ಯಳಂದೂರು: ಕಳೆದ ಮೂರು ತಿಂಗಳ ಹಿಂದೆ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯ ತುಂಬೆಲ್ಲ ದಿನನಿತ್ಯ ನೂರಾರು ಲೀಟರ್ ನೀರು ಪೋಲಾಗುತ್ತಿದ್ದರೂ ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದರೂ ಇನ್ನೂ ಕೂಡ ಕ್ರಮ ವಹಿಸುತ್ತಿಲ್ಲ.
ಮಾಂಬಳ್ಳಿ ಗ್ರಾಮ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಮುಖ ಬೀದಿಯಾಗಿರುವ ಗ್ರಾಮ ಪಂಚಾಯಿತಿಗೆ ತೆರಳುವ ರಸ್ತೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಕುಡಿಯುವ ನೀರು ಪೂರೈಸುವ ಪೈಪ್ ಒಡೆದಿದೆ. ದಿನನಿತ್ಯ ನೀರು ಬಿಟ್ಟಾಗ ಇಲ್ಲಿಂದ ನೂರಾರು ಲೀಟರ್ ನೀರು ಸೋರಿಕೆಯಾಗುತ್ತದೆ. ರಸ್ತೆಯ ತುಂಬೆಲ್ಲಾ ನೀರು ನಿಲ್ಲುವುದರಿಂದ ವಾಹನ ಸವಾರರು ಹಾಗೂ ಇಲ್ಲಿರುವ ಅಂಗಡಿ ಮುಂಗಟ್ಟೆಗಳ ಮಾಲೀಕರು ಹಾಗೂ ಮನೆ ಮಾಲೀಕರಿಗೆ ನಿತ್ಯ ಕಿರಿಕಿರಿ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಪ್ರದೇಶವೆಲ್ಲಾ ಗಬ್ಬು ನಾರುತ್ತಿದೆ: ಇಲ್ಲೇ ನೀರು ನಿಲ್ಲುವುದರಿಂದ ಈ ಸ್ಥಳದಲ್ಲಿ ಸೊಳ್ಳೆ ಕ್ರಿಮಿಕೀಟಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ಗ್ರಾಮದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆಯ ಅನೇಕ ಘಟಕಗಳಿವೆ. ಇಲ್ಲಿಂದ ಒಸರುವ ನೀರು ಕೂಡ ಇದರೊಂದಿಗೆ ಸೇರುವುದರಿಂದ, ಇಲ್ಲಿನ ಚರಂಡಿಗಳಲ್ಲೂ ಹೂಳೆತ್ತದಿರುವುದರಿಂದ ಈ ಪ್ರದೇಶವೆಲ್ಲಾ ಗಬ್ಬು ನಾರುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪಂಚಾಯಿತಿಯ ಪಿಡಿಒ ಹಾಗೂ ತಾಲೂಕು ಪಂಚಾಯಿತಿಯ ಇಒಗೆ ದೂರು ಸಲ್ಲಿಸಿದರೂ ಕ್ರಮ ವಹಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳಾದ ತಾಪಂ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್ ಸೇರಿದಂತೆ ಹಲವರ ದೂರಾಗಿದೆ.
ಬಡಾವಣೆಯ ಪ್ರಮುಖ ಬೀದಿದಲ್ಲಿ ಕುಡಿವ ನೀರಿನ ಪೈಪ್ ಒಡೆದ ಮೂರು ತಿಂಗಳೇ ಕಳೆದಿವೆ. ಇದನ್ನು ದುರಸ್ತಿ ಮಾಡುವಂತೆ ಪಿಡಿಒಗೆ ಹಲವಾರು ಬಾರಿ ದೂರು ಸಲ್ಲಿಸಲಾಗಿದೆ. ಅಲ್ಲದೆ ತಾಪಂ ಇಒಗೂ ದೂರು ನೀಡಲಾಗಿದೆ. ಅವರು ಇದನ್ನು ಸರಿಪಡಿಸುವಂತೆ ಪಿಡಿಒಗೆ ಸೂಚನೆ ನೀಡಿದ್ದಾರೆ. ಆದರೆ ಇದುವರೆಗೂ ಇದರ ದುರಸ್ತಿಯಾಗಿಲ್ಲ. ಪ್ರತಿನಿತ್ಯ ನೂರಾರು ಲೀಟರ್ ನೀರು ಪೋಲಾಗುತ್ತದೆ. ಕಸ ವಿಲೇವಾರಿಯೂ ಸರಿಯಾಗಿ ನಡೆಯುತ್ತಿಲ್ಲ. ಚರಂಡಿಯ ಸ್ವತ್ಛತೆಗೂ ಆದ್ಯತೆ ನೀಡುತ್ತಿಲ್ಲ. ಗ್ರಾಪಂ ಸದಸ್ಯರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಕೂಡಲೇ ಇದನ್ನು ದುರಸ್ತಿ ಪಡಿಸದಿದ್ದಲ್ಲಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ಮುಬಾರಕ್ ಉನ್ನೀಸಾ, ಗ್ರಾಪಂ ಸದಸ್ಯರು ಮಾಂಬಳ್ಳಿ
ಇಲ್ಲಿ ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳು ಸಂಚರಿಸುತ್ತವೆ. ಹಾಗಾಗಿ ಇಲ್ಲಿ ಪೈಪ್ ಪದೇ ಪದೆ ಒಡೆದು ಹೋಗುತ್ತಿದೆ. ಈಗಾಗಲೇ ಎರಡು ಬಾರಿ ಇದನ್ನು ದುರಸ್ತಿ ಮಾಡಲಾಗಿದೆ. ಇದರ ದುರಸ್ತಿಗೆ ಕ್ರಮ ವಹಿಸಲಾಗುವುದು.
-ರಮೇಶ್, ಪಿಡಿಒ ಗ್ರಾಪಂ ಮಾಂಬಳ್ಳಿ
– ಫೈರೋಜ್ ಖಾನ್