ಹೊನ್ನಾಳಿ: ಅಪಘಾತವೆಸಗಿ ವ್ಯಕ್ತಿ ಸಾವಿಗೆ ಕಾರಣನಾಗಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊನ್ನಾಳಿ ಠಾಣೆ ಸಿಪಿಐ ಟಿ.ವಿ. ದೇವರಾಜ್ ಯಶಸ್ವಿಯಾಗಿದ್ದಾರೆ.
ಕ್ಯಾಂಟರ್ ಚಾಲಕ ನ್ಯಾಮತಿ ತಾಲೂಕು ಸೋಗಿಲು ಗ್ರಾಮದ ನಿವಾಸಿ ತುಕಾರಾಮ್ ಅಲಿಯಾಸ್ ತುಕ್ಯಾ ನಾಯ್ಕ(22) ಬಂಧಿತ ಆರೋಪಿ.
ಈತ ತಾಲೂಕಿನ ಎಚ್. ಕಡದಕಟ್ಟೆ ಸರ್ಕಲ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಮಾ. 21ರಂದು ಬೈಕ್‌ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಈ ಅಪಘಾತದಲ್ಲಿ ಬೈಕ್ ಸವಾರ ಎಚ್. ಕಡದಕಟ್ಟೆ ಗ್ರಾಮದ ಸಿ.ಎಸ್. ಬಸಪ್ಪ (52) ಸ್ಥಳದಲ್ಲೇ ಸಾವಿಗೀಡಾಗಿದ್ದರು.
ಆರೋಪಿಯನ್ನು ಬಂಧಿಸಲು ಮುಂದಾದ ಸಿಪಿಐ ಟಿ.ವಿ. ದೇವರಾಜ್ ವಾರ ಕಾಲ ಹೊನ್ನಾಳಿ-ನ್ಯಾಮತಿ ತಾಲೂಕುಗಳ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ನರಸಗೊಂಡನಹಳ್ಳಿ, ಅರಕೆರೆ, ಗೊಲ್ಲರಹಳ್ಳಿ, ದಾನಿಹಳ್ಳಿ, ಸೋಗಿಲು, ಕೆಂಚಿಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಿವಿಧ ಲಘು ವಾಹನಗಳ ಮೇಲೆ ಕಣ್ಣಿಟ್ಟಿದ್ದರು. ಈ ಮಧ್ಯೆ ಮಾ. 28ರಂದು ಹೊನ್ನಾಳಿ ಪಟ್ಟಣದ ಬಂಬೂ ಬಜಾರ್‌ನಲ್ಲಿ ಇರುವ ಸಾಯಿ ಆಗ್ರೋ ಕೇಂದ್ರದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಕ್ಯಾಂಟರ್‌ವೊಂದು ಹೊನ್ನಾಳಿ ಪಟ್ಟಣದ ಮೂಲಕ ಹಾದು ಹೋಗಿರುವುದು ಪತ್ತೆಯಾಗಿದೆ.
ವಾಹನದ ನೋಂದಣಿ ಸಂಖ್ಯೆ ದಾಖಲಿಸಿಕೊಂಡು ಪತ್ತೆಗೆ ಮುಂದಾಗಿದ್ದಾರೆ. ಮಾ. 31ರಂದು ಕೆಂಚಿಕೊಪ್ಪ ಗ್ರಾಮದಲ್ಲಿ ಮೆಕ್ಕೆಜೋಳದ ಬೆಂಡುಗಳನ್ನು (ಧಾನ್ಯರಹಿತ ತೆನೆಗಳನ್ನು)ತುಂಬುತ್ತಿದ್ದ ಕ್ಯಾಂಟರ್ ಪರಿಶೀಲಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸಿಪಿಐ ಟಿ.ವಿ. ದೇವರಾಜ್ ಅವರು ಆರೋಪಿ ತುಕಾರಾಮ್‌ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.