Advertisement
ನಮ್ಮ ರಾಜ್ಯದಲ್ಲಿ ಹೆಚ್ಚಿನವರು ಎಂಜಿನಿಯರ್‌ಗಳಾಗಲು ಬಯಸುವವರೇ. ಹಾಗಾಗಿ ಪಿಯುಸಿಯಲ್ಲಿ ಕಷ್ಟಪಟ್ಟು ಓದಿ ಬರೆದು ಒಳ್ಳೆಯ ಇಂಜಿನಿಯರಿಂಗ್ ಕಾಲೇಜು ಸಿಗಲೆಂದು ಹರಸಾಹಸ ಪಡುತ್ತಾರೆ. ಹೆತ್ತವರನ್ನು ಸೇರಿಸಿ ಇದೊಂದು ಪ್ರಶರ್ ಕುಕ್ಕರ್ ಸ್ಥಿತಿ. ಹಾಗೂ ಹೀಗೂ ಇಂಜಿನಿಯರಿಂಗ್ ಕಾಲೇಜ್‌ಗೆ ಸೇರಿದ್ದಾಯಿತು. ಆದರೆ ಮುಂದೇನು? ಹೆಚ್ಚಿನ ಹೆತ್ತವರ ಪ್ರಕಾರ ಮಗ/ಮಗಳು ಎಂಜಿನಿಯರಿಂಗ್ ಕಾಲೇಜ್‌ಗೆ ಸೇರಿದರೆಂದರೆ ಎಂಜಿನಿಯರ್ ಆದಂತೆಯೇ.ಆದರೆ ಸತ್ಯ ಬೇರೆಯೇ ಇದೆ. ನಮ್ಮ ದೇಶದಲ್ಲಿ ಎಂಜಿನಿಯರಿಂಗ್ ಅಂದರೆ ಅದು ಪಿಯುಸಿಯ ವಿಸ್ತೃತ ಭಾಗ ಅಷ್ಟೇ(ಕೆಲವೇ ಸಂಸ್ಥೆಗಳನ್ನು ಹೊರತು ಪಡಿಸಿ). ಒಂದಷ್ಟು ಪಠ್ಯಕ್ರಮ, ವಿಷಯಗಳು. ಏಕತಾನತೆಯಿಂದ ಕೂಡಿದ ಪ್ರಯೋಗ ಶಾಲೆ; ಪ್ರಯೋಗಗಳು, ಅದೇ ರೀತಿಯ ಪಾಠ ಕ್ರಮ, ಲ್ಯಾಬ್ ಪರೀಕ್ಷೆ ಎಲ್ಲವೂ. ಆಂತರಿಕ ಪರೀಕ್ಷೆ (internal exam)ಗಾಗಿ ಓದು. ಕೊನೆಗೆ ಅಂತಿಮ ಪರೀಕ್ಷೆ ಪಾಸಾಗುವುದಕ್ಕಾಗಿ ಸರ್ಕಸ್. ನಾಲ್ಕು ವರ್ಷ ಮುಗಿಯಿತು. ಕೊನೆಗೆ ಎಲ್ಲಿಂದಲೋ ತಂದ ಪ್ರಾಜೆಕ್ಟ್: ಪ್ರಾಜೆಕ್ಟ್ ವರದಿ. ಯಾವ ಹಂತದಲ್ಲಿಯೂ ವಿದ್ಯಾರ್ಥಿಗಳು ಎಂಜಿನಿಯರ್ ಆಗುವ ಪ್ರಕ್ರಿಯೆ ನಡೆಯದೇನೇ ಬ್ಯಾಚೂಲರ್ ಆಫ್ ಎಂಜಿನಿಯರ್ ಪದವಿ ಕೈ ಸೇರಿರುತ್ತದೆ. ಎಂಜಿನಿಯರ್ ಆಗಿ ರೂಪುಗೊಳ್ಳುವ ಥ್ರಿಲ್ ಪಡೆಯದೇನೇ ಕೋರ್ಸ್ ಮುಗಿದಿರುತ್ತದೆ. ಇನ್ನು ಇವರು ಆವಿಷ್ಕಾರಿಗಳಾಗುವುದು, ಸಂಶೋಧಕರಾಗುವುದು ಸ್ವಂತ ಉದ್ಯಮಿಗಳಾಗುವುದು, ದೂರದ ಮಾತು.
Related Articles
Advertisement
ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳು ತಾವೇ ಮಾಡಿ ತಿಳಿದು ಹೊಸದನ್ನು ಆವಿಷ್ಕರಿಸುವ ಪರಿಸರವನ್ನು ನಿರ್ಮಿಸುತ್ತದೆ. ಈ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ನೈಪುಣ್ಯತೆಗೆ ಬೇಕಾದ ಎಲ್ಲಾ ಅತ್ಯಾಧುನಿಕ ಯಂತ್ರೋಪಕರಣಗಳು ಇರುತ್ತವೆ. ಅವರು ಕಲಿಯುವ ಎಲ್ಲಾ ಸಿದ್ಧಾಂತಗಳನ್ನು ನೇರವಾಗಿ ಪ್ರಯೋಗಿಸಿ ತಿಳಿದು ನಿಜ ಜೀವನಕ್ಕೆ ಅಳವಡಿಸುವ ಅಪೂರ್ವ ಅವಕಾಶ ಇಲ್ಲಿರುತ್ತದೆ. ಹೊಸ ಆವಿಷ್ಕಾರಗಳು ಈ ಲ್ಯಾಬ್‌ಗಳ ಮೂಲಕ ಹೊರ ಬರುವುದಕ್ಕೆ ಖಂಡಿತಾ ಸಾಧ್ಯ. ಹೊಸ ಜ್ಞಾನ, ಆವಿಷ್ಕಾರಗಳು, ಉದ್ಯಮಶೀಲತೆಗೆ ತೆರೆದುಕೊಳ್ಳುತ್ತದೆ. ದೇಶದ ಬಾಲ ಆವಿಷ್ಕಾರಿಗಳು, ಉದ್ಯಮಿಗಳು ಹೊರಬರುವ ಭವಿಷ್ಯದ ಗರಡಿಯಾಗಬಲ್ಲುದು ಈ ಟಿಂಕರಿಂಗ್ ಲ್ಯಾಬ್. ಈ ಲ್ಯಾಬ್‌ನ ಒಂದು ಸಮ್ಯಕ್ ದೃಷ್ಟಿಯೂ ಅದೇನೇ.
ಎಲ್ಲೆಲ್ಲಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಅಂದರೆ 6ನೇ ತರಗತಿಯಿಂದ 10ನೇ ತರಗತಿವರೆಗೆ ಇರುವ ಖಾಸಗಿ ಅಥವಾ ಸರಕಾರಿ ಶಾಲೆಗಳಲ್ಲಿ ಈ ಟಿಂಕರಿಂಗ್ ಲ್ಯಾಬ್ ತೆರೆಯಲು ನೀತಿ ಆಯೋಗ ಹಣಕಾಸಿನ ನೆರವು ನೀಡುತದೆ. ಒಂದು ಶಾಲೆಗೆ ಒಟ್ಟು 20 ಲಕ್ಷ. ಮೊದಲ ವರ್ಷ 10 ಲಕ್ಷ ರೂಪಾಯಿಗಳನ್ನು ಪ್ರಯೋಗ ಪರಿಕರಗಳಿಗಾಗಿ ನೀಡುತ್ತದೆ (Establishment charge). ಉಳಿದ 10 ಲಕ್ಷವನ್ನು ವರ್ಷಕ್ಕೆ 2 ಲಕ್ಷದಂತೆ 5 ವರ್ಷದವರೆಗೆ ಲ್ಯಾಬ್‌ನ ನಿರ್ವಹಣೆಗಾಗಿ ಒದಗಿಸುತ್ತದೆ. ಒಳ್ಳೆಯ ವಿದ್ಯಾರ್ಥಿ ಸಂಖ್ಯೆಯೊಂದಿಗೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಈ ಯೊಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಲ್ಯಾಬ್‌ಗ ಬೇಕಾದ 1500 ಚದರ ಅಡಿ ಕಟ್ಟಡ ಪ್ರದೇಶವನ್ನು ಶಾಲೆಯೇ ಒದಗಿಸುವಂತಿರಬೇಕು. ಗುಡ್ಡಗಾಡು, ಪರ್ವತ ಮತ್ತು ದ್ವೀಪ ಪ್ರದೇಶದ ಶಾಲೆಗಳಿಗೆ 1000 ಚದರ ಅಡಿ ಕಟ್ಟಡ ಪ್ರದೇಶ ಸಾಕಾಗುತ್ತದೆ. ದಾನಿಗಳ, ಹಿರಿಯ ವಿದ್ಯಾರ್ಥಿಗಳ, ಸ್ಥಳೀಯ ಉದ್ಯಮಿಗಳ ಸಹಾಯ ಪಡೆದು ಈ ಲ್ಯಾಬ್‌ಗಳನ್ನು, ವಿದ್ಯಾರ್ಥಿಗಳ ಆವಶ್ಯಕತೆಗಳಿಗನುಗುಣವಾಗಿ ರೂಪಿಸಿ ಉನ್ನತೀಕರಿಸಬೇಕೆಂಬುದು ಆಯೋಗದ ಆಪೇಕ್ಷೆ. //niti.gov.in ವೆಬ್‌ಸೈಟ್‌ನಲ್ಲಿ ಇದರ ಸಮಸ್ತ ಮಾಹಿತಿ ಇದೆ. ಟಿಂಕರಿಂಗ್ ಲ್ಯಾಬ್‌ನ ಸ್ಥಾಪನೆಯ ಜೊತೆಗೆ ಈ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಒಳ್ಳೆಯ ಮಾರ್ಗದರ್ಶಕರ ನೇಮಕವಾಗಬೇಕಿದೆ. ಈ ರೀತಿಯ ಮಾರ್ಗದರ್ಶಕರನ್ನು ಆರಿಸುವಾಗ ಈಗಾಗಲೇ ಇಂಜಿನಿಯರಿಂಗ್ ಮುಗಿಸಿ, ಸಂಶೋಧನೆ, ಆವಿಷ್ಕಾರ, ಕಲಿಸುವಿಕೆಯ ಕಡೆಗೆ ಆಸಕ್ತಿ ಬೆಳೆಸಿಕೊಂಡ ಯುವಕ/ಯುವತಿಯರಿಗೆ ಅವಕಾಶ ನೀಡಬಹುದು. ಇವರನ್ನು ಉತ್ತಮ ವೇತನದೊಂದಿಗೆ innovation engineerಗಳನ್ನಾಗಿ ಎಲ್ಲಾ ಟಿಂಕರಿಂಗ್ ಲ್ಯಾಬ್‌ನಲ್ಲಿ ನೇಮಿಸುವಂತಾಗಬೇಕು. ಇವರಿಗೆ ಆತ್ಯುತ್ತಮ ಮಟ್ಟದ ತರಬೇತಿಯ ಜೊತೆಗೆ, ಸಂಶೋಧನೆಗೂ ಅವಕಾಶವಿರಬೇಕು.
ಎಲ್ಲಾ ಶಾಲೆಗಳಲ್ಲೂ ಟಿಂಕರಿಂಗ್ ಲ್ಯಾಬ್‌ಗಳು ನಿರ್ಮಾಣವಾದರೆ ಅತ್ಯುತ್ತಮ. ನೀತಿ ಆಯೋಗದಿಂದ ಧನ ಸಹಾಯ ಪಡೆಯಲು ಅಶಕ್ತವಾದ ಶಾಲೆಗಳಿಗೆ ರಾಜ್ಯ ಸರಕಾರಗಳು ಹಣಕಾಸಿನ ನೆರವು ನೀಡಬೇಕು. ಇದರ ಜೊತೆಗೆ ಶಾಲೆಗಳ ಮುಖ್ಯೋಪಾಧ್ಯಾಯರುಗಳು, ಅಧ್ಯಾಪಕರು ವಿಶೇಷ ಮುತುವರ್ಜಿ ವಹಿಸಿ, ಊರಿನವರ, ಹಿರಿಯ ವಿದ್ಯಾರ್ಥಿಗಳ, ಸಂಘ ಸಂಸ್ಥೆಗಳ ಸಹಕಾರ ಪಡೆದು, ತಮ್ಮ ಶಾಲೆಗೊಂದು ಟಿಂಕರಿಂಗ್ ಲ್ಯಾಬ್ ನಿರ್ಮಿಸಿಕೊಳ್ಳಬಹುದು. ಒಳ್ಳೆಯ ಉದ್ಯೋಗದಲ್ಲಿರುವ, ಉದ್ಯಮಿಗಳಾಗಿ ಯಶಸ್ವಿಯಾದ ಹಲವರು, ತಾವು ಕಲಿತ ಶಾಲೆಗಳಲ್ಲಿ ಟಿಂಕರಿಂಗ್ ಲ್ಯಾಬ್ ನಿರ್ಮಿಸಲು ಕೊಡುಗೆ ನೀಡಿದರೆ ಅದೊಂದು ಆಭೂತಪೂರ್ವ ಬೆಳವಣಿಗೆ. ಯುವಜನತೆ ಈ ನಿಟ್ಟಿನಲ್ಲಿ ಸಂಪರ್ಕ ಸೇತುವಾಗಿ, ಸಾಂ ಕ ಕೆಲಸ ಮಾಡಿದರೆ ಟಿಂಕರಿಂಗ್ ಲ್ಯಾಬ್, ಎಲ್ಲಾ ಶಾಲೆಗಳಲ್ಲೂ ಟ್ವಿಂಕಲ್ ಆಗಬಹುದು.
ಕೆಲವೇ ವರುಷಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ತುಂಬಾ ಸವಾಲಿನದಾಗುವ ಸಾಧ್ಯತೆಯಿದೆ; ವಿದ್ಯಾರ್ಥಿಗಳಿಗಲ್ಲ; ಎಂಜಿನಿಯರಿಂಗ್ ಕಾಲೇಜ್‌ನ ಪ್ರಾಧ್ಯಾಪಕರುಗಳಿಗೆ. ಟಿಂಕರಿಂಗ್ ಲ್ಯಾಬ್‌ನಲ್ಲಿ ಪಳಗಿದ ವಿದ್ಯಾರ್ಥಿಗಳು ಸ್ಪಷ್ಟ ಮಾಹಿತಿ, ಆಸಕ್ತಿ, ಕೌಶಲದೊದಿಗೆ ಕಾಲೇಜು ಸೇರುತ್ತಾರೆ. ಇವರನ್ನು ಶೈಕ್ಷಣಿಕವಾಗಿ ಎದುರಿಸಲು ಎಲ್ಲರೂ ಅಪ್ಡೆàಟ್ ಆಗಿರಬೇಕು. ಔಟ್ ಆಫ್ ದಿ ಬಾಕ್ಸ್ ಹೋಗಲು ಸಿದ್ದರಿರಬೇಕು. ಮಾತ್ರವಲ್ಲ ತಮ್ಮ ಚರ್ವಿತಚರ್ವಣದಿಂದ ಹೊರಬಂದು ತಮ್ಮನ್ನು ಸಂಶೋಧನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಮುಂದೆ ಅತ್ಯುತ್ತಮ ಚಿಂತಕ, ಸಂಶೋಧಕ ಪ್ರಾಧ್ಯಾಪಕರನ್ನು ವಿದ್ಯಾರ್ಥಿಗಳೇ ರೂಪಿಸುವಂತಾದರೆ ಆಶ್ಚರ್ಯ ಪಡಬೇಕಿಲ್ಲ.
ಪಿಯುಸಿ, ಡಿಗ್ರಿ ಕಾಲೇಜು ಮತ್ತು ಯುನಿವರ್ಸಿಟಿಗಳಲ್ಲಿಯೂ ಅತ್ಯುತ್ತಮ ಟಿಂಕರಿಂಗ್ ಲ್ಯಾಬ್‌ಗಳು ನಿರ್ಮಾಣವಾಗಬೇಕು. ಪಿಯುಸಿಯ ಸಿಇಟಿ ಕೋಚಿಂಗ್‌ನ ಶ್ರಮ ಮತ್ತು ಸಮಯವನ್ನು ವಿದ್ಯಾರ್ಥಿಗಳು ಸಂಶೋಧನೆಗೆ, ಆವಿಷ್ಕಾರಗಳಿಗೆ ಉಪಯೋಗಿಸಿದರೆ ಪರಮಾದ್ಭುತ ಬದಲಾವಣೆಗಳಾಗಬಹುದು. ಮಕ್ಕಳ ಮಾರ್ಕ್ಸ್ನ ಬದಲು ಅವರ ಆವಿಷ್ಕಾರದ ಆಧಾರದಲ್ಲೆ ಅವರಿಗೆ ಎಂಜಿನಿಯರಿಂಗ್ ಕಾಲೇಜ್‌ಗೆ ಸೀಟ್ ಸಿಗುವಂತಾದರೆ ಅದೊಂದು ಚೇತೋಹಾರಿ ಬೆಳವಣಿಗೆ. ನಮ್ಮ ಹೈಸ್ಕೂಲ್, ಪಿಯುಸಿ ವಿದ್ಯಾರ್ಥಿಗಳು ಮಾಡುವ ಪ್ರಾಜೆಕ್ಟ್ಗಳು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ (ಪ್ರಸ್ತುತ) ಪ್ರಾಜೆಕ್ಟ್ಗಳಿಗಿಂತ ಮೇಲ್ಮಟ್ಟದ್ದಾಗಿರುವು ದನ್ನು ಸದ್ಯದಲ್ಲೆ ನೋಡುವವರಿದ್ದೇವೆ. ಅಮೆರಿಕದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ಸಾಫ್ಟ್ವೇರ್ ರಚಿಸಿ ಅವರದೇ ಆದ ಉದ್ಯಮವನ್ನು ಆರಂಭಿಸುತ್ತಾರೆ. ಭವಿಷ್ಯದಲ್ಲಿ ನಮ್ಮ ದೇಶದಲ್ಲಿಯೂ ಈ ರೀತಿಯ ಬೆಳವಣಿಗೆ ತರುವ ಸಾಮರ್ಥ್ಯ ಟಿಂಕರಿಂಗ್ ಲ್ಯಾಬ್‌ಗಿದೆ.
ಈಗಾಗಲೇ ಅಟಲ್ ಟಿಂಕರಿಂಗ್ ಲ್ಯಾಬ್‌ನಿಂದ ಪ್ರೇರಣೆ ಪಡೆದು ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳು ಟಿಂಕರಿಂಗ್ ಲ್ಯಾಬ್‌ಗಳನ್ನು ನಿರ್ಮಿಸುತ್ತಿವೆ. ಈ ಲ್ಯಾಬ್‌ಗಳಲ್ಲಿ ಹೊರಗಿನ ಕಟ್ಟಡಗಳ ತೋರಣಕ್ಕಿಂತ ಒಳಗಿನ ಪ್ರಯೋಗ ಪರಿಕರಗಳ ಹೂರಣಕ್ಕೆ ಜಾಸ್ತಿ ಮಹತ್ವಕೊಡಬೇಕಿದೆ. ಬೇರೆ ಬೇರೆ ಎಂಜಿನಿಯರಿಂಗ್ ಬ್ರಾಂಚ್‌ನ ವಿದ್ಯಾರ್ಥಿಗಳು ಒಂದೆಡೆ ಸೇರಿ ಗ್ರೂಪ್ ಡಿಸ್‌ಕಶ್ಶನ್ innovation engineer ಮಾಡುವ, ಅಂತರ್‌ಕ್ಷೇತ್ರ (group discussion) ಪ್ರಾಜೆಕ್ಟ್ ಮಾಡುವ ವೇದಿಕೆಯಾಗಬೇಕು ಈ ಟಿಂಕರಿಂಗ್ ಲ್ಯಾಬ್. ಮೊಬೈಲ್, ವಾಟ್ಸಪ್, ವಿಡಿಯೋ ಹಾಗು ಇನ್ನಿತರ ಸಾಮಾಜಿಕ ಜಾಲತಾಣಗಳ ಕಡೆಗೆ ಪೋಲಾಗುತ್ತಿರುವ ಯುವಜನತೆಯ ಸಮಯ ಮತ್ತು ಶಕ್ತಿಯನ್ನು ಟಿಂಕರಿಂಗ್ ಲ್ಯಾಬ್‌ನತ್ತ ತಿರುಗಿಸಲು ಒಳ್ಳೆಯ ಅವಕಾಶ. ಇಲ್ಲಿ ನಡೆಯುವ ಪ್ರಯೋಗಗಳು, ಸಂಶೋಧನೆ, ಆವಿಷ್ಕಾರಗಳು ಕಲಿಕೆಯ ದೃಷ್ಟಿಯಿಂದ ಅತ್ಯಂತ ಆಕರ್ಷಣೀಯ ವಾದಲ್ಲಿ ವಿದ್ಯಾರ್ಥಿಗಳಿಗೆ ಇದೊಂದು ರಿಕ್ರಿಯೇಶನ್ ಸೆಂಟರ್ ಆಗಬಹುದು. ಇವರು ಯಾರೋ ಕ್ರಿಯೇಟ್ ಮಾಡಿದ ಗೇಮ್ಸ್‌ನ ಹಿಂದೆ ಬೀಳುವುದನ್ನು ಬಿಟ್ಟು ತಮ್ಮದೇ ಆದ ಗೇಮ್ಸ್‌ನ್ನು ಕ್ರಿಯೇಟ್ ಮಾಡುವತ್ತ ಮನ ಮಾಡಬಹುದು. ಕಲಿಕೆ, ಸಂಶೋಧನೆ, ಆವಿಷ್ಕಾರ ಗಳು ವಿದಾರ್ಥಿಗಳಿಗೆ ಒಂದು ಆಟದಂತಾದರೆ ಟಿಂಕರಿಂಗ್ ಲ್ಯಾಬ್ ಸಾರ್ಥಕ.
ದೂರದ ಊರಿನಲ್ಲಿ ಉದ್ಯೋದದಲ್ಲಿರುವವರು ಊರಿಗೆ ಬಂದಾಗ ತಮ್ಮ ಮಾತೃಸಂಸ್ಥೆಯ ಟಿಂಕರಿಂಗ್ ಲ್ಯಾಬ್‌ಗೂಂದು ಸಲ ಭೇಟಿ ಕೊಡಬಹುದು. ತಮ್ಮ ಅನುಭವ, ಜ್ಞಾನ, ಕೌಶಲವನ್ನು ಅಲ್ಲಿನ ವಿದ್ಯಾರ್ಥಿಗಳಿಗೊಂದಿಗೆ ಹಂಚಿಕೊಳ್ಳಬಹುದು. ವರ್ಷದಲ್ಲಿ ಒಂದು ದಿನವಾದರೂ ದಿನ ಪೂರ್ತಿ ತಾವು ಕಲಿತ ಶಾಲೆಯ ಮಕ್ಕಳೊಂದಿಗೆ ಕಳೆಯಬಹುದು. ಮುಂದೆ ಅದೊಂದು ಅರ್ಥಪೂರ್ಣವಾದ, ಜೀವನದ ಅವಿಸ್ಮರಣಿಯ ದಿನಗಳಾಗುತ್ತವೆ. ನಮ್ಮ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳಿಗೆ ಇದರ ತೀರಾ ಅಗತ್ಯ ಇದೆ. ಈ ಶಾಲೆಗಳ ಅಧ್ಯಾಪಕರುಗಳೂ ಈ ರೀತಿಯ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಡಾ| ರಾಜೇಶ್ ಕುಮಾರ್ ಶೆಟ್ಟಿ