ಮುದ್ದೇಬಿಹಾಳ: ತಾಲೂಕಿನ ಗೋನಾಳ ಎಸ್ ಎಚ್ ಗ್ರಾಮ ವ್ಯಾಪ್ತಿಯ ಮಾಲ್ಕಿ ಜಮೀನಿನ ಒಡ್ಡು ಒಡೆದು ಊರಿನ ಕೊಳಚೆ ನೀರನ್ನು ಹರಿಬಿಟ್ಟು ತೊಂದರೆ ಕೊಡುತ್ತಿರುವ, ಪ್ರಶ್ನಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿರುವ ಪ್ರಕರಣಕ್ಕೆ ಸಂಬಂಧಿ ಸಿದಂತೆ ತಹಶೀಲ್ದಾರ್ ಬಿ.ಎಸ್. ಕಡಕಭಾವಿ, ತಾಪಂ ಪ್ರಭಾರ ಇಒ ವೀರೇಶ ಹಿರೇಮಠ ಅವರು ಕಂದಾಯ, ಗ್ರಾಪಂ ಸಿಬ್ಬಂದಿ ತಂಡದೊಂದಿಗೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ರಸ್ತೆ, ಕಾಲುದಾರಿ, ಮಾಲ್ಕಿ ಜಮೀನು ಮತ್ತು ಕೊಳಚೆ ನೀರು ಹೋಗುವ ಸ್ಥಳ ಮುಂತಾದವುಗಳನ್ನು ಗ್ರಾಮಸ್ಥರು ಮತ್ತು ಜಮೀನುಗಳ ರೈತರ ಜೊತೆ ಸೇರಿ ಜಂಟಿಯಾಗಿ ಪರಿಶೀಲಿಸಿದ ಅವರು, ಎರಡೂ ಕಡೆಯವರನ್ನು ಮಾತನಾಡಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರು.
ಮಾಲ್ಕಿ ಜಮೀನು ಮತ್ತು ಕೊಳಚೆ ನೀರಿನ ಹರಿವಿನ ಕುರಿತು ಸಂಬಂ ಧಿಸಿದ ಕಂದಾಯ ಮತ್ತು ಗ್ರಾಪಂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡ ಅಧಿ ಕಾರಿಗಳು ಬಹಳ ಹೊತ್ತು ಚರ್ಚೆ ನಡೆಸಿ ಅಂತಿಮ ತೀರ್ಮಾನವೊಂದಕ್ಕೆ ಬಂದರು. ಮಾಲ್ಕಿ ಜಮೀನಿನಲ್ಲಿ ಕೊಳಚೆ ನೀರು ಹೋಗುವುದರಿಂದ ಆಗುವ ಸಮಸ್ಯೆಯನ್ನು ಮನದಟ್ಟು ಮಾಡಿಕೊಂಡು ಕೊಳಚೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿ ಹಳ್ಳಕ್ಕೆ ಜೋಡಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಗ್ರಾಮಸ್ಥರು, ಜಮೀನುಗಳ ಮಾಲಿಕರು ಒಪ್ಪಿಗೆ ಸೂಚಿಸಿ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಮೀನು ಮಾಲಿಕರು ಮಾತನಾಡಿ, ಮೊದಲಿನಿಂದಲೂ ಊರಿನ ಸಮಸ್ತ ಕೊಳಚೆ ನೀರು ನಮ್ಮ ಜಮೀನುಗಳಲ್ಲಿ ಹರಿಯುವದಿಲ್ಲ. ಜನರ ಓಡಾಟಕ್ಕಿರುವ ಕಾಲುದಾರಿ ಬಳಸಲು, ಚಕ್ಕಡಿ ಒಯ್ದು ವ್ಯವಸಾಯ ಮಾಡಲು ನಾವ್ಯಾರು ತೊಂದರೆ ಕೊಟ್ಟಿಲ್ಲ. ಮಳೆ ನೀರು ಬಂದರೂ ತಕರಾರು ಮಾಡಿಲ್ಲ. ಈಗ ಊರಿನ ಕೊಳಚೆ ನೀರು ನಮ್ಮ ಹೊಲದಲ್ಲಿ ನಿಂತರೆ ಜಮೀನು ಹಾಳಾಗಿ ವ್ಯವಸಾಯಕ್ಕೆ ತೊಂದರೆ ಆಗುತ್ತದೆ. ಚರಂಡಿ ನಿರ್ಮಿಸಿ ಹಳ್ಳಕ್ಕೆ ಕೊಳಚೆ ನೀರು ಹರಿದು ಹೋಗುವಂತೆ ಮಾಡಿದರೆ ಅದಕ್ಕೆ ನಮ್ಮ ಸಹಮತ ಇದೆ ಎಂದು ಅಧಿ ಕಾರಿಗಳ ಪ್ರಯತ್ನಕ್ಕೆ ಒಪ್ಪಿಗೆ ಸೂಚಿಸಿದರು.
ಕಂದಾಯ ನಿರೀಕ್ಷಕ ಮಾಗಿ, ಗ್ರಾಮ ಲೆಕ್ಕಾ ಧಿಕಾರಿಗಳು, ಗ್ರಾಪಂ ಸಿಬ್ಬಂದಿ, ಬಾ ಧಿತ ಜಮೀನುಗಳ ನೊಂದ ರೈತರು, ಗ್ರಾಮಸ್ಥರು ಇದ್ದರು.