Advertisement

ದೇಶಕ್ಕೆ ಹಿರಿಯರ ಕೊಡುಗೆ ಅಪಾರ

11:40 AM Jun 23, 2018 | Team Udayavani |

ಚಿಕ್ಕಮಗಳೂರು: ದೇಶದ ಅಭಿವೃದ್ಧಿಗೆ ಹಿರಿಯ ನಾಗರಿಕರ ಪ್ರಾಮಾಣಿಕ ಸೇವೆ ಹಾಗೂ ಶ್ರಮ ಅಪಾರ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ ಹೇಳಿದರು.

Advertisement

ನಗರದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಎಸ್‌ಪಿಐಡಿ ಸಂಸ್ಥೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಮಿತಿ ಅಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಮತ್ತು ವಿಶ್ವ ಹಿರಿಯ ನಾಗರಿಕರ ಶೋಷಣಾ ಜಾಗೃತಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಉಚಿತ ದಂತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರ ಪ್ರಾಮಾಣಿಕ ಸೇವೆ ಹಾಗೂ ಶ್ರಮದಿಂದ ನಮ್ಮ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ. ಹಿರಿಯ ನಾಗರಿಕ ಸೇವಾ ಅನುಭವಗಳನ್ನು ನಾವು ಸದುಪಯೋಗ ಪಡೆದುಕೊಳ್ಳುವುದು ಒಳ್ಳೆಯದು ಎಂದರು.

ಕಾನೂನಿನ ಅರಿವು ಮೂಡಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. 2015ರ ಅಂದಾಜಿನ ಪ್ರಕಾರ ವಿಶ್ವದಲ್ಲಿ 98 ಕೋಟಿ ಹಿರಿಯರಿದ್ದು, ಇವರು ದೈಹಿಕ, ಮಾನಸಿಕ ಶೋಷಣೆಯಿಂದ ಬಳಲುತ್ತಿದ್ದಾರೆ. ಹಿರಿಯರಿಗೆ ತೊಂದರೆಯಾದಲ್ಲಿ ಕಾನೂನಿನ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ಡಾ| ಕೆ. ಸುಂದರಗೌಡ ಮಾತನಾಡಿ, ಹಿರಿಯ ನಾಗರಿಕರು ದೇಶದ ನಿಜವಾದ ಸಂಪತ್ತು. ಹಿರಿಯರು ಮಾನವೀಯ ಮೌಲ್ಯಗಳನ್ನು ಕಿರಿಯರು ಬೆಳೆಸಿಕೊಳ್ಳಬೇಕು. ಕಿರಿಯರ ಕೆಟ್ಟ ಅಭ್ಯಾಸಗಳಿಂದ ಸಮಾಜದಲ್ಲಿ ಇಂದು ಹಿರಿಯರು ದೂರ ಹೋಗುತ್ತಿದ್ದಾರೆ ಎಂದರು. ವ್ಯಕ್ತಿ ಯಾವಾಗ ಆರೋಗ್ಯವಾಗಿರುವುದಿಲ್ಲವೊ ಅವರು ಬೇರೆಯವರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.

Advertisement

ಆದ್ದರಿಂದ ಎಲ್ಲರೂ ಆರೋಗ್ಯವಂತರಾಗಿ ಜೀವಿಸಬೇಕು. ಕಿರಿಯರು ಮಾಡುವ ತಪ್ಪನ್ನು ತಟಸ್ಥತನದಿಂದ ಹಿರಿಯರು
ನೋಡುತ್ತಿರುವುದರಿಂದ ಅವರ ತಪ್ಪನ್ನು ಮರೆಮಾಚಲಾಗುತ್ತಿದೆ. ಕಿರಿಯರ ತಪ್ಪನ್ನು ಹಿರಿಯರು ತಿದ್ದುವ ಮೂಲಕ ಸಮಾಜದಲ್ಲಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಗ್ರಾಹಕರ ವೇದಿಕೆಯ ರುದ್ರಪ್ಪ ಮಾತನಾಡಿ, ಹೆತ್ತ ಮಕ್ಕಳು ತನ್ನ ತಂದೆ ತಾಯಿ ಸೇವೆ ಮಾಡದೆ ನಿರ್ಲಕ್ಷ್ಯವಹಿಸಿ ಅವರನ್ನು ನಿರ್ಗತಿಕರನ್ನಾಗಿ ಮಾಡಿ ಆರೈಕೆ ಕೇಂದ್ರಗಳಲ್ಲಿ ಬಿಡಲಾಗುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮುಂದೆ ಬಂದು ಹಿರಿಯರಿಗೆ ನ್ಯಾಯ ಒದಗಿಸಲು ಮುಂದಾಗಬೇಕಾಗಿದೆ. ಹಿರಿಯ ನಾಗರಿಕರಿಗೆ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 

ಪಾಲನೆ ಪೋಷಣಾ ಕಾಯ್ದೆ ಸದಸ್ಯ ಎಚ್‌.ಎನ್‌. ಗಂಗಾಧರ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿಗಳಾಗಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್‌.ಎಸ್‌. ವೆಂಕಟೇಶ್‌, ಪತಾಂಜಲಿ ಯೋಗ ಶಿಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ಕೆ.ಪಿ. ಗೌತಮ್‌ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕ ಶಾಮಲಾಬಾಯಿ ಪ್ರಾರ್ಥಿಸಿದರು. ನೋಡಲ್‌ ಅಧಿಕಾರಿ ಆಶಾ ಸ್ವಾಗತಿಸಿದರು. ಮೈತ್ರಿ ನಿರೂಪಿಸಿದರು. ಶೈಲಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next