Advertisement

ಆ್ಯಪ್‌ ಮೂಲಕ ಈ ಬಾರಿ ಆರ್ಥಿಕ ಗಣತಿ

10:18 AM Jun 24, 2019 | keerthan |

ಮಂಗಳೂರು: ಉದ್ಯಮ, ಕೃಷಿ, ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿರುವ ಜನರ ವಿವರಗಳನ್ನು ದಾಖಲಿಸುವ 7ನೇ ಆರ್ಥಿಕ ಗಣತಿಯನ್ನು ಇದೇ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌ ಮೂಲಕ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದರಿಂದ ಗಣತಿಯ ಸಮೀಕ್ಷಾ ವರದಿ ಶೀಘ್ರ ಲಭ್ಯವಾಗುವುದು ಸಾಧ್ಯ.

Advertisement

ಜತೆಗೆ ಈ ಗಣತಿಯನ್ನು “ಡಿಜಿಟಲ್‌ ಸೇವಾ ಕೇಂದ್ರ’ಗಳ ಮೂಲಕ ಕೈಗೊಳ್ಳು ವುದು ಕೂಡ ಇದೇಪ್ರಥಮ. ಈವರೆಗೆ ಅಂಗನವಾಡಿ- ಆಶಾ ಕಾರ್ಯಕರ್ತೆಯರನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಗಣತಿದಾರರು ಮನೆ, ಕಟ್ಟಡಗಳಿಗೆ ಭೇಟಿ ನೀಡಿ ಕಾಗದದಲ್ಲಿ ಬರೆದು ಬಳಿಕ ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡುತ್ತಿದ್ದರು. ವರದಿ ಲಭ್ಯವಾಗು ವಾಗ ಹಲವು ವರ್ಷ ಕಳೆಯುತ್ತಿದ್ದವು. ಈ ಸಲ ಮೊದಲ ಬಾರಿಗೆ ಗಣತಿದಾರರಿಗೆ ಮೊಬೈಲ್‌
ಆ್ಯಪ್‌ ನೀಡಲಾಗಿದೆ. 2011ರ ಗಣತಿ ಬ್ಲಾಕ್‌ಗಳು ಮತ್ತು ನಕ್ಷೆಗಳನ್ನು ಜನಗಣತಿ ನಿರ್ದೇಶನಾ ಲಯದಿಂದ ಒದಗಿಸಲಾಗುತ್ತದೆ.

ಭಾರತ ಸರಕಾರದ ಸಾಂಖೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಬರುವ “ಡಿಜಿಟಲ್‌ ಸೇವಾ ಕೇಂದ್ರ’ಗಳ ಮೂಲಕ 7ನೇ ಆರ್ಥಿಕ ಗಣತಿ ಕೈಗೊಳ್ಳಲಿದೆ. ನಗರ, ಗ್ರಾಮ ಭಾಗದಲ್ಲಿ ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಡಿ ಕೆಲಸ ಮಾಡುತ್ತಿರುವ ಡಿಜಿಟಲ್‌ ಸೇವಾ ಕೇಂದ್ರದವರು ಈ ಬಾರಿ ಗಣತಿ ನಡೆಸಲಿದ್ದಾರೆ. ಗ್ರಾ.ಪಂ. ಪಿಡಿಒ, ನಗರ ವ್ಯಾಪ್ತಿಯ ಅಧಿಕಾರಿಗಳು ಇದಕ್ಕೆ ಸಹಕರಿಸಲಿದ್ದಾರೆ.

ಸಂತೆ, ಬೀದಿ ಬದಿ ವ್ಯಾಪಾರ, ಮನೆಯಲ್ಲಿಯೇ ನಿರ್ವಹಿಸುವ ಟೈಲರಿಂಗ್‌
ಮತ್ತು ವಿವಿಧ ಸ್ವ ಉದ್ಯೋಗಗಳು, ಸಣ್ಣ ಪ್ರಮಾಣದ ಹೈನುಗಾರಿಕೆ ಇತ್ಯಾದಿ ಗಳನ್ನು ಮಾಲಕರ ಮನೆಯಲ್ಲಿಯೇ ಎಣಿಕೆ ಮಾಡಲಾಗುತ್ತದೆ. ಉದ್ದಿಮೆ ಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳನ್ನೂ ಸಂಗ್ರಹಿಸಲಾಗುತ್ತದೆ.

ಗಣತಿಯ ಉಸ್ತುವಾರಿಗಾಗಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ
ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ದೇಶದಲ್ಲಿ ಈವರೆಗೆ 6 ಆರ್ಥಿಕ ಗಣತಿಗಳು ನಡೆದಿವೆ.

Advertisement

ಯಾಕಾಗಿ ಆರ್ಥಿಕ ಗಣತಿ?
ಈ ಗಣತಿಯ ಮೂಲಕ ದೇಶ- ರಾಜ್ಯದಲ್ಲಿ ಸಂಘಟಿತ, ಅಸಂಘಟಿತ ವಲಯದ ಕೃಷಿ ಮತ್ತು ಕೃಷಿಯೇತರ ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ಹಣಕಾಸು ಹಂಚಿಕೆ, ಉದ್ಯೋಗಾವಕಾಶ, ವರಮಾನ, ಉತ್ಪಾದನೆ ಮುಂತಾದ ವಿವರ ಸಂಗ್ರಹ ಕೇಂದ್ರ ಸರಕಾರದ ಉದ್ದೇಶ. ಇದರಿಂದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನವನ್ನು ಗುರುತಿಸಬಹುದು. ರಾಜ್ಯದ ಆಂತರಿಕ ಉತ್ಪಾದನೆಯಂತಹ ಮುಖ್ಯವಾದ ಅಂಶಗಳನ್ನು ತಿಳಿಯಲು ಇದು ಮುಖ್ಯ ಮಾಹಿತಿಮೂಲ. ಸಂಗ್ರಹಿತ ಮಾಹಿತಿ ಮುಂದೆ ಮಹತ್ವದ ಯೋಜನೆಗಳ ರೂಪಣೆ-ಅನುಷ್ಠಾನ ಸಂದರ್ಭ ಉಪಯೋಗಿ.

ಗಣತಿದಾರರಿಗೆ ಮಾಹಿತಿ ನೀಡಿ
ಜಿಲ್ಲೆಯ ಭೌಗೋಳಿಕ ಗಡಿಯೊಳಗೆ ನೆಲೆಗೊಂಡಿರುವ ಎಲ್ಲ ಉದ್ಯಮಗಳ, ಘಟಕಗಳ ಪೂರ್ಣಗಣತಿ ಮಾಡುವ 7ನೇ ಆರ್ಥಿಕ ಗಣತಿ ಮುಂದಿನ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮನೆ, ಕಟ್ಟಡಗಳಿಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಗಣತಿಯಲ್ಲಿ ಲಭ್ಯವಾಗುವ ಮಾಹಿತಿಗಳೇ ಮುಂದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸರಕಾರಕ್ಕೆ ಮೂಲ ಅಂಕಿಅಂಶಗಳಾಗಿರುತ್ತವೆ.
– ಉದಯ್‌ ಶೆಟ್ಟಿ , ಸಂಖ್ಯಾ ಸಂಗ್ರಹಣಾಧಿಕಾರಿ, ದ.ಕ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next