Advertisement

ಹೆಸರಿಗಷ್ಟೇ ರಾಜಕಾಲುವೆಗಳ ಹೂಳೆತ್ತುವಿಕೆ !

02:39 AM May 26, 2019 | Team Udayavani |

ಮಹಾನಗರ: ಮಳೆಗಾಲ ಪ್ರಾರಂಭಕ್ಕೆ ಇನ್ನು ವಾರವಷ್ಟೇ ಬಾಕಿ ಉಳಿದಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಚರಂಡಿ ರಿಪೇರಿ, ರಾಜಕಾಲುವೆ ಹೂಳು ತೆಗೆಯುವುದು ಸೇರಿದಂತೆ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿರುವುದು ಮಹಾನಗರ ಪಾಲಿಕೆಯ ಕೆಲಸವಾಗಿದೆ.

Advertisement

ಆದರೆ, ವಾಸ್ತವದಲ್ಲಿ ಪ್ರತಿ ಬಾರಿಯೂ ಮಳೆಗಾಲದ ಹಿನ್ನೆಲೆಯಲ್ಲಿ ನಗರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಡವುತ್ತಿರುವುದಕ್ಕೆ ನಮ್ಮ ಮುಂದೆ ಬಹಳಷ್ಟು ನಿರ್ದಶನಗಳಿವೆ. ಅದೇ ರೀತಿ ಈ ಬಾರಿಯು ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಯಲ್ಲಿ ರಾಜ ಕಾಲುವೆಗಳ ಹೂಳು ತೆಗೆಯುವುದು ಸೇರಿದಂತೆ ಸ್ವಚ್ಛಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

ಕೆಲವೆಡೆ ತೋರ್ಪಡಿಕೆಗೆ ಮಾತ್ರ ಕಾಮಗಾರಿ ಆಗುತ್ತಿದೆ ಎನ್ನುವುದು ಸಾರ್ವ ಜನಿಕರ ಆರೋಪ ವಾಗಿದೆ. ಇದಕ್ಕೊಂದು ಉದಾಹರಣೆ ಎಂದರೆ ಕದ್ರಿ, ಬಳ್ಳಾಲ್ಬಾಗ್‌, ಅಳಪೆ, ಕುದ್ರೋಳಿ ಮೂಲಕ ಹಾದು ಹೋಗುವ ಬಹುದೊಡ್ಡ ರಾಜ ಕಾಲುವೆಯ ಹೂಳೆತ್ತಿರುವ ಕಾಮಗಾರಿ. ಜನರ ಕಣ್ಣೊರೆಸುವ ಸಲುವಾಗಿ ರಾಜಕಾಲುವೆಯ ಹೂಳೆತ್ತುವ ಕೆಲಸ ಮಾಡುವ ಮೂಲಕ ಜನರ ದುಡ್ಡು ಪೋಲಾಗಿರುವುದರಲ್ಲಿ ಅನುಮಾನವಿಲ್ಲ. ಸಮರ್ಪಕವಾಗಿ ಹೂಳೆತ್ತುವಲ್ಲಿ ಗುತ್ತಿಗೆದಾ ರರು ವಿಫಲರಾಗಿದ್ದಾರೆ. ಇದರಿಂದ ಈ ಸಲದ ಮಳೆಗಾಲಕ್ಕೆ ಮತ್ತೆ ಕೃತಕ ನೆರೆ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ.

13 ಲಕ್ಷ ರೂ.ನ ಟೆಂಡರ್‌
ಕಳೆದ ಮಳೆಗಾಲದಲ್ಲಿ ಉಂಟಾದ ಅವಾಂತರ ಮರುಕಳಿಸದಂತೆ ಮಾಡಲು ಈ ಬಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ನಗರದ ಎಲ್ಲ ರಾಜಕಾಲುವೆಗಳ ಹೂಳೆತ್ತುವಿಕೆ, ಚರಂಡಿ ಸ್ವಚ್ಛತೆಯಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಆದರೆ ಟೆಂಡರ್‌ ವಹಿಸಿಕೊಂಡ ಗುತ್ತಿಗೆದಾರರು ಹೆಸರಿಗೆ ಮಾತ್ರ ಕೆಲಸ ಮಾಡಿದ್ದು, ಹೂಳೆತ್ತುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ.

ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ ಬದಿ ಯಲ್ಲಿ ಹಾದುಹೋಗುವ ನಗರದ ಬಹು ದೊಡ್ಡ ರಾಜಕಾಲುವೆಯ ಹೂಳೆತ್ತಲು 13, 20,000 ರೂ. ಟೆಂಡರ್‌ ಆಗಿದ್ದು, ಹೂಳೆತ್ತುವ ಕೆಲಸ ಭಾಗಶಃ ಆಗಿದೆ. ಆದರೆ ನಿಯಮದಂತೆ ರಾಜಕಾಲುವೆಯ ತಳಮಟ್ಟದಿಂದ 1.5 ಅಡಿ. ಆಳದವರೆಗೆ ಹೂಳು ತೆಗೆಯಬೇಕು. ಆದರೆ ಈ ಕಾಲುವೆ ಯಲ್ಲಿ ತಳಮಟ್ಟದವರಿಗೂ ಹೂಳೆತ್ತುವ ಕೆಲಸವಾಗಿಲ್ಲ. ಇದರಿಂದ ಈ ಬಾರಿಯ ಮಳೆಗೆ ಮತ್ತೆ ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ.

Advertisement

ಖಾಸಗಿ ಸ್ಥಳದಲ್ಲೇ ಹೂಳುಗಳ ರಾಶಿ
ಟೆಂಡರ್‌ ವಹಿಸಿದ ಗುತ್ತಿಗೆದಾರರು ನಗರದ ಪ್ರಮುಖ ರಾಜಕಾಲುವೆಗಳ ಹೂಳೆತ್ತುವ ಜತೆಗೆ ಎತ್ತಿದ ಹೂಳನ್ನು ಅವರೇ ಸಾಗಾಟ ಮಾಡಬೇಕಾಗಿದೆ. ಆದರೆ ಗುತ್ತಿಗೆ ವಹಿಸಿಕೊಂಡ ಕಂಪೆನಿ ರಾಜಕಾಲುವೆಯ ಸಮೀಪ ಖಾಸಗಿ ಸ್ಥಳದಲ್ಲೇ ಹೂಳು ಗಳನ್ನು ಹಾಕುತ್ತಿದೆ. ಇದರಿಂದ ಸಾರ್ವ ಜನಿಕರಿಗೆ ತೊಂದರೆ ಯಾಗುತ್ತಿದೆ. ಟೆಂಡರ್‌ ಸಮಯದಲ್ಲಿ ತಿಳಿಸಲಾದ ನಿಯಮಗಳನ್ನು ಗುತ್ತಿಗೆದಾರರು ಪಾಲಿಸದಿರುವುದರಿಂದ ಸಾರ್ವಜನಿಕರು ಕಷ್ಟ ಅನುಭವಿಸಬೇಕಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಸಾರ್ವಜನಿಕರಿಗೆ ಸಂಕಷ್ಟ
ಕಳೆದ ಬಾರಿಯ ಮಳೆಯಿಂದ ಉಂಟಾದ ಕೃತಕ ನೆರೆಯಿಂದ ಅತಿ ಹೆಚ್ಚು ನಷ್ಟ ಉಂಟಾದ ಮಣ್ಣಗುಡ್ಡೆ, ಅಳಪೆ ಭಾಗದಲ್ಲೂ ಈ ರಾಜಕಾಲುವೆ ಹರಿಯುತ್ತಿದ್ದು, ಇಲ್ಲೂ ನೆಲಮಟ್ಟದವರೆಗೆ ಹೂಳೆತ್ತುವ ಕೆಲಸವಾಗಿದೆ. ಇನ್ನೂ ಆಳವಾಗಿ ಹೂಳೆತ್ತದೆ ಇರುವುದರಿಂದ ಈ ಬಾರಿಯೂ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದೆ. ಸಾರ್ವಜನಿಕರ ಕಣ್ಣೊರೆಸುವ ಸಲುವಾಗಿ ಕಾಮಗಾರಿ ಮಾಡಿದರೆ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅನಾಹುತಗಳಿಗೆ ಬೆಲೆ ತೆರಬೇಕಾದಿತು.

 ಮತ್ತೂಮ್ಮೆ ಹೂಳೆತ್ತುವ ಕೆಲಸ
ಮೊದಲ ಬಾರಿಗೆ ರಾಜಕಾಲುವೆಯ ಎಲ್ಲ ಭಾಗಗಳ ಹೂಳೆತ್ತುವ ಕೆಲಸ ಮಾಡಲಾಗಿದೆ. ಆದರೆ ಕೆಲವೆಡೆ ಪೈಪ್‌ಗ್ಳು ಇರುವುದರಿಂದ ಸಮಸ್ಯೆಯಾಗಿತ್ತು. ಸ್ಥಳೀಯರು ಮತ್ತೂಮ್ಮೆ ಹೂಳೆತ್ತುವ ಕೆಲಸವಾಗಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಇನ್ನೂ ಕೆಲವು ದಿನಗಳಲ್ಲಿ ಮತ್ತೂಮ್ಮೆ ಹೂಳೆತ್ತುವ ಕೆಲಸ ಮಾಡಲಾಗುವುದು.
 - ನಿತ್ಯಾನಂದ, ಎಂಜಿನಿಯರ್‌

-ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next