ಕಾಸರಗೋಡು: ಒಂದು ಇಂಚು ಜಾಗವಾಗಲಿ, ಸ್ವಂತದ್ದೆಂದು ತಿಳಿಸಲು ಮನೆಯೊಂದು ಇಲ್ಲದೇ ಇದ್ದ ಕುಂಞಿಕಣ್ಣನ್ ಅವರ ಕುಟುಂಬ ಇಂದು ಸ್ವಂತ ಮನೆಯಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಲಿದ್ದಾರೆ.
ಕಿತ್ತು ತಿನ್ನುವ ಬಡತನದ ನಡುವೆ ಕೂಲಿ ಕಾರ್ಮಿಕನಾಗಿ ಬದಕುತ್ತಿದ್ದ ಕುಂಞಿಕಣ್ಣನ್ ಅದೊಂದು ದಿನ ಮರದ ಮೇಲಿಂದ ಬಿದ್ದು ಇಡೀ ಶರೀರ ನಿಸ್ತೇಜವಾದಾಗ, ಮಡದಿ ಬಿಂದು ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿದ್ದ ಇವರ ಕುಟುಂಬ ಅಕ್ಷರಶ: ಕಂಗೆಟ್ಟಿತ್ತು. ಕುಂಞಿಕಣ್ಣನ್ ಪೂರ್ಣರೂಪದಲ್ಲಿ ಹಾಸುಗೆ ಹಿಡಿಯಬೇಕಾಗಿ ಬಂದಾಗ, ಇದ್ದ ಕನಿಷ್ಠ ಆದಾಯವೂ ಈ ವೇಳೆ ಮೊಟಕುಗೊಂಡಾಗ ಒಂದೆಡೆ ಉಪವಾಸ, ಇನ್ನೊಂದೆಡೆ ತಲೆ ಮೇಲೊಂದು ಸುರಕ್ಷಿತ ಸೂರು ಇಲ್ಲದಿರುವ ವಿಚಾರ ಈ ಕುಟುಂಬವನ್ನು ಬೇಟೆಯಾಡುತ್ತಿತ್ತು.
ಈ ವೇಳೆ ಆಶಾಕಿರಣವೊಂದು ಕಾಣಿಸಿದ್ದು, ಸ್ಥಳೀಯ ನವೋದಯ ಜವಾಹರ್ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಈಗಿನ ವಿದ್ಯಾರ್ಥಿಗಳು ಜತೆ ಸೇರಿ, ಪೆರಿಯ ಗ್ರಾಮ ಕಚೇರಿ ಅ ಧಿಕಾರಿ ಅವರ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಸಹಾಯದೊಂದಿಗೆ 5 ಸೆಂಟ್ಸ್ ಜಾಗ ಪತ್ತೆಮಾಡಿ, ಇಲಾಖೆಯ ವಿಶೇಷ ನಿಧಿ ಬಳಸಿ 6 ಲಕ್ಷ ರೂ. ವೆಚ್ಚದಲ್ಲಿ ಸುದೃಢ ನಿವಾಸವೊಂದನ್ನು ನಿರ್ಮಿಸಿ ನೀಡಲಾಗಿದೆ. ಬದುಕಿನ ಆಕಸ್ಮಿಕ ಆಘಾತದ ನಡುವೆಯೂ ಸಾಂತ್ವನ ಸ್ಪರ್ಶವೊಂದು ಲಭಿಸಿದ ಹಿನ್ನೆಲೆಯಲ್ಲಿ ಈ ಕುಟುಂಬದಲ್ಲಿ ಈಗ ಸಮಾಧಾನದ ನಿಟ್ಟುಸಿರು ಕಾಣಿಸಿಕೊಂಡಿದೆ.
ಕೀಲಿಕೈ ಹಸ್ತಾಂತರ : ಈ ಸಂಬಂಧ ಉರುಳ್‌ಕೋಡಿಯಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಕುಂಞಿಕಣ್ಣನ್ ಅವರ ಕುಟುಂಬಕ್ಕೆ ನೂತನ ಮನೆಯ ಕೀಲಿಕೈ ಹಸ್ತಾಂತರ ನಡೆಸಿದರು. ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ಪುಲ್ಲೂರು-ಪೆರಿಯ ಗ್ರಾ. ಪಂ. ಉಪಾಧ್ಯಕ್ಷ ಪಿ.ಕೃಷ್ಣನ್, ನವೋದಯ ವಿದ್ಯಾಲಯ ಪ್ರಾಂಶುಪಾಲ ವಿಜಯಕೃಷ್ಣನ್, ಪೆರಿಯ ಗ್ರಾಮ ಕಚೇರಿ ಅ ಧಿಕಾರಿ ಕೆ.ರಾಜನ್, ಕೇರಿಯ ಮುಖಂಡ ನಾರ್ಕಳನ್, ಶಶಿಧರನ್, ಪಿ.ಸತೀಶನ್ ಉಪಸ್ಥಿತರಿದ್ದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿ ಕಾರಿ ಎ.ಬಾಬು ಸ್ವಾಗತಿಸಿದರು. ಪ್ರಮೋಟರ್ ಜೀನಾ ವಂದಿಸಿದರು.
ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ, ಗ್ರಾಮ ಕಚೇರಿ ಅ ಧಿಕಾರಿ, ಸ್ಥಳೀಯ ಶಾಲೆಯೊಂದರ ಹಳೆ ಮತ್ತು ಇಂದಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಇವರಿಗೆ ಸ್ವಂತ ಮನೆಯೊಂದು ಲಭಿಸಿದೆ. ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್‌ನ ಉರುಳ್‌ಕೋಡಿಯಲ್ಲಿ ಈ ಮನೆ ನಿರ್ಮಿಸಲಾಗಿದೆ.