ಬದುಕಿನ ಪಯಣದಲ್ಲಿ ನಮ್ಮವರಿಂದಲೇ ತುಂಬಾ ನೋವಾದಾಗ, ನಮ್ಮ ಭಾವನೆಗಳಿಗೆ ಬೆಲೆ ಸಿಗದೆ ಇದ್ದಾಗ, ನಾವು ಅತೀ ಹೆಚ್ಚು ಪ್ರೀತಿಸುವವರಿಂದಲೇ ನಮ್ಮ ಭಾವನೆಗಳಿಗೆ ಧಕ್ಕೆ ಆದಾಗ ಮನಸ್ಸಿನ ಮೂಲೆಯಲ್ಲಿ ಒಂದು ಮಾತು ಬರುತ್ತದೆ. “ಬಹುಶಃ ನಾನು ಸತ್ತರೆ ಎಲ್ಲ ಸರಿ ಹೋಗುತ್ತದೆ’. ಈ ಮಾತು ಸಹಜವಾದರೂ ಒಂದು ಮಾತು ಮತ್ತೆ ನಿಮ್ಮ ಮನಸ್ಸನ್ನು ಪ್ರಶ್ನಿಸಿ. “ನಾನು ಸತ್ತ ಮೇಲೆ ಎಲ್ಲ ಸರಿಹೋಗಿ ಏನು ಪ್ರಯೋಜನ? ನೋಡಲು ನಾನೇ ಇಲ್ಲ ಎಂದ ಮೇಲೆ’ಭೂಮಿಯಲ್ಲಿ ಜನಿಸಿದ ಮೇಲೆ ಸಾವು ನಿಶ್ಚಿತ. ಅದನ್ನು ನಾವೇ ನಿರ್ಧರಿಸಬಾರದು. ಬದುಕು ಎನ್ನುವುದು ನಮಗೆ ಸಾಧಿಸಲು ಸಿಗುವ ಅವಕಾಶ. ಏಕೆಂದರೆ “ನಾವು ಏನೇ ಸಾಧನೆ ಮಾಡಬೇಕಾದರೂ ಉಸಿರು ಇರುವ ತನಕ ಮಾತ್ರ ಸಾಧ್ಯ. ಸತ್ತ ಮೇಲೆ ಒಂದಿಂಚು ಜರುಗಲು ನಾಲ್ಕು ಜನರ ಆವಶ್ಯಕತೆ ಇದೆ’
ನಮಗೆ ಒಂದು ಸಂಬಂಧದಲ್ಲಿ ಪದೇ ಪದೇ ನೋವಾದಾಗ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲ ಅಂದಾಗ ಆ ಸಂಬಂಧದ ಭಾರವನ್ನು ಹೊರುವುದರಲ್ಲಿ ಯಾವುದೇ ಅರ್ಥವಿಲ್ಲ. ಅದರಿಂದ ದೂರವಿರುವುದೇ ಉತ್ತಮ. ಒಂದು ವೇಳೆ ನಿಮಗೆ ಸಂಬಂಧಗಳ ಸಂತೆಯಲ್ಲಿ ಬೇಜಾರಾದಾಗ, ನಿರುತ್ಸಾಹಿಗಳಾದಾಗ ನಿಮ್ಮ ಮನಸ್ಸನ್ನು ಸಾಧನೆಗಳತ್ತ ಹೊರಳಿಸಿ. ಹೊಸತನವನ್ನು ಆಲೋಚಿಸುವತ್ತ ಗುರಿ ಮಾಡಿ. ಆಗ ನಿಮ್ಮ ಮನಸ್ಸಿಗೆ ಸ್ವಲ್ಪ ಆನಂದವಾಗಬಹುದು. ಕಾರಣ ಇಲ್ಲಿ ಸೋತರೆ ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು ಹೊರತು ಬೇರೆಯವರ ಬಗ್ಗೆ ಚಿಂತಿಸುವ ಆವಶ್ಯಕತೆ ಇರುವುದಿಲ್ಲ.
ಒಂದು ವೇಳೆ ನೀವು ಸಾಧನೆಯ ಹಾದಿಯಲ್ಲಿ ಹೊರಟವರಾಗಿದ್ದರೆ, ನೀವು ನಿಮ್ಮ ಸೋಲುಗಳ ಕಾರಣಗಳನ್ನು ಪ್ರಶ್ನಿಸಿ ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ಪ್ರಶ್ನಿಸಲು ಜಗತ್ತಿನಲ್ಲಿ ತುಂಬಾ ಜನರು ಇರುತ್ತಾರೆ. ಅವರ ಮಾತಿಗೆ ಕಿವಿಕೊಡದೆ ಇರುವುದೇ ಉತ್ತಮ. ಇಂದು ಪ್ರಶ್ನಿಸುವವರು ಮುಂದೊಂದು ದಿನ ಹೊಗಳುತ್ತಾರೆ. ಏಕೆಂದರೆ ಎಲುಬಿಲ್ಲದ ನಾಲಗೆ ಎತ್ತ ಬೇಕಾದರೂ ಹೊರಳುತ್ತದೆ. ನೀವು ಸಾಧನೆ ಮಾಡುವಾಗ ಇನ್ನೊಬ್ಬ ಸಾಧಕನ ಸಾಧನೆಯನ್ನು ಅನುಕರಣೆ ಮಾಡಬೇಡಿ. ಅವರ ಜೀವನಶೈಲಿಗೂ ನಿಮ್ಮ ಜೀವನಶೈಲಿಗೂ ತುಂಬಾ ವ್ಯತ್ಯಾಸಗಳಿರುತ್ತದೆ.
ಬೇರೆಯವರ ಸೋಲುಗಳನ್ನು ತಿಳಿದುಕೊಳ್ಳಿ. ಆ ಸೋಲುಗಳಿಂದ ಒಂದು ಪಾಠ ಸಿಗುತ್ತದೆ. ನಿಮ್ಮ ಗುರಿಯನ್ನು ನೀವು ತಲುಪಿದ ಮೇಲೆ ಜಾಗರೂಕರಾಗಿ. ಈಗ ಸಾಯಬೇಕಿದೆ ಅದೇ ನಾನು, ನನ್ನಿಂದಲೇ ಎನ್ನುವ ಅಹಂ. ಇದು ಒಂದು ಸಲ ಮನಸ್ಸಿಗೆ ಹೊಕ್ಕಿತೆಂದರೆ ನೀವು ಏನೇ ಸಾಧನೆ ಮಾಡಿದರೂ ಅದು ಶೂನ್ಯ. ಸಾಧಿಸಿದ ಮೇಲೂ ಕಲಿಯುವುದು ತುಂಬಾ ಇದೆ. ನೀವು ಜೀವನದಲ್ಲಿ ಕಲಿತ ಪಾಠವನ್ನು ನಿಮ್ಮ ಕಿರಿಯರಿಗೂ ಹೇಳಿ ಕೊಡಿ. ಆಗ ನಿಮ್ಮ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಆದ್ದರಿಂದ ಸಾಯಬೇಕಾಗಿ ರುವುದು “ನಾನು ಎಂಬ ಮಾಂಸಖಂಡಗಳಿಂದ ಕೂಡಿದ ಶರೀರವಲ್ಲ.. ನಾನು ನನ್ನಿಂದಲೇ ಎಂಬ ಅಹಂ’
-ಮೋಹನ್ ಕೋಟ್ಯಾನ್ ಪಡ್ಕಂದಡ್ಕ