ಬೆಂಗಳೂರು: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಪ್ರಾದೇಶಿಕತೆಯ “ಅಸ್ಮಿತೆ’ ಹಾಗೂ ಸಮುದಾಯದ “ಬಲ” ನೆಚ್ಚಿಕೊಂಡು ಪ್ರಸಕ್ತ ವಿಧಾನಸಭೆ ಚುನಾ ವಣೆಯಲ್ಲಿ ಹೋರಾಟ ಮಾಡಿದ್ದ ಜೆಡಿಎಸ್‌ಗೆ ಕಿಂಗ್ ಮೇಕರ್ ಆಗುವ ಕನಸು ಭಗ್ನಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಮುಂಚೆಯೇ ಅಭ್ಯರ್ಥಿಗಳನ್ನು ಘೋಷಿಸಿ 123 ಸ್ಥಾನದ ಗುರಿಯೊಂದಿಗೆ ಅಖಾಡಕ್ಕಿಳಿದ ಪಕ್ಷಕ್ಕೆ ಕೇವಲ 19 ಮಂದಿಯನ್ನು ಗೆಲ್ಲಿಸಿಕೊಳ್ಳಲು ಮಾತ್ರ ಶಕ್ತವಾಗಿದೆ. ಎಲ್ಲದಕ್ಕಿಂತ ಮುಖ್ಯ ವಾಗಿ ಭದ್ರಕೋಟೆ ಮಂಡ್ಯ, ರಾಮನಗರ, ತುಮ ಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೆಲೆ ಕಳೆದುಕೊಂಡು ಆಘಾತ ಅನುಭವಿಸುವಂತಾಗಿದೆ.
“ಜಲಧಾರೆ ಯಾತ್ರೆ”: ಹಾಗೂ ಪಂಚರತ್ನ ಕಾರ್ಯಕ್ರಮಗಳು ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತರುವ ಮೂಲಕ ಪಕ್ಷಕ್ಕೆ ಅಧಿಕಾರ ತಂದುಕೊಡಲಿದೆ ಎಂಬ ಆತ್ಮವಿಶ್ವಾಸವನ್ನು ನಾಯಕರು ಹೊಂದಿದ್ದರು.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಮಡಿಕೇರಿ ಭಾಗವೂ “ಶಕ್ತಿ” ತುಂಬಲಿಲ್ಲ. ರಾಜಧಾನಿ ಬೆಂಗಳೂರಿನ ಇಪ್ಪತ್ತೆಂಟು ಹಾಗೂ ಗ್ರಾಮಾಂತರ ಜಿಲ್ಲೆಯ ನಾಲ್ಕು ಸೇರಿ 32 ಕ್ಷೇತ್ರಗಳಲ್ಲಿ ಜೆಡಿಎಸ್ ಒಂದರಲ್ಲಿಯೂ ಗೆಲ್ಲದಿರುದುವುದು ಆಘಾತವಾಗಿದೆ. ಕಾಂಗ್ರೆಸ್, ಬಿಜೆಪಿಗೆ ಹೋಲಿಸಿದರೆ ಮಂಡ್ಯ, ಶ್ರೀರಂಗ ಪಟ್ಟಣ, ಯಾದಗಿರಿ, ತುಮಕೂರಿನಲ್ಲಿ ಹೊರತುಪಡಿಸಿ ಜೆಡಿಎಸ್‌ಗೆ ದೊಡ್ಡ ಮಟ್ಟದ ಬಂಡಾಯವೂ ಇರಲಿಲ್ಲ. ಆದರೂ ನಿರೀಕ್ಷಿತ ಸ್ಥಾನ ಪಡೆಯಲು ಆಗ ಲಿಲ್ಲ. ಬೇರೆ ಪಕ್ಷಗಳಿಗೆ ಹೋದವರನ್ನು ಸೋಲಿಸಬೇಕು ಎಂಬ ಹಠವೂ ಫಲ ನೀಡಲಿಲ್ಲ.
ಅರಸೀಕೆರೆಯಲ್ಲಿ ಶಿವಲಿಂಗೇಗೌಡ, ಗುಬ್ಬಿಯಲ್ಲಿ ಎಸ್.ಆರ್.ಶ್ರೀನಿವಾಸ್, ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಗೆಲುವು ತಡೆಯಲು ಆಗಿಲ್ಲ. ಮಾಗಡಿಯಲ್ಲಿ ಬಾಲಕೃಷ್ಣ, ನಾಗ ಮಂಗಲದಲ್ಲಿ ಚೆಲುವರಾಯ ಸ್ವಾಮಿ, ಶ್ರೀರಂಗಪಟ್ಟಣದಲ್ಲಿ ರಮೇಶ ಬಂಡಿಸಿದ್ದೇಗೌಡರನ್ನು ಸೋಲಿಸುವ “ಗುರಿ”ಯೂ ಈಡೇರಲಿಲ್ಲ.
ಚಾಮುಂಡೇಶ್ವರಿ, ಹುಣಸೂರಿನಲ್ಲಿ ಜಿ.ಟಿ.ದೇವೇಗೌಡ-ಹರೀಶ್‌ಗೌಡ ಗೆಲುವು ಸಾಧಿಸಿದರೂ ಇತ್ತ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದರೂ ರಾಮನಗರದಲ್ಲಿ ಪುತ್ರ ನಿಖೀಲ್‌ಗೆ ಗೆಲುವು ದಕ್ಕದಿರುವುದು, ರಾಮನಗರ ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿರುವುದು ಹಿನ್ನೆಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಹಾಸನ ಮಾತ್ರ: ಸಕಲೇಶಪುರ, ಬೇಲೂರು ಹೊರತುಪಡಿಸಿ ಜಿದ್ದಾಜಿದ್ದಿಯ ಹಾಸನದಲ್ಲಿ ಸ್ವರೂಪ್ ಗೆಲ್ಲಿಸಿಕೊಂಡ ಎಚ್.ಡಿ.ರೇವಣ್ಣ-ಭವಾನಿ ಹೊಳೇನರಸೀಪುರ, ಅರಕಲಗೂಡು, ಶ್ರವಣಬೆಳಗೊಳದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು, ಜಿಲ್ಲೆಯ ಮಟ್ಟಿಗೆ ಹಿಡಿತ ಮುಂದುವರಿಸಿದ್ದಾರೆ.
ಎಚ್.ಡಿ.ದೇವೇಗೌಡರು ತುಮಕೂರಿನಲ್ಲಿ ತಮ್ಮನ್ನು ಸೋಲಿಸಿ ಕಣ್ಣೀರು ಹಾಕಿಸಿದವರಿಗೆ ಕಣ್ಣೀರು ಹಾಕಿಸಿ ಎಂದಿದ್ದರು. ಕೊರಟಗೆರೆ, ಶಿರಾ, ಮಧುಗಿರಿ ಯಲ್ಲಿ ಲಾಭ ತಂದುಕೊಡುವ ನಿರೀಕ್ಷೆಯಿತ್ತಾದರೂ ಹುಸಿಯಾಗಿದೆ. 2008 ರಲ್ಲಿ 28, 2013 ರಲ್ಲಿ 40, 2018 ರಲ್ಲಿ 37 ಸ್ಥಾನ ಪಡೆದಿದ್ದ ಜೆಡಿಎಸ್ 2023 ರಲ್ಲಿ 19 ಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಜಿಗಿತವೀರರಿಗೆ ಸೋಲು
ಟಿಕೆಟ್ ವಂಚಿತರಾಗಿ ಜೆಡಿಎಸ್ ಸೇರಿದ್ದ ರಘು ಆಚಾರ್, ಸೂರ್ಯಕಾಂತ ನಾಗಮಾರಪಲ್ಲಿ, ಅನಿಲ್ ಲಾಡ್, ಮಾಲಕರೆಡ್ಡಿ, ಮನೋಹರ ತಹಸೀಲ್ದಾರ್, ನೇಮಿರಾಜ್ ನಾಯ್ಕ, ಆಯನೂರು ಮಂಜುನಾಥ್, ಘೋಕ್ಲೃಕರ್,ಭಾರತೀ ಶಂಕರ್, ದೊಡ್ಡಪ್ಪಗೌಡ ನರಿಬೋಳ್, ಗುರುಪಾಟೀಲ್ ಶಿರವಾಳ್, ಎಂ.ಪಿ.ಕುಮಾರಸ್ವಾಮಿ, ಸಿ.ವಿ.ಚಂದ್ರಶೇಖರ್, ಡಾ.ದೇವರಾಜ್ ಸೇರಿ ಜಿಗಿತ ವೀರರು ಯಾರೂ ಜಯ ತಂದುಕೊಟ್ಟಿಲ್ಲ.
~ ಎಸ್.ಲಕ್ಷ್ಮೀನಾರಾಯಣ