Advertisement

Karnatak poll: ಮಂಗಳೂರಿನಲ್ಲೊಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣದ ಕನಸು

12:30 PM Apr 05, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗಬೇಕು ಎನ್ನುವ ದಶಕಗಳ ಆಗ್ರಹ, ಒತ್ತಾಯ, ಬೇಡಿಕೆ ಇನ್ನೂ ಈಡೇರಿಲ್ಲ. ತಕ್ಕಮಟ್ಟಿನ ಮೂಲ ಸೌಲಭ್ಯವನ್ನೊಳಗೊಂಡು ಕನಿಷ್ಠ ರಣಜಿ ಪಂದ್ಯ ಆಯೋಜನೆಗೂ ಪೂರಕವಾದ ಮೈದಾನ ಇಲ್ಲಿಲ್ಲ ಎನ್ನುವುದು ಕ್ರಿಕೆಟ್‌ ಪ್ರೇಮಿಗಳ ಅಳಲು.

Advertisement

ಸದ್ಯ ಬೆಂಗಳೂರನ್ನು ಹೊರತು ಪಡಿಸಿ ರಾಜ್ಯದ ಇತರ ನಗರಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿಲ್ಲ. ಆದರೆ ಶಿವಮೊಗ್ಗ, ಹುಬ್ಬಳ್ಳಿ, ಮೈಸೂರಿನಂತಹ ಜಿಲ್ಲೆಗಳಲ್ಲಿ ರಣಜಿ ಪಂದ್ಯಗಳು ಆಯೋಜನೆಗೊಳ್ಳುತ್ತಿವೆ. ಆದರೆ ಮಂಗಳೂರಿಗೆ ಈ ಸೌಭಾಗ್ಯವೂ ಇಲ್ಲ.

ನೆಹರೂ ಮೈದಾನ ನಗರದ ಏಕೈಕ ಕ್ರಿಕೆಟ್‌ ಕ್ರೀಡಾಂಗಣ. ಮಕ್ಕಳಿಗೆ ಕ್ರಿಕೆಟ್‌ ತರಬೇತಿಗೂ ಇದುವೇ ಪ್ರಮುಖ ತಾಣ. ಇಲ್ಲಿ ಜಿಲ್ಲಾ ಮಟ್ಟದ, ಕೆಲವು ಬಾರಿ ಪ್ರಾದೇಶಿಕ ಮಟ್ಟದ ಕ್ರಿಕೆಟ್‌ ಪಂದ್ಯಗಳು ಆಯೋಜನೆಗೊಳ್ಳುತ್ತವೆ. ಮೂರ್ನಾಲ್ಕು ದಶಕಗಳ ಹಿಂದೆ ಈ ಮೈದಾನದಲ್ಲಿ ರಣಜಿ ಪಂದ್ಯಗಳೂ ನಡೆದಿತ್ತು. ಪಣಂಬೂರಿನ ಎನ್‌ಎಂಪಿಎ ಅಧೀನದ ಅಂಬೇಡ್ಕರ್‌ ಕ್ರೀಡಾಂ ಗಣ ದಲ್ಲಿ ಕೆಲವು ಬಾರಿ ಕ್ರಿಕೆಟ್‌ ಪಂದ್ಯಗಳು ಆಯೋಜನೆಗೊಳ್ಳುತ್ತವೆ. ಪ್ರಸ್ತುತ ಖಾಸಗಿಯಾಗಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸುಸಜ್ಜಿತ ಕ್ರೀಡಾಂಗಣ ಹೊರತುಪಡಿಸಿದರೆ ಉಳಿದಂತೆ ನಗರದಲ್ಲಿ ಸುಸಜ್ಜಿತ ಕ್ರಿಕೆಟ್‌ ಮೈದಾನ ಇಲ್ಲ.
1999ರಲ್ಲೇ ಕರ್ನಾಟಕ ಕ್ರಿಕೆಟ್‌ ಅಸೋಸಿ ಯೇಶನ್‌ ಮಂಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್‌ ಮೈದಾನ ನಿರ್ಮಿಸುವ ಪ್ರಸ್ತಾವವನ್ನು ದ.ಕ. ಜಿಲ್ಲಾಡಳಿತದ ಮುಂದಿರಿಸಿತ್ತು. 15 ಎಕ್ರೆ ಜಾಗ ವನ್ನು ಜಿಲ್ಲಾಡಳಿತ ನೀಡಿದರೆ ಮೈದಾನ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುವು ದಾಗಿ ತಿಳಿಸಿತ್ತು. ಪ್ರಸ್ತಾವ ಮುಂದಿರಿಸಿ 24 ವರ್ಷ ಗಳಾಗಿವೆ. ಆದರೂ ಸಾಕಾರ ರೂಪ ಪಡೆಯಲಿಲ್ಲ!

2002ರಲ್ಲಿ ಪಿಲಿಕುಳದ ಪ್ರಸ್ತುತ ಇರುವ ಗಾಲ್ಫ್ ಮೈದಾನದಲ್ಲಿ ಕ್ರಿಕೆಟ್‌ ಸ್ಟೇಡಿಯಂ ಹಾಗೂ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣದ ಪ್ರಸ್ತಾವ ಕೇಳಿಬಂತು. ಇಲ್ಲಿ 72 ಎಕ್ರೆ ಜಾಗವಿದೆ. ಇದೂ ಮುಂದೆ ಏನೂ ಆಗಲಿಲ್ಲ. ನಗರದ ಇತರೆಡೆಯಲ್ಲಿಯೂ ಸ್ಥಳ ಹುಡುಕಾಟ ನಡೆದಿತ್ತು. ಬೈಕಂಪಾಡಿ, ತಣ್ಣೀರುಬಾವಿ, ಬೊಂದೇಲ್‌, ಕೆಂಜಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಬಳಿ 30 ಎಕ್ರೆ ಜಾಗವನ್ನು ಕ್ರಿಕೆಟ್‌ ಆಸೋಸಿಯೇಶನ್‌ಗೆ 30 ವರ್ಷಗಳ ಅವಧಿಗೆ ಲೀಸ್‌ಗೆ ನೀಡುವ ಬಗ್ಗೆಯೂ ಮಾತುಗಳು ಕೇಳಿ ಬಂದಿತ್ತು. ಮೇರಿ ಹಿಲ್‌ ನಲ್ಲಿಯೂ ಜಾಗ ಮೀಸಲಿಡುವ ಪ್ರಸ್ತಾವವಿತ್ತು. ಅಂತಿಮವಾಗಿ ಕೊಣಾಜೆಯಲ್ಲಿ ಸುಮಾರು 20 ಎಕ್ರೆ ಜಾಗದಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿ ಸುವ ನಿಟ್ಟಿನಲ್ಲಿ ಮಾತುಕತೆ, ಪತ್ರ ವ್ಯವಹಾರ ಗಳು ನಡೆಯುತ್ತಿದ್ದು, ಇದಾದರೂ ಅಂತಿಮ ವಾಗಲಿ ಎನ್ನುವುದು ಕ್ರಿಕೆಟ್‌ ಪ್ರೇಮಿಗಳ ಆಗ್ರಹ. ಕ್ರೀಡಾಂಗಣ ನಿರ್ಮಾಣವಾದರೆ ವರ್ಷ ದಲ್ಲಿ ಒಂದೆರಡು ಅಂತಾರಾಷ್ಟ್ರೀಯ ಪಂದ್ಯಗಳು ನಡೆದರೂ ನಗರ ವಿಶ್ವಮಟ್ಟದಲ್ಲಿ ಗುರುತಿಸಲ್ಪಡಲಿದೆ.

ಪುತ್ತೂರಿನಲ್ಲೂ ಪ್ರಯತ್ನ
ಈ ನಡುವೆ ಪುತ್ತೂರಿನಲ್ಲೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಯತ್ನ ನಡೆಯುತ್ತಿದೆ. ನಗರ ಸಭಾ ವ್ಯಾಪ್ತಿಯಲ್ಲಿ ಬರುವ ಕಬಕ ಪೆರಿಯತ್ತೋಡಿ ಬಳಿ 23.25 ಎಕ್ರೆ ಜಾಗ ಗುರುತಿಸಲಾಗಿದೆ. ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಹೋಗಿಲ್ಲ.

Advertisement

~ ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next