ಹತ್ತಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿರುವವರು, ಹತ್ತಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಅನುಭವ ಪಡೆದವರೇ ಚಿತ್ರವೊಂದನ್ನು ನಿರ್ದೇಶಿಸಲು ಹರಸಾಹಸ ಪಡುವಾಗ ಹದಿಮೂರರ ಪೋರಿಯೊಬ್ಬಳು ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾಳೆ. ಅಂದಹಾಗೆ, ಆ ಪೋರಿಯ ಹೆಸರು ಹಾರ್ದಿಕ. ಚಿತ್ರದ ಹೆಸರು “ಸುವ್ವಾಲಿ’
ಬಾಲ್ಯದಿಂದಲೂ ಚಿತ್ರ ನಿರ್ದೇಶನ ಮತ್ತು ನಟನೆಯ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಹಾರ್ದಿಕ, ಈ ಹಿಂದೆ ಎರಡು ಕಿರುಚಿತ್ರ ನಿರ್ದೇಶಿಸಿ ಮೆಚ್ಚುಗೆ ಪಡೆದುಕೊಂಡಿದ್ದಳು. ಇದೀಗ ಸದ್ದಿಲ್ಲದೆ “ಸುವ್ವಾಲಿ” ಎಂಬ ಮಕ್ಕಳ ಚಿತ್ರ ನಿರ್ದೇಶಿಸಿದ್ದಾಳೆ. ಇನ್ನು ಹೆಸರೇ ಹೇಳುವಂತೆ “ಸುವ್ವಾಲಿ’ ಅಪ್ಪಟ ಮಕ್ಕಳ ಚಿತ್ರ. ಇನ್ನೊಂದು ವಿಶೇಷವೆಂದರೆ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ವಿಷಯವನ್ನು ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ.
ಕೆಲವು ಅನಾಥ ಮಕ್ಕಳು ತಮ್ಮ ಸಿಗಬೇಕಾದ ಹಕ್ಕು ಮತ್ತು ಸೌಲಭ್ಯ ಪಡೆಯಲು ಹೋರಾಟಕ್ಕಿಳಿಯುತ್ತಾರೆ. ತಮ್ಮ ಹೋರಾಟಕ್ಕೆ ನಿರೀಕ್ಷಿತ ಫಲ ಸಿಗದಿದ್ದಾಗ, ತಮ್ಮ ಮನವಿಯನ್ನು ನರೇಂದ್ರ ಮೋದಿ ಅವರಿಗೆ ತಲುಪಿಸಿದರೆ, ಅವರಿಂದ ಪರಿಹಾರ ಸಿಗಬಹುದು ಎಂಬ ಉದ್ದೇಶದಿಂದ ಈ ಮಕ್ಕಳು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಿರ್ಧರಿಸುತ್ತಾರೆ. ಅಂತಿಮವಾಗಿ ಈ ಮಕ್ಕಳು ಮೋದಿ ಅವರನ್ನು ಭೇಟಿಯಾಗುತ್ತಾರಾ? ಇಲ್ಲವಾ? ಎಂಬುದೇ ಚಿತ್ರದ ಕಥಾಹಂದರ.
“ಸುವ್ವಾಲಿ’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ಬಾಲ ನಿರ್ದೇಶಕಿಯ ಚೊಚ್ಚಲ ಚಿತ್ರವನ್ನು ಮೆಚ್ಚಿ ಯಾವುದೇ ಕಟ್ಸ್ ಇಲ್ಲದೆ “ಯು’ ಪ್ರಮಾಣ ಪತ್ರ ನೀಡಿದೆ. “ಸುವ್ವಾಲಿ’ ಚಿತ್ರವನ್ನು ಹಾರ್ದಿಕ ನಿರ್ದೇಶಿಸುವುದರ ಜೊತೆಗೆ ಮುಖ್ಯ ಪಾತ್ರವೊಂದಕ್ಕೆ ಬಣ್ಣವನ್ನೂ ಹಚ್ಚಿದ್ದಾಳೆ. ಉಳಿದಂತೆ ಚಿರಾಗ್, ಸೋನುಶ್ರೀ, ಯಶಸ್, ಅಭಯ್, ಐಶ್ವರ್ಯಾ ಮುಖ್ಯ ಮಂಜುನಾಥ್, ಜ್ಯೋತಿ ಇತರರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಲೋಕಿ ಸಂಗೀತ ಸಂಯೋಜಿಸಿದ್ದಾರೆ. ಸಿರಾಜ್ ಮಿಜಾರ್ ಮತ್ತು ರವಿ ಸಾಸನೂರು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜೇಶ್ ಕೃಷ್ಣನ್, ನವೀನ್ ಸಜ್ಜು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರದ ದೃಶ್ಯಗಳಿಗೆ ಮಂಜೇಶ್ ಗೌಡ ಮತ್ತು ರಾಜು ಆಚಾರ್ಯ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಶ್ರೀರಾಮ್ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಹಿಂದೆ ಆರಂಭವಾದ ಈ ಚಿತ್ರವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಶ್ರೀರಾಮ್ ಬಾಬು ನಿರ್ಮಾಪಕರಾಗಿ, ರಾಜರಾಜೇಶ್ವರಿ ಸಹ ನಿರ್ಮಾಪಕಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ ಈ ತಿಂಗಳ ಕೊನೆಗೆ ಹಾಡುಗಳು ಬಿಡುಗಡೆಯಾಗಲಿದ್ದು, ಮೇ ವೇಳೆಗೆ ಬಿಡುಗಡೆಯಾಗಲಿದೆ.