಅಸೋಸಿಯೇಶನ್ ನಡೆಸುವ ಹಿರಿಯರ ಕ್ರೀಡಾಕೂಟಗಳಲ್ಲಿ ರಾಷ್ಟ್ರಮಟ್ಟದಲ್ಲಿ ಯೋಗಾಸನ, 10 ಮತ್ತು 5 ಕಿಮೀ ಓಟ ಹಾಗೂ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ 70 ವರ್ಷದ ಧಾರವಾಡ ತಾಲೂಕ ಮರೇವಾಡ ಗ್ರಾಮದ ಶಿವಪ್ಪ ಸಲಕಿ ಹಾಗೂ 101 ವರ್ಷದ ಕಲಘಟಗಿ ತಾಲೂಕು ಗಂಜೀಘಟ್ಟಿ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಜನಪದ ಗಾಯಕ ರಾಮಣ್ಣ ಸಿ. ಕುಸುಗಲ್ ಅವರನ್ನು ಸನ್ಮಾನಿಸಲಾಯಿತು.
ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆ ವಿಜೇತ ಹಿರಿಯರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅಮರನಾಥ ಕೆ.ಎಂ. ಉಪನ್ಯಾಸ ನೀಡಿದರು.
ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಹಿರಿಯ ನಾಗರಿಕರ ಸಮಿತಿ ಸದಸ್ಯರಾದ ಎ.ಬಿ. ಪಾಟೀಲ, ಎ.ಕೆ. ಲಕ್ಕುಂಡಿ, ಎಸ್.ಬಿ. ಗಾಮನಗಟ್ಟಿ, ಲೀಲಾ ಹಿರೇಮಠ, ಪಿ.ಬಿ. ಹಿರೇಮಠ, ನವಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಂ.ಎಚ್. ಮಮ್ಮಿಗಟ್ಟಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೆಶಕ ಬಿ.ಎಸ್. ಕಲಾದಗಿ ಇತರರಿದ್ದರು.