Advertisement

ಗುಜರಿ ವ್ಯವಹಾರಕ್ಕೂ ಆರ್ಥಿಕ ಕುಸಿತದ ಬಿಸಿ!

11:10 PM Nov 22, 2019 | mahesh |

ಮಂಗಳೂರು: ಆರ್ಥಿಕ ಕುಸಿತದ ಪರಿಣಾಮ ಗುಜರಿ ಸಾಮಗ್ರಿಗಳ ಮೇಲೂ ಉಂಟಾಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕೈದು ತಿಂಗಳಿನಿಂದ ಎಲ್ಲ ಗುಜರಿ ಸಾಮಗ್ರಿಗಳ ಬೆಲೆ ಅರ್ಧಕ್ಕರ್ಧ ಇಳಿಕೆಯಾಗಿದ್ದು, ವ್ಯಾಪಾರ ಬಹುತೇಕ ನೆಲಕಚ್ಚಿದೆ. ಇದನ್ನು ವೃತ್ತಿಯಾಗಿಸಿಕೊಂಡ ಸುಮಾರು 50 ಸಹಸ್ರ ಜನರ ಬದುಕು ಹೈರಾಣಾಗುವ ಹಂತದಲ್ಲಿದೆ. ಗುಜರಿ ವ್ಯಾಪಾರವು ಸಂಗ್ರಾಹಕರಿಂದ ಹಿಡಿದು ಸಣ್ಣ, ಮಧ್ಯಮ, ದೊಡ್ಡ ವ್ಯಾಪಾರ- ಹೀಗೆ ಹಲವು ಹಂತಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ. ಮಂಗಳೂರಿನಲ್ಲಿ 150ಕ್ಕೂ ಅಧಿಕ ಗುಜರಿ ಅಂಗಡಿಗಳಿವೆ.

Advertisement

ಗುಜರಿ ಎಲ್ಲಿಗೆ ಹೋಗುತ್ತದೆ?
ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಸಂಗ್ರಹವಾಗುವ ಗುಜರಿ ಸಾಮಗ್ರಿಗಳ ಪೈಕಿ ಕಾರ್ಟನ್‌ ಬಾಕ್ಸ್‌ (ರಟ್ಟಿನ ಪೆಟ್ಟಿಗೆ) ಮತ್ತು ಪೇಪರ್‌ ಮಂಗಳೂರಿನ ತಲಪಾಡಿ ಮತ್ತು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿ ಸಂಸ್ಕರಣೆ ಆಗುತ್ತದೆ. ಹಳೆ ಕಬ್ಬಿಣದ ಸಾಮಗ್ರಿಗಳು ಗೋವಾ ಮತ್ತು ಮುಂಬಯಿಗೆ ಹೋದರೆ, ತಾಮ್ರ ಮತ್ತು ಹಿತ್ತಾಳೆ ಹುಬ್ಬಳ್ಳಿಗೆ ಸಾಗಾಟವಾಗುತ್ತದೆ. ಅಲ್ಲಿನ ಸಂಸ್ಕರಣ ಘಟಕಗಳಲ್ಲಿ ಸಂಸ್ಕರಣೆಯಾಗಿ ಮರುಬಳಕೆಯಾಗುತ್ತದೆ.

ಬೆಲೆ ಇಳಿಕೆಗೆ ಕಾರಣ ಏನು?
ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಆಗಿರುವ ಆರ್ಥಿಕ ಹಿಂಜರಿತ ಗುಜರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಪ್ಲಾಸ್ಟಿಕ್‌ ನಿಷೇಧ ಆಗಿರುವುದರಿಂದ ಹಳೆ ಪೇಪರ್‌, ರಟ್ಟಿನ ಬಾಕ್ಸ್‌ ಮತ್ತಿತರ ಸಾಮಗ್ರಿಗಳ ದರ ಏರಬೇಕಿತ್ತು. ಆದರೆ ಹಾಗಾಗಿಲ್ಲ. ಗುಜರಿ ಸಾಮಗ್ರಿಗಳ ಸಂಸ್ಕರಣೆ ಮತ್ತು ಮರುಬಳಕೆ ಕಡಿಮೆಯಾಗಿದೆಯೇ ಅಥವಾ ಬೇರೆ ಕಾರಣ ಇದೆಯೇ ಎನ್ನುವುದು ತಿಳಿದು ಬಂದಿಲ್ಲ. ಜಿಎಸ್‌ಟಿ ಮತ್ತು ಸರಕಾರದ ವಿವಿಧ ನಿಯಮಗಳು, ದೊಡ್ಡ ಉದ್ಯಮಪತಿಗಳ ಪ್ರವೇಶ ಇತ್ಯಾದಿ ಕಾರಣಗಳನ್ನು ಗುಜರಿ ವ್ಯಾಪಾರಿಗಳು ನೀಡುತ್ತಾರೆ. ಆದರೆ ನೈಜ ಕಾರಣವೇನೆಂಬುದು ಮಾತ್ರ ಗೊತ್ತಾಗುತ್ತಿಲ್ಲ.

ನಗದು ಸಮಸ್ಯೆ?
ಈಗ ಜಿಎಸ್‌ಟಿ ಗುಜರಿ ವ್ಯಾಪಾರಕ್ಕೂ ಅನ್ವಯವಾ ಗುತ್ತಿದೆ. ಅದು ಜಾರಿಗೆ ಬಂದ ಬಳಿಕ ನಮಗೆ ನಗದು ಸಿಗುತ್ತಿಲ್ಲ. 2 ಸಾವಿರದಷ್ಟು ಕನಿಷ್ಠ ಮೊತ್ತವಾದರೂ ಬ್ಯಾಂಕ್‌ ಮೂಲಕವೇ ಬರಬೇಕು. ಚೆಕ್‌ ಆಗಿದ್ದರೆ ನಗದೀಕರಣಕ್ಕೆ 2-3 ದಿನ ಕಾಯಬೇಕು. ಚೆಕ್‌ ಪ್ರಸ್ತುತ ಪಡಿಸುವಾಗ ಆಧಾರ್‌ ಕಾರ್ಡ್‌ ನೀಡಬೇಕು. ಇದೆಲ್ಲವೂ ನಮಗೆ ಸಮಸ್ಯೆ ಎಂದು ಗುಜರಿ ವ್ಯಾಪಾರಿ ಖಲೀಲ್‌ ಮಾಲೆಮಾರ್‌ ತಿಳಿಸಿದ್ದಾರೆ.

ಗುಜರಿ ಉದ್ಯಮವು ಇತ್ತೀಚಿನ ದಿನಗಳಲ್ಲಿ ಒಂದೆಡೆ ಬೆಲೆ ಇಳಿಕೆಯಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಪೈಪೋಟಿಯಿಂದ ನಷ್ಟ ಅನುಭವಿಸುತ್ತಿದೆ. ದೊಡ್ಡ ಉದ್ಯಮ ಸಂಸ್ಥೆಗಳ ಪ್ರವೇಶ, ಸರಕಾರದ ಹಲವು ನಿಯಮಗಳನ್ನು ಹೇರುತ್ತಿರುವುದು ಗುಜರಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜತೆಗೆ ವಿಪರೀತ ದರ ಇಳಿಕೆಯೂ ಆಗಿದೆ. ಇದರಿಂದಾಗಿ ಗುಜರಿಯವರ ಬದುಕು ಕೂಡ ಗುಜರಿಯಂತಾಗಿದೆ.
-ಖಲೀಲ್‌ ಮಾಲೆಮಾರ್‌, ಗುಜರಿ ವ್ಯಾಪಾರಿ

Advertisement

ಗುಜರಿ ಸಾಮಗ್ರಿಗಳಿಗೆ 5 ತಿಂಗಳ ಹಿಂದೆ ಇದ್ದ ಮತ್ತು ಈಗಿನ ದರಗಳನ್ನು ಹೋಲಿಸಿದಾಗ ಕುಸಿತದ ತೀವ್ರತೆ ಸ್ಪಷ್ಟವಾಗುತ್ತದೆ.


– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next