ಕನಕಪುರ: ಪಿಡಿಒ ಶಿವರುದ್ರಪ್ಪ ಒಬ್ಬರೇ ಕಮಿಷನ್ ಹಣವನ್ನು ನುಂಗಿದ್ದಾರೆ. ನಮಗೂ ಸ್ವಲ್ಪ ಕೊಡಿ ಎಂದು ಕೇಳುವುದರಲ್ಲಿ ಏನು ತಪ್ಪು, ಎಂದು ಗ್ರಾಪಂ ಅಧ್ಯಕ್ಷೆ ನಾಗರತ್ನ ಹಾಗೂ ಗ್ರಾಮಸ್ಥರ ಮುಂದೆ ಹಣಕ್ಕೆ ಬೇಡಿಕೆ ಇಟ್ಟ ಘಟನೆ ದ್ಯಾವಸಂದ್ರ ಗ್ರಾಪಂ ಗ್ರಾಮ ಸಭೆಯಲ್ಲಿ ನಡೆಯಿತು.
ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ದ್ಯಾವಸಂದ್ರ ಗ್ರಾಪಂ ಗ್ರಾಮ ಸಭೆ ಉಪಾಧ್ಯಕ್ಷ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುತ್ತಿದ್ದಂತೆ, ಆನೇಕ ಸಮಸ್ಯೆಗಳು ಚರ್ಚೆಗೆ ಬಂದವು. ಕೆಲವು ಕಾಮಗಾರಿಗಳ ಅನುದಾನ ಮೂರು ವರ್ಷಗಳಿಂದ ಬಿಡುಗಡೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಅಧ್ಯಕ್ಷರು ಮತ್ತು ಪಿಡಿಒ ಮಧ್ಯೆ ಸಾಮರಸ್ಯದ ಕೊರತೆಯಿಂದ ಯಾವುದೇ ಕಾಮಗಾರಿಗಳಿಗೂ ಅಧ್ಯಕ್ಷರು ಸಹಿ ಹಾಕುತ್ತಿಲ್ಲ, ಸಮಯಕ್ಕೆ ಸರಿಯಾಗಿ ಬಂದು ಬೆರಳಚ್ಚು ನೀಡದೆ ನಿರ್ಲಕ್ಷ್ಯ ವಹಿಸಿ, ಬಂದಿದ್ದ 1.5ಕೋಟಿ ಅನುದಾನವನ್ನು ವಾಪಸ್ಸಾಗುವಂತೆ ಮಾಡಿದ್ದಾರೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಮೂರ್ತಿ ಆರೋಪಿಸಿದರು. ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.
ಪರಿಸ್ಥಿತಿ ಗಂಭೀರತೆಯನ್ನು ಅರಿತು ಜಿಪಂ ಸದಸ್ಯ ನಾಗರಾಜು ಮಧ್ಯಪ್ರವೇಶಿಸಿ ನಿಮ್ಮ ಆಂತರಿಕ ವಿಷಯಗಳನ್ನು ಕಚೆೇರಿಯಲ್ಲಿ ಕುಳಿತು ಚರ್ಚಿಸೋಣ ಸಾರ್ವಜನಿಕವಾಗಿ ಬೇಡ ಈಗ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಎಂದು ಗಮನ ಬೇರೆಡೆ ಸೆಳೆಯಲು ಯತ್ನಿಸಿದರಾದರೂ,ಸದಸ್ಯರು ಮರು ಪ್ರಶ್ನೆ ಮಾಡಿ ದನದ ಕೊಟ್ಟಿಗೆ ಬಿಲ್ಗಳಿಗೆ ಏಕೆ ಸಹಿಹಾಕಿಲ್ಲ ಎಂದು ಒತ್ತಡ ಹೇರಿದಾಗ, ಪ್ರತಿಕ್ರಿಯಿಸಿದ ಅಧ್ಯಕ್ಷೆ ನಾಗರತ್ನ, ಪಿಡಿಒ ಶಿವರುದ್ರಪ್ಪ ನನಗೆ ಕೊಡಬೇಕಾದ 30 ಪರ್‌ಸೆಂಟ್ ಕಮಿಷನ್ ಕೊಟ್ಟಿಲ್ಲ ಎಂದು ಸಾರ್ವಜನಿಕವಾಗಿ ಹಣಕ್ಕೆ ಬೇಡಿಕೆ ಇಟ್ಟರು. ಇದನ್ನು ಕಂಡ ಕೆಲ ಗ್ರಾಮಸ್ಥರು ನಮ್ಮ ತೆರಿಗೆ ಹಣ ಹೇಗೆ ದುರ್ಬಳಕೆಯಾಗುತ್ತಿದೆ ಎಂದು ಕಕ್ಕಾಬಿಕ್ಕಿಯಾದರು.
1993ರಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾರವರ ಆಡಳಿತ ಅವದಿಯಲ್ಲಿ ಸರ್ವೆ ನಂ.42 ರಲ್ಲಿ ಸುಮಾರು 50 ನಿವೇಶನಗಳ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಕಳೆದ 26 ವರ್ಷಗಳಿಂದ ಖಾತೆ ಮಾಡಿಕೊಟ್ಟಿಲ್ಲ ಎಂದು ಕಳ್ಳಿ ಭೀಮ ಸಂದ್ರದ ಚನ್ನಪ್ಪ, ಮತ್ತು ಹೋನಮ್ಮ ತಗಡಪ್ಪ ಆರೋಪಿಸಿದರು.
ಜಿಪಂ ಸದ್ಯಸ್ಯ ನಾಗರಾಜು ಮಾತನಾಡಿ.ಅಧಿಕಾರಿಗಳು ಮತ್ತು ಅಧ್ಯಕ್ಷರ ಮಧ್ಯೆ ಸಾಮರಸ್ಯವಿಲ್ಲದಿದ್ದರೆ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಸರ್ಕಾರದ ಹಣವನ್ನು ಸರಿಯಾಗಿ ಬಳಸಿಕೊಳ್ಳಲು ಆಗದಿದ್ದರೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ಸಾರ್ವಜನಿಕ ಸಭೆಯಲ್ಲಿ ಕಮಿಷನ್ ಹಣ ಕೇಳುತ್ತಿದ್ದೀರಿ, ನಿಮ್ಮನ್ನು ಜನರು ಆಯ್ಕೆ ಮಾಡುವುದು ಕಮಿಷನ್ ಕೇಳಲು ಅಲ್ಲ ಕೆಲಸಮಾಡಲು ಎಂದು ಕಾನೂನು ಪಾಠಮಾಡಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್,ಆರೋಗ್ಯ ಇಲಾಖೆಯ ಪ್ರಾಥಮಿಕ ವೈದ್ಯಾಧಿಕಾರಿ ಯಮುನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೀತಾ, ತೋಟಗಾರಿಕಾ ಸಹಾಯಕ ಅಧಿಕಾರಿ ಪ್ರಕಾಶ್, ರೇಷ್ಮೆ ಇಲಾಖೆಯ ದೇವರಾಜು, ಕೃಷಿ ಇಲಾಖೆಯ ಶ್ರೀನಿವಾಸ್ ಇತರರು ಹಾಜರಿದ್ದರು.