Advertisement

ಜೀವ ಪಣಕ್ಕಿಟ್ಟ ಎಲ್ಲರಿಗೂ ನೆರವು ನೀಡುವುದು ಕರ್ತವ್ಯ

03:10 AM May 26, 2021 | Team Udayavani |

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರಕಾರ ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಬದಿಗಿಟ್ಟು ಸಂಪೂರ್ಣ ಆಡಳಿತ ಯಂತ್ರವನ್ನು ಕೊರೊನಾ ನಿಯಂತ್ರಣಕ್ಕೆ ಮೀಸಲಿಟ್ಟಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರಾದಿಯಾಗಿ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Advertisement

ಸರಕಾರದ ಆದೇಶವನ್ನು ತಳ ಮಟ್ಟದಲ್ಲಿ ಕಾರ್ಯಗತಗೊಳಿಸುವ ಕೆಲಸವನ್ನು ಸರಕಾರಿ ಅಧಿಕಾರಿ ಹಾಗೂ ಸಿಬಂದಿವರ್ಗ ಮಾಡುತ್ತಿದೆ. ಕೊರೊನಾ ಮೊದಲನೇ ಅಲೆ ಎದುರಾದಾಗಲೇ ಸರಕಾರ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳನ್ನು ಅಗತ್ಯ ಸೇವೆ ಒದಗಿಸುವ ಇಲಾಖೆಗಳೆಂದು ಪರಿಗಣಿಸಿ ಈ ಇಲಾಖೆಗಳ ಸಿಬಂದಿಯನ್ನು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದರ ಹೊರತಾಗಿ ಶಿಕ್ಷಕರನ್ನು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಬಳಸಿಕೊಳ್ಳುತ್ತಿದೆ. ಅಲ್ಲದೇ ಬಹುತೇಕ ಇಲಾಖೆಗಳ ಶೇ.50ರಷ್ಟು ಸಿಬಂದಿಯನ್ನು ಕೊರೊನಾ ಸಂಬಂಧಿ ರೋಗಿಗಳ ಮನೆ ಸಮೀಕ್ಷೆಯಂತಹ ಕೆಲಸಗಳಿಗೆ ಬಳಸಿ ಕೊಳ್ಳುತ್ತಿದೆ. ಇವರನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೊನಾ ಯೋಧರು ಎಂದು ಅಧಿಕೃತವಾಗಿಯೇ ಘೋಷಿಸಿವೆ.

ಕೇಂದ್ರ ಸರಕಾರ ತನ್ನ ವ್ಯಾಪ್ತಿಗೆ ಒಳಪಡುವ ಕೊರೊನಾ ವಾರಿಯರ್ಸ್‌ ಕೊರೊನಾ ನಿರ್ವಹಣೆ ಸಂದರ್ಭದಲ್ಲಿ ಸೋಂಕಿನಿಂದ ಮೃತ ಪಟ್ಟರೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ವಿಮಾ ಯೋಜನೆ ಅಡಿಯಲ್ಲಿ 50 ಲಕ್ಷ ರೂ. ಪರಿಹಾರ ನೀಡುವ ಘೋಷಣೆ ಮಾಡಿದೆ. ರಾಜ್ಯದಲ್ಲಿ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಇದರ ವ್ಯಾಪ್ತಿಗೆ ಬರುತ್ತಾರೆ. ಆದರೆ ವೈದ್ಯರಿಗೆ ದೊರೆಯುತ್ತಿರುವ ವಿಮಾ ಪರಿಹಾರ ರಾಜ್ಯದ ಆಶಾ ಕಾರ್ಯಕರ್ತೆಯರು ಮೃತರಾದಾಗ ದೊರೆಯುತ್ತಿಲ್ಲ. ಕಳೆದ ವರ್ಷ 12 ಜನ ಆಶಾ ಕಾರ್ಯಕರ್ತೆಯರು ಕೋವಿಡ್‌ನಿಂದ ಮೃತರಾಗಿದ್ದರು, ಒಬ್ಬರಿಗೆ ಮಾತ್ರ 50 ಲಕ್ಷ ಪರಿಹಾರ ದೊರೆತಿದೆ. ಉಳಿದವರ ಕುಟುಂಬಕ್ಕೆ ಪರಿಹಾರ ಮರಿಚಿಕೆಯಾಗಿದೆ.

ಕೇಂದ್ರದ ವಿಮಾ ಯೋಜನೆ ವ್ಯಾಪ್ತಿಗೆ ಒಳಪಡದ ರಾಜ್ಯದ ಇತರ ಇಲಾಖೆಗಳ ಎಲ್ಲ ಸಿಬಂದಿಗೂ ಕೊರೊನಾ ನಿರ್ವಹಣೆಯ ಕರ್ತವ್ಯ ದಲ್ಲಿದ್ದಾಗ ಕೊರೊನಾದಿಂದ ಮೃತರಾದರೆ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಆದರೆ ಕೊರೊನಾ ಕರ್ತವ್ಯದಲ್ಲಿದ್ದಾಗ ನಿಧನ ಹೊಂದಿರುವ ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಯ ವೈದ್ಯರಿಗೆ ಬಿಟ್ಟರೆ ಬಹುತೇಕರಿಗೆ ಇನ್ನೂ ವಿಮಾ ಪರಿಹಾರ ದೊರೆತಿಲ್ಲ.

ಸರಕಾರ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಯಾವುದೇ ರೀತಿಯ ವಿಶೇಷ ಅನುದಾನ ಮೀಸಲಿಡದೇ ಇರುವುದರಿಂದ ಇಲಾಖೆಗಳಲ್ಲಿ ಯಾವ ಹಣ ವಿಮಾ ಪರಿಹಾರ ನೀಡಬೇಕೆಂಬ ಗೊಂದಲದಿಂದ ವಿಳಂಬವಾಗುತ್ತಿದೆ ಎನ್ನುವ ಕಾರಣ ಸರಕಾರದ ಕಡೆಯಿಂದ ವ್ಯಕ್ತವಾಗುತ್ತಿದೆ. ಅಲ್ಲದೆ ನೌಕರರ ಸಂಬಳದ ಅಕೌಂಟ್‌ ನಿಂದ ಪರಿಹಾರ ನೀಡುವಂತೆ ಸಲಹೆಯನ್ನೂ ಇಲಾಖಾ ಮುಖ್ಯಸ್ಥರಿಗೆ ಆರ್ಥಿಕ ಇಲಾಖೆ ನೀಡುತ್ತಿದೆ ಎಂಬ ಮಾಹಿತಿ ಇದೆ.

Advertisement

ಸರಕಾರ ಸಂಘಟಿತವಾಗಿ ಒಂದು ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವಾಗ ಎಲ್ಲರನ್ನೂ ಸಂಘಟಿತವಾಗಿ ಇದರ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳುತ್ತಿರುವಾಗ ಕರ್ತವ್ಯದಲ್ಲಿದ್ದಾಗ ನಿಧನರಾದವರೆಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ತರುವ ಅಗತ್ಯ ಇದೆ. ಈ ನಿಟ್ಟಿ ನಲ್ಲಿ ಸರಕಾರ ಬೇಗನೆ ನಿರ್ಧಾರ ತೆಗೆದುಕೊಳ್ಳಲಿ.

Advertisement

Udayavani is now on Telegram. Click here to join our channel and stay updated with the latest news.

Next