Advertisement

ಗ್ರಾಮೀಣ ಮಕ್ಕಳ ಶೈಕ್ಷಣಿಕ ಸಾಧನೆ ಶ್ಲಾಘನೀಯ

03:56 PM May 10, 2019 | Team Udayavani |

ಹಿರೇಕೆರೂರ: ಗ್ರಾಮೀಣ ಪ್ರದೇಶಗಳ ಮಕ್ಕಳು ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಶೈಕ್ಷಣಿಕ ಸಾಧನೆ ಮಾಡಿರುವುದು ಸಂತಸ ತಂದಿದೆ. ಮಕ್ಕಳು ಉನ್ನತ ಗುರಿಹೊಂದಿ, ಉತ್ತಮ ಶಿಕ್ಷಣ ಪಡೆದು ಸಾಧನೆಗೈದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶೇ.100 ಫಲಿತಾಂಶ ಗಳಿಸಿದ ಶಾಲಾ ಮುಖ್ಯಸ್ಥರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಿದ್ಯೆ ಯಾರ ಸ್ವತ್ತೂ ಅಲ್ಲ. ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿದಾಗ ಸುಲಭವಾಗಿ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ. ಪೋಷಕರ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಿತ್ತಿವೆ. ಶಿಕ್ಷಕರು ಮಕ್ಕಳಿಗೆ ವಿದ್ಯಾದಾನ ಮಾಡಿ ಅವರ ಭವ್ಯ ಭವಿಷ್ಯಕ್ಕೆ ಬುನಾದಿ ಹಾಕುವ ಕಾರ್ಯ ಶ್ಲಾಘನೀಯ ಎಂದರು.

ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುಂದಿನ ಶೈಕ್ಷಣಿಕ ಜೀವನವನ್ನು ರೂಪಿಸಿಕೊಂಡು ಉನ್ನತ ವ್ಯಾಸಂಗ ಮಾಡಬೇಕು. ಪ್ರಸ್ತುತ ಎಲ್ಲ ರಂಗಗಳಲ್ಲಿ ವಿಫುಲ ಅವಕಾಶಗಳಿದ್ದು, ಅವಕಾಶಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಒಲವು ಹೆಚ್ಚಿಸಿಕೊಂಡು, ಸಾಧಿಸುವ ಛಲದೊಂದಿಗೆ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಕೊಡೆಗೆ ನೀಡುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ತಾಲೂಕಿಗೆ ಅತೀ ಹೆಚ್ಚು ಅಂಕ ಗಳಿಸಿದ 14 ವಿದ್ಯಾರ್ಥಿಗಳಿಗೆ ಶಾಸಕರು ವೈಯಕ್ತಿಕವಾಗಿ ತಲಾ 2 ಸಾವಿರ ರೂ. ನಗದು ಪ್ರತಿಭಾ ಪುರಸ್ಕಾರ ನೀಡಿದರು. ಅವರ ಕೌರವ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಉಚಿತ ಪ್ರವೇಶಾತಿ ಕಲ್ಪಿಸುವುದಾಗಿ ತಿಳಿಸಿದರು.

Advertisement

ರಟ್ಟೀಹಳ್ಳಿ ಕುಮಾರೇಶ್ವರ ಬಾಲಕರ ಪ್ರೌಢ ಶಾಲೆಯ ಗೌತಮಿ ದೊಡ್ಮನಿ (ಶೇ.97.76), ರಟ್ಟೀಹಳ್ಳಿ ನೊಬೆಲ್ ಪ್ರೌಢ ಶಾಲೆಯ ಮಲ್ಲಿಕಾರ್ಜುನ ಕರೇಗೌಡ್ರ (ಶೇ.97.44), ಹಿರೇಕೆರೂರಿನ ಸರ್ಕಾರಿ ಉರ್ದು ಪ್ರೌಢ ಶಾಲೆಯ ಜೋಯ್ನಾ ಖಾಜಿ (ಶೇ.96.96), ಕೋಡ ಸರ್ಕಾರಿ ಉರ್ದು ಪ್ರೌಢ ಶಾಲೆಯ ಸಾನಿಯಾ ಬಾಳಿಕಾಯಿ (ಶೇ.96.96), ರಟ್ಟೀಹಳ್ಳಿ ನೊಬೆಲ್ ಪ್ರೌಢ ಶಾಲೆಯ ನಿರಂಜನ ಪಾಟೀಲ (ಶೇ.96.8),ಕೋಡ ಸರ್ಕಾರಿ ಉರ್ದು ಪ್ರೌಢ ಶಾಲೆಯ ಶೀಬಾಬಾನು ನಾಸೂರು (ಶೇ.96.48), ಕೋಡ ಸರ್ಕಾರಿ ಉರ್ದು ಪ್ರೌಢ ಶಾಲೆಯ ನಾಜಿಯಾ ಪರವೀನ್‌ ಶೆರಗಾರ (ಶೇ.95.84), ದೂದೀಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸೌಮ್ಯ ಮರ್ಕಳ್ಳಿ (ಶೇ.95.84), ರಟ್ಟೀಹಳ್ಳಿ ಕುಮಾರೇಶ್ವರ ಬಾಲಕರ ಪ್ರೌಢ ಶಾಲೆಯ ವರ್ಷಾ ಪವಾರ (ಶೇ.95.84), ಕೋಡ ಸರ್ಕಾರಿ ಉರ್ದು ಪ್ರೌಢ ಶಾಲೆಯ ಮುಸ್ಕಾನ್‌ ಬಾನು ವಡೇರಹಳ್ಳಿ (ಶೇ.94.88), ನೂಲಗೇರಿ ಸರ್ಕಾರಿ ಪ್ರೌಢ ಶಾಲೆಯ ಲತಾ ಬಣಕಾರ (ಶೇ.94.78), ಹಿರೇಕೆರೂರಿನ ಡಿಆರ್‌ಟಿ ಆಂಗ್ಲ ಮಧ್ಯಮ ಪ್ರೌಢ ಶಾಲೆಯ ಅಕ್ಷತಾ ಚಂದ್ರಕೇರಿ (ಶೇ.94.78) ಹಾಗೂ ಶಿವರಾಜ ನೇಕಾರ (94.78) ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರಟ್ಟೀಹಳ್ಳಿ ಕುಮಾರೇಶ್ವರ ಪಿಯು ಕಾಲೇಜಿನ ಸಿದ್ದಪ್ಪ ಚೂರೇರ (ಶೇ.97) ಮತ್ತು 100 ಕ್ಕೆ 100 ಫಲಿತಾಂಶ ಪಡೆದ ಯಡಗೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ಹಿರೇಕೆರೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ರಟ್ಟೀಹಳ್ಳಿಯ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಬುರಡೀಕಟ್ಟಿಯ ಸೇಂಟ್ ಮೇರಿಸ್‌ ಪ್ರೌಢ ಶಾಲೆಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ತಳಕಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಸಿದ್ದಲಿಂಗಪ್ಪ, ತಾಪಂ ಸದಸ್ಯ ಬಸವರಾಜ ಭರಮಗೌಡ್ರ, ಪಪಂ ಸದಸ್ಯರಾದ ಅಶೋಕ ಜಾಡಬಂಡಿ, ಅಲ್ತಾಫ್‌ಖಾನ್‌ ಪಠಾಣ್‌, ಗುರುಶಾಂತಪ್ಪ ಯತ್ತಿನಹಳ್ಳಿ, ಕ್ಷೇತ್ರ ಸಮನ್ವಾಧಿಕಾರಿ ಜಗದೀಶ ಬಳಿಗಾರ, ಮೇಘರಾಜ ಮಾಳಗಿಮನಿ ಸೇರಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿ, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಪಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next