Advertisement

ಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

12:57 AM Oct 17, 2021 | Team Udayavani |

ದಾವಣಗೆರೆ: ಸದ್ಯದಲ್ಲೇ ರಾಜ್ಯದ ಜನರ ಮನೆ ಬಾಗಿಲಿಗೇ ಪಡಿತರ, ಆರೋಗ್ಯ ಸೇವೆ, ಪಿಂಚಣಿ ಸಹಿತ ಸರಕಾರದ ವಿವಿಧ ಕಾರ್ಯಕ್ರಮಗಳು ತಲುಪಲಿವೆ. ನ. 1ರಿಂದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಲಿದ್ದು, ಜ. 26ರಿಂದ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಶನಿವಾರ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಮತ್ತು “ಗ್ರಾಮ ವಾಸ್ತವ್ಯ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿ ಅವರು ಮಾತನಾಡಿದರು. ಜನರ ಮನೆಯ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಾಮಾಜಿಕ ಸೌಲಭ್ಯ ಒದಗಿಸಲಿದ್ದಾರೆ. ಸರಕಾರವೇ ನಿಮ್ಮ ಮನೆಯ ಬಾಗಿಲಿಗೆ ಬಂದು ಸೇವೆ ಒದಗಿಸಲಿದೆ ಎಂದರು.

ಜನರು ನಮಗೆ ನೀಡಿದ ಅಧಿಕಾರವನ್ನು ಅವರಿಗೆ ಸವಲತ್ತು ಒದಗಿಸು ವುದಕ್ಕೆ ಬಳಸಿಕೊಳ್ಳುವುದಕ್ಕಾಗಿ ಸರಕಾರವು “ನಿಮ್ಮ ಅಧಿಕಾರ ನಿಮ್ಮ ಕೈಯಲ್ಲಿ’ ಎಂಬ ತತ್ವದಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಕಂದಾಯ ಸಚಿವರು ಗ್ರಾಮದಲ್ಲೇ ವಾಸ್ತವ್ಯ ಹೂಡುವಂತಹ ವಿನೂತನ ಕಾರ್ಯಕ್ರಮ ನಡೆದಿಲ್ಲ ಎಂದರು.

ಪಡಿತರವೂ ಮನೆಗೆ
ಜ. 26ರಿಂದ ಪಡಿತರವನ್ನು ಮನೆ ಮನೆಗೆ ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಮೃತ ಯೋಜನೆಯಡಿ ಪ್ರತೀ ಕ್ಷೇತ್ರದಲ್ಲಿ 4-5 ಗ್ರಾಮ ಆಯ್ಕೆ ಮಾಡಿ, ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಮುಂದೆ ಪ್ರತೀ ಕ್ಷೇತ್ರದಲ್ಲಿ 8 ಗ್ರಾ.ಪಂ.ಗಳನ್ನು ಆಯ್ಕೆ ಮಾಡುವ ಗುರಿ ಇದೆ. ಅಮೃತ ಯೋಜನೆ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಸರಕಾರ ಒತ್ತು ನೀಡಲಿದೆ ಎಂದರು.

ಇದನ್ನೂ ಓದಿ: ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

Advertisement

ರಾಜ್ಯಾದ್ಯಂತ ಗ್ರಾಮ ವಾಸ್ತವ್ಯ
ಕಂದಾಯ ಸಚಿವ ಆರ್‌. ಅಶೋಕ್‌ ಕುಂದೂರು ಗ್ರಾಮಕ್ಕೆ ಆಗಮಿಸಿ ಪಿಂಚಣಿ, ಆರ್‌ಟಿಸಿ, ಇತರ ಸವಲತ್ತು ವಿತರಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಿ ಇಲ್ಲಿಯೇ ವಾಸ್ತವ್ಯ ಹೂಡುತ್ತಿರುವುದು ವಿನೂತನ ಕಾರ್ಯಕ್ರಮ. ಗ್ರಾಮ ವಾಸ್ತವ್ಯದ ಮೂಲಕ ಹೊನ್ನಾಳಿ ಯನ್ನು ಮಾದರಿ ತಾಲೂಕು ಮಾಡ ಲಾಗುವುದು. ರಾಜ್ಯದ ಎಲ್ಲ ತಾಲೂಕು ಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು.

ಸದ್ಯವೇ ಕೋವಿಡ್‌ ನಿಯಮ ಸರಳ
ರಾಜ್ಯದಲ್ಲಿ ಕೋವಿಡ್‌ ಕಡಿಮೆ ಆಗಿದೆ. ತಜ್ಞರ ಜತೆ ಚರ್ಚಿಸಿ ಇನ್ನೆರಡು ದಿನಗಳಲ್ಲಿ ಕೋವಿಡ್‌ ನಿಯಮಗಳನ್ನು ಸರಳಗೊಳಿಸ ಲಾಗುವುದು ಎಂದು ಸಿಎಂ ಹೇಳಿದರು.

ಡಿ.ಸಿ.ಗಳ ಗ್ರಾಮ ವಾಸ್ತವ್ಯಕ್ಕೆ ಮರುಚಾಲನೆ
ಕೋವಿಡ್‌ದಿಂದ ಸ್ಥಗಿತಗೊಂಡಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಮತ್ತೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಮರಮುಟ್ನೂರು ಮತ್ತು ಅಮರಪಟ್ನೂರು ಗ್ರಾಮದಲ್ಲಿ ಹಾಗೂ ಉಡುಪಿ ಜಿಲ್ಲೆಯ ಜಡ್ಕಲ್‌ ಗ್ರಾಮದಲ್ಲಿ ಶನಿವಾರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next