ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ನಗರದಲ್ಲಿ ಡ್ರಗ್ಸ್ ಪೂರೈಕೆಗೆ ಯತ್ನಿಸುತ್ತಿದ್ದ 3 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಮಂದಿ ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದು, 6.31 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಐವರಿಕೋಸ್ಟ್ ಮೂಲದ ಕಾವೊ ಎಸ್ಸೆ ಸಬಾಸ್ಟೀನ್, ಕೋಸ್ಟರಿಕಾದ ಆಗುºಚಿಕೆ ಅಂಥೋನಿ, ರಾಮಣ್ಣ, ಇರ್ಫಾನ್, ಬಾಷಾ, ಮೊಹಮ್ಮದ್ ಮುಜಾಯಿದ್, ಇಲಿಯಾಜ್ ಸೇರಿ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
2 ಕೆ.ಜಿ. 550 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 350 ಎಕ್ಸೈಸಿ ಮಾತ್ರೆಗಳು, 4 ಕೆ.ಜಿ. ತೂಕದ ಹ್ಯಾಶಿಸ್ ಆಯಿಲ್, 440 ಗ್ರಾಂ ತೂಕದ ಚರಸ್, 7 ಕೆಜಿ 100 ಗ್ರಾಂ ತೂಕದ ಗಾಂಜಾ ಸೇರಿದಂತೆ 6.31 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಪೊಲೀಸ್ ಆಯುಕ್ತರ ವಿಶೇಷ ಸೂಚನೆಯಂತೆ ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಪೆಡ್ಲರ್ಸ್‌ಗಳ ಮೇಲೆ ಹೆಚ್ಚಿನ ನಿಗಾ ಇಟ್ಟು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಿಸಿಬಿ ಪೊಲೀಸರಿಗೆ ತಿಳಿಸಿದ್ದರು. ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಚಲನಾವಲನಗಳ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ನಗರದ ವಿವಿಧೆಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ದುಪ್ಪಟ್ಟು ಬೆಲೆಗೆ ಮಾರಾಟಕ್ಕೆ ಯತ್ನ: ಗೋವಾ, ದೆಹಲಿ, ಆಂಧ್ರಪ್ರದೇಶ, ಹೈದರಾಬಾದ್ ಹಾಗೂ ನಗರದಲ್ಲಿ ನೆಲೆಸಿರುವ ನೈಜೀರಿಯಾ ಡ್ರಗ್ಸ್ ಪೆಡ್ಲರ್ ಗಳಿಂದ ವಿವಿಧ ರೀತಿಯ ಡ್ರಗ್ಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಡ್ರಗ್ಸ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಖರೀದಿಸಿದ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಸಂಚು ರೂಪಿಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಕೊತ್ತನೂರು, ಬಾಣಸವಾಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಆರೋಪಿಗಳು ಡ್ರಗ್ಸ್ ಮಾರಾಟದಿಂದ ಇದುವರೆಗೆ ಎಷ್ಟು ಆಸ್ತಿ ಸಂಪಾದಿಸಿದ್ದಾರೆ. ಎಷ್ಟು ಕೋಟಿ ರೂ. ಮೌಲ್ಯದ ಡ್ರಗ್ಸ್ ಡೀಲಿಂಗ್ ನಡೆಸಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡ್ರಗ್ಸ್ ಶೇಖರಿಸಿಡಲೆಂದೇ ಬಾಡಿಗೆ ಮನೆ! : ಆರೋಪಿಗಳಾದ ರಾಮಣ್ಣ, ಇರ್ಫಾನ್, ಬಾಷಾ, ಮೊಹಮ್ಮದ್ ಮುಜಾಯಿದ್, ಇಲಿಯಾಜ್ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಸಂಗ್ರಹಿಸಿಡುವ ಸಲುವಾಗಿಯೇ ಬಾಡಿಗೆ ಮನೆಯನ್ನು ಪಡೆದು ಶೇಖರಿಸಿಟ್ಟುಕೊಂಡಿದ್ದರು. ಹೊಸ ವರ್ಷದ ಪ್ರಯುಕ್ತ ತಮ್ಮ ಗಿರಾಕಿಗಳ ಬೇಡಿಕೆಗೆ ಅನುಗುಣವಾಗಿ ಅವುಗಳನ್ನು ಮಾರಾಟ ಮಾಡಿ ಅಥವಾ ಡ್ರಗ್ಸ್ ಶೇಖರಿಸಿಟ್ಟ ಬಾಡಿಗೆ ಮನೆಯಲ್ಲೇ ಡೀಲ್ ಕುದುರಿಸಲು ಮುಂದಾಗಿದ್ದರು.